Advertisement

ಕಾರ್ಖಾನೆಗೆ ಬೆಂಕಿ ಬಿದ್ದಿದ್ದು ಅಸಹಜವೆ?

10:27 AM Jul 19, 2019 | Naveen |

ಹುಮನಾಬಾದ: ಪಟ್ಟಣ ಹೊರ ವಲಯದ ಆರ್‌ಟಿಒ ಚೆಕ್‌ಪೊಸ್ಟ್‌ ಹತ್ತಿರದ ಕೈಗಾರಿಕಾ ಪ್ರದೇಶದ ಕಾರ್ಖಾನೆವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿವೆ.

Advertisement

ಇಲ್ಲಿನ ಕೈಗಾರಿಕಾ ಪ್ರದೆಶದಲ್ಲಿನ ಓಂ ಎಂಟರ್‌ ಪ್ರೈಜಸ್‌ನಲ್ಲಿ ಸೋಮವಾರ ಬೆಳಗ್ಗೆ ಅಲ್ಪ ಪ್ರಮಾಣದಲ್ಲಿದ್ದ ಅಗ್ನಿಯು ಗಾಳಿಯ ಪರಿಣಾಮ ಕೆನ್ನಾಲಿಗೆ ಚಾಚಿದ್ದರಿಂದ ನೋಡು ನೋಡುತ್ತಲೇ ಸಾರ್ವಜನಿಕರ ಕಣ್ಣೆದುರಿಗೆ ಧಗಧಗನೆ ಉರಿಯತೊಡಗಿತು. ಆದರೆ ಸಕಾಲಕ್ಕೆ ಅಗತ್ಯಕ್ಕೆ ತಕ್ಕಷ್ಟು ಅಗ್ನಿಶಾಮಕ ಸಿಬ್ಬಂದಿ 5ವಾಹನಗಳ ಸಮೇತ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಶೇ.50ರಷ್ಟು ಭಸ್ಮವಾಗಿ ಇನ್ನುಳಿದ ಶೇ.50ರಷ್ಟು ಯಂತ್ರಗಳಿಗೆ ಹಾನಿಯುಂಟಾಗಿತ್ತು.

ಪರವಾನಗಿ ರಹಿತ ಕಾರ್ಖಾನೆ: ಕೆಲವು ವರ್ಷಗಳ ಹಿಂದೆ ರೈಸ್‌ಮಿಲ್ ಆಗಿದ್ದ ಈ ಕಾರ್ಖಾನೆಯನ್ನು ತೆಲಂಗಾಣದ ಹೈದರಾಬಾದ ಮೂಲದ ಎಂ.ಡಿ.ಆಸೀಫ್‌ ಎನ್ನುವವರು 2014ನೇ ಸಾಲಿನಲ್ಲಿ 5ವರ್ಷ ಅವಧಿ ಪರವಾನಗಿಯೊಂದಿಗೆ, ಪೇಂಟಿಂಗ್‌ನಲ್ಲಿ ಮಿಶ್ರಣ ಮಾಡುವ ಟಿನ್ನಲ್ ಹೆಸರಿನ ಬಿಳಿ ದ್ರವ ಉತ್ಪಾದಿಸುತ್ತಿದ್ದರು. ಆದರೆ ಪಡೆದ ಪರವಾನಗಿಯ ಅವಧಿಯು 2019ರ ಜನವರಿ ತಿಂಗಳಲ್ಲೇ ಪೂರ್ಣಗೊಂಡಿದ್ದರೂ ಅದನ್ನು ನವೀಕರಿಸಿಕೊಂಡಿರಲಿಲ್ಲ.

ಸುರಕ್ಷತೆ ಕೊರತೆ: ಎಲ್ಲಕ್ಕೂ ಮುಖ್ಯವಾಗಿ ಒಂದು ಕಾರ್ಖಾನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ಹಾನಿಯಿಂದ ಬಚಾವ್‌ ಆಗಲು ಅಗತ್ಯ ಸೌಲಭ್ಯ ಇರಲೇಬೇಕು. ಕಾರ್ಖಾನೆಯಲ್ಲಿ ಯಾರೊಬ್ಬ ಕಾರ್ಮಿಕರಿಗೆ ಸುರಕ್ಷತಾ ಕವಚ ಸೇರಿದಂತೆ ಕಾರ್ಮಿಕರಿಗೆ ಯಾವುದೇ ಮೂಲಸೌಲಭ್ಯ ಇರಲ್ಲದಿರುವುದು ಅಧಿಕಾರಿಗಳ ತಂಡ ನಡೆಸಿದ ಪರಿಶೀಲನೆ ವೇಳೆ ಗಮನಕ್ಕೆ ಬಂದಿತ್ತು.

ಕಾರ್ಖಾನೆ ವ್ಯಾಪ್ತಿ ಒಳಗೆ ಮತ್ತು ಮುಂಭಾಗದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಲು ಎಲ್ಲ ಕಾರ್ಖಾನೆ ಮತ್ತು ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ಪೊಲೀಸರು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಆದರೂ ಈ ಕಾರ್ಖಾನೆಯಲ್ಲಿ ಇದನ್ನು ಪಾಲಿಸದಿರುವುದು, ಅಗ್ನಿಅವಘಡ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌, ಡಿವೈಎಸ್ಪಿ ಅವರ ಗಮನಕ್ಕೆ ಬಂದಿದೆ. ಅಲ್ಲಿ ಕ್ಯಾಮೆರಾ ಅಳವಡಿಸಿದ್ದು ಕೇವಲ ತೋರಿಕೆಗೆ ಮಾತ್ರ ಎಂಬುದು ಗಮನಕ್ಕೆ ಬಂದಿದೆ.

