Advertisement

ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ

05:36 PM Oct 31, 2019 | Naveen |

ಹುಮನಾಬಾದ: ಅಜ್ಞಾನದಿಂದ ಜ್ಞಾನದತ್ತ, ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ದು ಸಾರ್ವಜನಿಕರ ವ್ಯಕ್ತಿತ್ವ ರೂಪಿಸಬೇಕಾದ ಚಿಟಗುಪ್ಪ ತಾಲೂಕು ಕೇಂದ್ರ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಸೌಲಭ್ಯ ದೂರದ ಮಾತು.

Advertisement

ಇರುವ ಬಾಡಿಗೆ ಕಟ್ಟಡದಲ್ಲೂ ಸೂಕ್ತ ನಿರ್ವಹಣೆ ಜತೆಗೆ ಓದಲು ಉತ್ತಮ ಪರಿಸರವಿಲ್ಲದ ಕಾರಣ ಓದುಗರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಪಟ್ಟಣದ ಹಳೆ ಬಸ್‌ ನಿಲ್ದಾಣದಿಂದ ಮುಖ್ಯ ಮಾರುಕಟ್ಟೆಗೆ ತೆರಳುವ ಮಾರ್ಗಮಧ್ಯೆ ಖಾಸಗಿ ಸಂಸ್ಥೆಯೊಂದು ಮಳಿಗೆ ಒಂದರಲ್ಲಿ 1980ರ ಆಸುಪಾಸಿನಿಂದ ಬಸವೇಶ್ವರ ಹೆಸರಲ್ಲಿ ಗ್ರಂಥಾಲಯ ನಡೆಸುತ್ತಿತ್ತು.

ಓದುವವರ ಸಂಖ್ಯೆಯೂ ಆಗ ಉತ್ತಮವಾಗಿತ್ತು. ಚಿಕ್ಕ ಪಟ್ಟಣ ಆಗಿದ್ದರಿಂದ ಸಾಕಷ್ಟು ಸಂಖ್ಯೆ ಪುರುಷ-ಮಹಿಳಾ ಓದುಗರು ಪ್ರತಿನಿತ್ಯ ಓದಲು ಬರುತ್ತಿದ್ದರು. ಇದನ್ನು ಮನಗಂಡ ಜಿಲ್ಲಾ ಕೇಂದ್ರ ಗ್ರಂಥಾಲಯ ಈ ಗ್ರಂಥಾಲಯ ನಿರ್ವಹಣೆಯನ್ನು 1990ರ ಸುಮಾರಿಗೆ ತನ್ನ ಸುಪರ್ದಿಗೆ ತೆಗೆದುಕೊಂಡು ಕನ್ನಡ, ಹಿಂದಿ, ಮರಾಠಿ, ಉರ್ದು ದಿನಪತ್ರಿಕೆಗಳನ್ನು ಚಾಚೂ ತಪ್ಪದೇ ಪೂರೈಸಿ ಓದುಗುರ ಪ್ರೀತಿಗೆ ಪಾತ್ರವಾಗಿತ್ತು.

ರಸ್ತೆ ವಿಸ್ತರಣೆ: 2008-09ನೇ ಸಾಲಿನಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ರಸ್ತೆ ವಿಸ್ತರಣೆ ವೇಳೆ ಕೈಗೊಂಡ ಸಂದರ್ಭದಲ್ಲೇ ಚಿಟಗುಪ್ಪ ಪಟ್ಟಣದ ಪ್ರಮುಖ ರಸ್ತೆಗಳನ್ನು ವಿಸ್ತರಿಸಲಾಯಿತು. ಮಾರುಕಟ್ಟೆ ಮಧ್ಯದಲ್ಲಿದ್ದ ಕಾರಣ ಇನ್ನುಳಿದ ಕಟ್ಟಡಗಳ ಜತೆಗೆ ಬಸವೇಶ್ವರ ಗ್ರಂಥಾಲಯ ಕಟ್ಟಡವನ್ನು ಸಹ ನೆಲಸಮಗೊಳಿಸಲಾಗಿತ್ತು.

Advertisement

ತದನಂತರ ಓದುಗರ ನಿರಂತರ ಒತ್ತಾಯಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯ 2010ರಲ್ಲಿ ಪಟ್ಟಣದ ಡಿಸಿಸಿ ಬ್ಯಾಂಕ್‌ ಶಾಖೆ ಮುಂಭಾಗದಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ ಆರಂಭಿಸಿ ಒಬ್ಬ ಗ್ರಂಥಾಲಯ ಸಹಾಯಕ ಸಿಬ್ಬಂದಿ ನಿಯೋಜಿಸಿತು.

