Advertisement

ಕಲಿತ ಕಾಲೇಜಿನ ಋಣ ತೀರಿಸಿದ ವಿದ್ಯಾರ್ಥಿಗಳು

01:26 PM Feb 24, 2020 | Naveen |

ಹುಮನಾಬಾದ: ಈ ಹಿಂದಿನ ಶಿಕ್ಷಣ ಹಾಗೂ ಇಂದಿನ ಶಿಕ್ಷಣದ ವ್ಯವಸ್ಥೆಗಳು ಬದಲಾದಂತೆ ವಿದ್ಯಾರ್ಥಿಗಳು ಕೂಡ ಬದಲಾಗುತ್ತಿದ್ದಾರೆ. ಗುರುಶಿಷ್ಯರ ಮಧ್ಯೆ ಕೂಡ ಅಂತರ ಉಂಟಾಗುತ್ತಿರುವ ಸಂದರ್ಭದಲ್ಲಿ ಕಾಲೇಜು ಮಟ್ಟದಲ್ಲಿ ಗುರುವಂದನೆ ಹಾಗೂ ಸ್ನೇಹಸಮ್ಮೇಳನ ಮಾಡಿರುವುದು ಸಂತಸ ತಂದಿದೆ ಎಂದು ನಿವೃತ್ತ ಪ್ರಾಚಾರ್ಯ ಎಂ.ಆರ್‌. ಬಿರಾಜದಾರ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಬಾಲಕರ ಕಾಲೇಜು (ಜೂನಿಯರ್‌ ಕಾಲೇಜಿನ) 1999-2001ನೇ ಸಾಲಿನಲ್ಲಿ ವಿಜ್ಞಾನ ವಿಭಾಗಗಳು ಸೇರಿ ಪಟ್ಟಣದ ಸರ್ಕಾರಿ ನೌರರ ಭವನದಲ್ಲಿ ಹಮ್ಮಿಕೊಂಡಿದ್ದ “ನನ್ನ ಕಾಲೇಜು ನನ್ನ ಋಣ, ನೀ ಕಲಿತ ಕಾಲೇಜು ಒಮ್ಮೆ ಹಿಂತಿರುಗಿ ನೋಡು’ ಎಂಬ ಶೀರ್ಷಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಧುನಿಕತೆ ಬೆಳೆದಂತೆ ಗುರುವಿಗೆ ಗೌರವಿಸುವ ಕಾರ್ಯ ಕೂಡ ಕಡಿಮೆಯಾಗುತ್ತಿದೆ. ಗುರು ಎಂದರೆ ಆ ಶಾಲಾ, ಕಾಲೇಜಿಗೆ ಮಾತ್ರ ಸೀಮಿತರು ಎಂದು ಗುರುತಿಸಲಾಗುತ್ತಿದೆ. ಶಿಕ್ಷಣ ಮುಗಿದ ನಂತರ ಆ ಶಿಕ್ಷಕರ ಕಡೆ, ಕಾಲೇಜುಗಳ ಕಡೆ ನೋಡುವ ವಿದ್ಯಾರ್ಥಿಗಳ ಸಂಖ್ಯೆ ಅತಿ ಕಡಿಮೆ. ಇಂತಹ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳು ಗುರುವಂದನ ಕಾರ್ಯಕ್ರಮ ನಡೆಸಿರುವುದು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬಹುದು. ಈ ಕಾರ್ಯಕ್ರಮ ಎಲ್ಲ ಉಪನ್ಯಾಸರಕರಿಗೆ ಗೌರವ ತಂದಿದೆ. ನಮ್ಮ ವಿದ್ಯಾರ್ಥಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ಹೇಳಿದರು.

ನಿವೃತ್ತ ಪ್ರಾಚಾರ್ಯ ವೈ.ಆರ್‌. ನಂದಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆ ಮಹತ್ವ ಪಡೆದುಕೊಂಡಿದೆ. ಗುರುಗಳಿಗೆ ಗೌರವ, ಪೂಜ್ಯ ಭಾವನೆ ಇತ್ತು. ಜತೆಗೆ ಗುರುವನ್ನು ಪೂಜಿಸುವ ಸಂಸ್ಕೃತಿ ನಮ್ಮದಾಗಿದೆ. ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ವಿದ್ಯಾರ್ಥಿಗಳ ಕಾರ್ಯ ಮಹತ್ವದಾಗಿದೆ ಎಂದರು.

ಪ್ರಾಚಾರ್ಯ ಅಜೇಂದ್ರ ಸ್ವಾಮಿ ಮಾತನಾಡಿ, ಮೊದಲು ಗುರು ಶಿಷ್ಯರ ನಡುವೆ ಇದ್ದ ಬಾಂಧವ್ಯ, ಪ್ರೀತಿ, ಕೃತಜ್ಞತಾ ಭಾವ ಇಂದು ಇಲ್ಲವಾಗಿದೆ. ಇದಕ್ಕೆ ಶಿಕ್ಷಣ ವ್ಯಾಪಾರೀಕರಣವಾಗಿರುವುದೇ ಕಾರಣ. ಹಣ ಇದ್ದವರು ಖಾಸಗಿ ಕಾಲೇಜಿನ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ, ಪಾಲಕರು ಈ ಹಿಂದೆ ಯಾವ ಕಾಲೇಜುಗಳಲ್ಲಿ ಶಿಕ್ಷಣ ಪಡೆದರು ಎಂಬುದನ್ನು ಮರೆಯಬಾರದು. ಸರ್ಕಾರಿ ಕಾಲೇಜುಗಳು ಎಂದರೆ ಬೇರೆ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇಂದು ಸರ್ಕಾರಿ ಕಾಲೇಜುಗಳಲ್ಲಿ ನುರಿತ ಉಪನ್ಯಾಸಕರು ಸೇವೆ ನೀಡುತ್ತಿದ್ದಾರೆ ಎಂದ ಅವರು, ಇಂದಿನ ವಿದ್ಯಾರ್ಥಿಗಳು ಕಾಲೇಜು ಕೋಣೆಯಲ್ಲಿ ಮಾತ್ರ ಶಿಕ್ಷಕರನ್ನು ಗೌರವಿಸುತ್ತಿರುವ ಪರಿ ನೋವು ಉಂಟುಮಾಡುತ್ತಿದೆ ಎಂದರು.

