Advertisement

ಗುಣಮಟ್ಟವಿರದಿದ್ದರೆ ಕಪ್ಪು ಪಟ್ಟಿಗೆ

06:35 PM Nov 02, 2019 | Naveen |

ಹುಮನಾಬಾದ: ಸರ್ಕಾರದಿಂದ ಬಿಡುಗಡೆಯಾದ
ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿ ಕಳಪೆ ಆಗಿರುವ ಕುರಿತು ಬರುವ ದೂರು ಸತ್ಯ ಎಂಬುದು ಖಚಿತವಾದಲ್ಲಿ ಅಂಥ ಗುತ್ತಿಗೆದಾರರನ್ನು ಮುಲಾಜಿಲ್ಲದೇ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಎಚ್ಚರಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 1.28ಕೋಟಿ ರೂ. ವೆಚ್ಚದ ಎಂಟು ಹೆಚ್ಚುವರಿ ವರ್ಗ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರಿ ಪದವಿ ಕಾಲೇಜು ಇಲ್ಲದ ಸಂದರ್ಭದಲ್ಲಿ
2005ನೇ ಸಾಲಿನಲ್ಲಿ ಶಾಸಕರಾಗಿದ್ದ ದಿ.ಮೆರಾಜುದ್ದಿನ್‌ ಪಟೇಲ ಅವರು ಮಂಜೂರು ಮಾಡಿ ತಂದು ಸರ್ಕಾರದ ಹಳೆ ಕಟ್ಟಡದಲ್ಲೇ ವರ್ಗಗಳು ಆರಂಭಗೊಳ್ಳುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಆ ಅವಧಿಯಲ್ಲಿ ಸರ್ಕಾರದಿಂದ ಯಾವುದೇ ಅನುದಾನ ತಂದಿರಲಿಲ್ಲ.

2018ರಿಂದ ನಿರಂತರ ಶಾಸಕನಾಗಿ ಆಯ್ಕೆಗೊಂಡ ನಂತರ ಈವರೆಗೆ 45 ಕೋಟಿ ರೂ. ಅನುದಾನ ತಂದು ಕಟ್ಟಡ ನಿರ್ಮಾಣ ಆಗುವಂತೆ ನೋಡಿಕೊಂಡಿದ್ದೇನೆ. ಇದೀಗ ಕಾಲೇಜಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ಬೇಡಿಕೆ ಮೇರೆಗೆ ಬಿಡುಗಡೆಗೊಳಿಸಲಾದ 1.28 ಕೋಟಿ ರೂ. ವೆಚ್ಚದ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಿದ್ದೇನೆ ಎಂದರು.

ವಿಪಕ್ಷದ ಟೀಕೆ ಸಹಿಸಲಾಗದು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹುಮನಾಬಾದ ವಿಧಾನಸಭಾ ಕ್ಷೇತ್ರದಾದ್ಯಂತ ಕೈಗೊಳ್ಳುವ ಕಾಮಗಾರಿಗೆ ಶಾಸಕರು ಕೇವಲ ತಮ್ಮ ಕುಟುಂಬ ಸದಸ್ಯರು ಹಾಗೂ ತಮಗೆ ಬೇಕಾದವರಿಗೆ ಗುತ್ತಿಗೆ ಕೊಡಿಸುತ್ತಾರೆ. ಕಾಮಗಾರಿ ಕಳಪೆ ಆದರೂ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವಿಪಕ್ಷದವರು ಅನಗತ್ಯ ಪತ್ರಿಕಾ ಹೇಳಿಕೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಅವರು ಮಾಡುವ ಅರೋಪ ಸತ್ಯವೇ ಆಗಿದ್ದರೆ ಅಗತ್ಯ ದಾಖಲೆಗಳ ಸಮೇತ ಸಾಬೀತುಪಡಿಸಲಿ ಎಂದು ಸೂಚಿಸಿದರು. ವಿಧಾನ ಪರಿಷತ್‌ ಸದಸ್ಯ ಡಾ|ಚಂದ್ರಶೇಖರ ಬಿ.ಪಾಟೀಲ, ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ್ , ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಸದಸ್ಯ ಮನೋಹರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ವೀರಣ್ಣ ತುಪ್ಪದ್‌, ಬಿಇಒ ಶಿವರಾಚಪ್ಪ ವಾಲಿ, ಕಾಂಗ್ರೆಸ್‌ ಮುಖಂಡರಾದ ಡಿ.ಆರ್‌.ಚಿದ್ರಿ, ಮಲ್ಲಿಕಾರ್ಜುನ ಮಾಲಶೆಟ್ಟಿ, ಈಶ್ವರ ಕಲಬುರ್ಗಿ, ಸುರೇಶ ಘಾಂಗ್ರೆ, ಪ್ರಭುರಾವ್‌ ತಾಲಮಡಗಿ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next