ಅಯೋಗ್ಯ ಸ್ಥಳ: ಈಗಿರುವ ಬಾಡಿಗೆ ಕಟ್ಟಡ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿನ ಮನೆ ಇದ್ದು. ದೊಡ್ಡ ಕಟ್ಟಡ ಎಡ ಮತ್ತು ಬಲಬದಿಗೆ ವಾಣಿಜ್ಯ ಮಳಿಗೆಗಳಿವೆ. ಮಧ್ಯದಲ್ಲಿದ್ದ ಮನೆಯನ್ನೇ ಗ್ರಂಥಾಲಯಕ್ಕಾಗಿ ಬಳಸಿಕೊಳ್ಳಲಾಗಿದೆ. ಓದುವುದಕ್ಕೆ ಪ್ರಶಾಂತ ವಾತಾವರಣ, ಸ್ವಚ್ಛತೆ ಅತ್ಯಂತ ಅವಶ್ಯ. ಆದರೇ ಈ ಗ್ರಂಥಾಲಯದಲ್ಲಿ ಇವು ಯಾವು ಇಲ್ಲ. ಮಾರುಕಟ್ಟೆಯಲ್ಲಿ ಇರುವ ನಿರಂತರ ಸಂಚರಿಸುವ ವಾಹನಗಳ ಸದ್ದು, ರಸ್ತೆ ಇಡೀ ಧೂಳು ಗ್ರಂಥಾಲಯ ಪ್ರವೇಶಿಸುವ ಕಾರಣ ಅಲ್ಲಿರುವ ಬಹುತೇಕ ಪುಸ್ತಕ ಕೈ ಹಿಡಿದರೆ ಧೂಳು ತಾಕದೇ ಇರದು.

ಗ್ರಂಥಾಲಯ ಸಹಾಯಕರು ಕುಳಿತುಕೊಳ್ಳುವ ಕೊಠಡಿ ಗೋಡೆ ಜಾಡುಗಟ್ಟಿದೆ. ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕನಿಷ್ಠ ಕಾರ್ಯ ನಡೆಯದೇ ಇರುವುದು ಓದುಗರನ್ನು ಗ್ರಂಥಾಲಯ ಪ್ರವೇಶಿದಂತೆ ಮಾಡಿದೆ. ಇದರ ಹೊರತು ಅನ್ಯ ಮಾರ್ಗವೇ ಇಲ್ಲದೇ ವಿವಿಧ ಭಾಷೆ ದಿನಪತ್ರಿಕೆಗಳನ್ನು ಓದಲು ನಿತ್ಯ 20-25ಜನ ಮಾತ್ರ ಬರುತ್ತಾರೆ.

ಮೂಲ ಸೌಕರ್ಯವಿಲ್ಲ: ನಿಸರ್ಗದತ್ತ ಬಳಕೆ, ಕುಡಿಯುವ ನೀರು, ವಿದ್ಯುತ್‌ ಕೈಕೊಟ್ಟರೇ ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದ ಗ್ರಂಥಾಲಯ ಮುಚ್ಚಬೇಕಾದ ಅನಿವಾರ್ಯತೆ ಇದೆ. ಯಾವೊದೋ ಕಾಲದಲ್ಲಿ ಬಂದ ಹಳೆ ಪುಸ್ತಕಗಳನ್ನು ಹೊರತುಪಡಿಸಿದರೇ ಹೊಸ ಪುಕ್ತಗಳು ನೋಡಲು ಸಿಗುವುದು ದುರ್ಲಭ.

ಸ್ಪರ್ಧಾತ್ಮಕ ಯುಗವಾದ ಈಗ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಬೇಕಾಗುವ ಪುಸ್ತಕಗಳು ಪೂರೈಸಬೇಕು. ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನರ್ಜನೆಗಾಗಿ ಸಹಾಯಕ ಗ್ರಂಥಗಳನ್ನು ಪೂರೈಸಬೇಕು ಎಂಬುದು ಚಿಟಗುಪ್ಪ ನಿವಾಸಿಗಳ ಒತ್ತಾಸೆ.

Advertisement

Udayavani is now on Telegram. Click here to join our channel and stay updated with the latest news.

Next