ಹುಮನಾಬಾದ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಸ್ವಾಗತಾರ್ಹ. ಆದರೆ ಇದು ಕೇವಲ ಹೆಸರು ಬದಲಾವಣೆಗೆ ಮಾತ್ರ ಸೀಮಿತಗೊಳ್ಳದೇ ಈ ಭಾಗದ ಸಮಗ್ರ ಕಲ್ಯಾಣವಾದಾಗ ಮಾತ್ರ ಅದು ಸಾರ್ಥಕಗೊಳ್ಳಲು ಸಾಧ್ಯ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಪ್ರಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಚ್ಕೆಆರ್‌ಡಿಬಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನನ್ನ ನೇತೃತ್ವದಲ್ಲಿ ಈ ಭಾಗದ 6 ಜಿಲ್ಲೆಗಳ 40 ಶಾಸಕರಿಂದ ಕೂಡಿದ ನಿಯೋಗ ಈ ಹಿಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದಾಗ ಅವರು ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಕಾರಣಾಂತರದಿಂದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಧಿಕೃತ ಘೋಷಣೆಯಾಗಿದೆ. ಅದಕ್ಕೆ ಅಭಿನಂದಿಸುತ್ತೇವೆ ಎಂದರು.
ಕಲ್ಯಾಣ ಕರ್ನಾಟಕ ಹೈದ್ರಾಬಾದ್ ನಿಜಾಮನಿಂದ ಮುಕ್ತಿಗೊಳ್ಳಲು ಪ್ರಾಣತೆತ್ತ ಈ ಭಾಗದ ಅದೆಷ್ಟೋ ಮಂದಿ ರಾಷ್ಟ್ರ ಪ್ರೇಮಿಗಳ ಬದುಕು-ಹೋರಾಟ ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಹೋರಾಟಗಾರರ ಜೀವನ-ಹೋರಾಟವನ್ನು ಪಠ್ಯಕ್ಕೆ ಅಳವಡಿಸುವಂತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವರನ್ನು ಒತ್ತಾಯಿಸುವುದಾಗಿ ತಿಳಿಸಿದರು. ಪಟ್ಟಣದ ಕೋಳಿವಾಡ ಕ್ರಾಸ್‌ನ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ನಿರ್ಮಿಸಲಾದ ಕಟ್ಟೆ ಮೇಲೆ 2020ರ ಕಲ್ಯಾಣ ಕರ್ನಾಟಕ ಉತ್ಸವದಂದು ವಲ್ಲಭಭಾಯಿ ಪಟೇಲರ ಪುತ್ಥಳಿ ಅನಾವರಣಗೊಳಿಸುವುದಾಗಿ ಹೇಳಿದರು.
ಮುಲಾಜಿಲ್ಲದೇ ಕ್ರಮ: ಬಹುತೇಕ ಇಲಾಖೆಗಳ ಅಧಿಕಾರಿಗಳು ಇಂದಿನ ಕಾರ್ಯಕ್ರಮಕ್ಕೆ ಬಾರದೇ ಇರುವುದು ಸರಿಯಲ್ಲ. ನಮ್ಮ ನೆಮ್ಮದಿ ಬದುಕಿಗೆ ಕಾರಣರಾದ ಮಹನೀಯರಿಗೆ ಗೌರವಿಸುವ ಕನಿಷ್ಟ ಸೌಜನ್ಯ ತೋರದವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಇಒ ಅವರು, ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ಮುಲಾಜಿಲ್ಲದೇ ನೊಟೀಸ್ ನೀಡುವಂತೆ ಆದೇಶಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಉಪತಹಶೀಲ್ದಾರ್ ಮತ್ತು ಕಚೇರಿ ಸಿಬ್ಬಂದಿ ವ್ಯಾಪಕ ಭ್ರಷ್ಟಾಚಾರ ಎಸಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬರುತ್ತಿವೆ. ಪರಿಸ್ಥಿತಿ ಬದಲಾಗಿದ್ದರೆ ಎತ್ತಂಗಡಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿರಿಯ ಸಾಹಿತಿ ಎಚ್.ಕಾಶೀನಾಥರೆಡ್ಡಿ ವಿಶೇಷ ಉಪನ್ಯಾಸ ನೀಡಿ, ಹೈದ್ರಾಬಾದ್ ಕರ್ನಾಟಕ ಹೆಸರಿನ ಬದಲಿಗೆ ಕಲ್ಯಾಣ ಕರ್ನಾಟಕ ಎಂದು ಪರಿವರ್ತನೆ ಆಗಿರುವುದು ಉತ್ತಮ ಬೆಳವಣಿಗೆ ಎಂದು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಸದಸ್ಯೆ ಭಾರತೀಬಾಯಿ ಶೇರಿಕಾರ, ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಎಂ.ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ, ಸದಸ್ಯರಾದ ಶ್ರೀಮಂತ ಪಾಟೀಲ, ಪರಮೇಶ್ವರ ಕಳಮದರಗಿ, ಸಿಪಿಐ ಜೆ.ಎಸ್.ನ್ಯಾಮಗೌಡರ್, ಪಟ್ಟಣದ ಪುರಸಭೆ ಸದಸ್ಯ ಅಪ್ಸರಮಿಯ್ಯ ಇನ್ನೂ ಮೊದಲಾದವರು ಇದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನ, ಚಿಣ್ಣರ ಭಾಷಣ ನೆರೆದ ಪ್ರೇಕ್ಷಕರ ಕಣ್ಮನ ಸೆಳೆದವು. ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕ ಡಾ| ಪಿ.ಎಂ.ಮಲ್ಲಿಕಾರ್ಜುನ ನಿರೂಪಿಸಿದರು.