Advertisement

ಪ್ರಾಚಾರ್ಯ ಪಂಡರಿನಾಥ ಹುಗ್ಗಿ ಮಾತನಾಡಿ, ವಿದ್ಯಾರ್ಥಿಗಳೇ ಶಿಕ್ಷಕರ ನಿಜವಾದ ಸಂಪತ್ತಾಗಿದ್ದು, ಸದ್ಗುಣವುಳ್ಳ ವಿದ್ಯಾರ್ಥಿಗಳು ದೊರೆಯುವುದು ಗುರುಗಳ ಭಾಗ್ಯವಾಗಿದೆ. ನೆನಪುಗಳ ಮಾತು ಮಧುರ ಎನ್ನುವ ಹಾಗೆ ಹಳೆಯ ನೆನಪುಗಳನ್ನು ಮರೆಯದೇ ಎಲ್ಲ ಶಿಕ್ಷಕ ವರ್ಗದವರನ್ನು ಹಾಗೂ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂಡಿಸುವ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿದ್ದ ವಿದ್ಯಾರ್ಥಿಗಳೆಲ್ಲರೂ ಒಂದಾಗಿ 20 ವರ್ಷಗಳ ಹಿಂದೆ ವಿದ್ಯೆ ನೀಡಿದ ಕಾಲೇಜಿನ ಉಪನ್ಯಾಸಕರನ್ನು, ಪ್ರಸಕ್ತ ಕಾಲೇಜಿನಲ್ಲಿ ಉಪನ್ಯಾಸ ಮಾಡುತ್ತಿರುವ ಉಪನ್ಯಾಸಕರನ್ನು ಗೌರವಿಸಿದರು. ನಮ್ಮ ಬದುಕು
ಇಂದು ಹಸನಾಗಿದೆಯೆಂದರೆ ಅದಕ್ಕೆ ನೀವೇ ಕಾರಣ ಎಂದು ಹೇಳುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ವಿದ್ಯಾರ್ಥಿಗಳು ಪ್ರೀತಿಯಿಂದ ಕಲೆತು ಕಳೆದ ಕ್ಷಣಗಳು ನೆರೆದವರ ಕಣ್ಣಾಲಿಗಳು ಖುಷಿಯಿಂದ ಒದ್ದೆಯಾಗುವಂತೆ ಮಾಡಿದ ಪ್ರಸಗ ನಡೆಯಿತು.

ಕೆ.ಎಂ. ಮುಗಳಿ, ಆರ್‌.ಎನ್‌. ಮಾಶೆಟ್ಟಿ, ಶರಣಪ್ಪಾ ರಛಾಳೆ, ಅಂಬಾಜಿ ಜಾಧವ, ಸುಜಾತಾ ಬಿರಾದಾರ, ಪ್ರಭಾವತಿ ಪಾಟೀಲ, ಮಹಾದೇವ ಬಿ., ಚಂದ್ರಕಾಂತ ಗಂಗಶೆಟ್ಟಿ ಮಾತನಾಡಿದರು. ಮಿರ್ಜಾಬೇಗ್‌, ರಮೇಶ ಕಲಶೆಟ್ಟಿ, ಸಂಜು ಮಾಣಿಕನಗರ, ತಿಪ್ಪಣ್ಣಾ ಕೆಂಪೆನೋರ್‌, ಮಲ್ಲಿಕಾರ್ಜುನ ದೊಡ್ಡಮನಿ, ಡಾ| ಶಾಂತಕುಮಾರ ಸಿದ್ದೇಶ್ವರ, ಧುರ್ಯೋಧನ ಹೂಗಾರ, ಮಸ್ತಾನ ಪಟೇಲ್‌, ಸುನಿಲ ಜಾಧವ, ರಾಜಶೇಖರ ಹುಡಗಿ, ಸುಶಿಲ ಸಿಂಗ, ಡಾ| ಪ್ರತ್ವಿàರಾಜ, ಕಂಟೆಪ್ಪಾ ನಾಗಗೊಂಡ, ಜಗನಾಥ ಮೈಲಾರಿ, ರಾಜು ಪಂಚಾಳ, ಸಂಗಮೇಶ ಪಾಟೀಲ, ಗೌರಿಶಂಕರ ಪರ್ತಾಪೂರೆ, ರಾಜೇಶ್ವರಿ ಪಾಟೀಲ, ಪ್ರಾಚಿ, ಶೈಲಶ್ರೀ, ಅಂಬಿಕಾ, ಲಕ್ಷ್ಮೀ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next