Advertisement

ತ್ಯಾಜ್ಯ ವಿಲೇವಾರಿಗಿಲ್ಲ ವ್ಯವಸ್ಥೆ: ಈ ಎಲ್ಲದರ ಮಧ್ಯ ಈ ಕಾರ್ಖಾನೆಯಿಂದ ನಿತ್ಯ ಬಿಡುಗಡೆಯಾಗುವ ತ್ಯಾಜ್ಯವನ್ನು ಸಾರ್ವಜನಿಕರು ಹಾಗೂ ಕಾರ್ಮಿಕರ ಅನಾರೋಗ್ಯಕ್ಕೆ ಕಾರಣವಾಗದ ರೀತಿ ವಿಲೇವಾರಿಗೆ ಪ್ರತ್ಯೆಕ ವ್ಯವಸ್ಥೆ ಮಾಡದಿರುವುದು ಕಂಡುಬಂದಿತು.

ಅಗ್ನಿ ಅವಘಡದಿಂದ ಇಡೀ ಪಟ್ಟಣವೇ ಭಯದಲ್ಲಿ ಕಾಲ ಕಳೆಯತ್ತಿರುವ ವಿಷಯ ಗೊತ್ತಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುವ ಕನಿಷ್ಟ ಸೌಜನ್ಯ ತೋರದೇ ಇರುವುದು ಬೇಜವಾಬ್ದಾರಿಗೆ ನಿದರ್ಶನವಾಗಿದೆ.

ದೂರವಾಣಿ ಕರೆ ಸ್ವೀಕರಿಸುವುದಿಲ್ಲ: ಕಾರ್ಖಾನೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಈ ಕಾರ್ಖಾನೆಗಳಿಗೆ ಭೇಟಿ ನೀಡಿ, ನಿಯಮ ಪಾಲನೆ ಕುರಿತು ಪರಿಶೀಲಿಸಿದ್ದು ತೀರಾ ವಿರಳ. ಪರಿಶೀಲಿಸಿ ಕ್ರಮ ಕೈಗೊಳ್ಳುವುದು ದೂರದ ಮಾತು. ಇಂಥ ಘಟನೆಗಳು ಸಂಭವಿಸಿದ ಸಂದರ್ಭದಲ್ಲಾದರೂ ಭೇಟಿ ನೀಡುವ ಕನಿಷ್ಟ ಸೌಜನ್ಯ ಅವರಲ್ಲಿಲ್ಲ. ಅಲ್ಲದೇ ಕಾರ್ಖಾನೆಗಳಲ್ಲಿ ಅಗ್ನಿ ಅವಘಡದ ಸಂಭವಿಸಿದಾಗ ದೂರವಾಣಿ ಕರೆ ಮಾಡಿದಾಗ ಸಹಾಯಕ ನಿರ್ದೇಶಕ ಮಂಜಪ್ಪ ಅವರು ಕರೆ ಸ್ವೀಕರಿಸುವುದಿಲ್ಲ ಎಂದು ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮs್ ತಿಳಿಸಿದರು.

ಒಳಗಿದ್ದವರಿಗೆ ಮೊದಲೇ ಗೊತ್ತಿತ್ತಾ?: ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಒಳಗಿದ್ದ ಕೆಲವು ಕಾರ್ಮಿಕರು ಘಟನೆ ಹಿನ್ನೆಲೆಯಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಹಾಗಾದರೆ ಒಳಗಿದ್ದ ಕಾರ್ಮಿಕರಿಗೆ ಈ ಘಟನೆಗೂ ಮುನ್ನ ಅದರ ಬಗ್ಗೆ ಮಾಹಿತಿ ಇತ್ತೆ ಎಂಬ ಇತ್ಯಾದಿ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಾರ್ಖಾನೆಗೆ ಬೆಂಕಿ ತಗುಲಿದ್ದು ಆಕಸ್ಮಿಕ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿಲ್ಲ. ಹಾನಿ ನೆಪದಲ್ಲಿ ವಿಮೆ ಕಂಪೆನಿಯಿಂದ ಹಣ ವಸೂಲಿಗೆ ಈ ಸಂಚು ರೂಪಿಸಿರುವ ಸಾಧ್ಯತೆಗಳಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆ ನಡೆಯುತ್ತಿವೆ. ಅವಘಡಕ್ಕೆ ಕಾರ್ಖಾನೆ ಮಾಲೀಕರ‌ ಬೇಜವಾಬ್ದಾರಿ ಕಾರಣ. ಈ ಮಧ್ಯ ಆತನನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಕ್ರಮ ಕೈಗೊಂಡಿಲ್ಲ: ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ನಿಯಮ ಉಲ್ಲಂಘಿಸಿ ಏನೆಲ್ಲ ಉತ್ಪಾದಿಸುತ್ತಿರುವುದು, ಕಾರ್ಖಾನೆಗಳು ಬಿಡುವ ರಾಸಾಯನಿಕ ತ್ಯಾಜ್ಯದಿಂದಾಗಿ ಜನ-ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿರುವ ವಿಷಯ ಸಾರ್ವಜನಿಕರು, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳ ಗಮನದಲ್ಲಿದ್ದರೂ, ಯಾರೊಬ್ಬರೂ ಯಾವುದೇ ಕಾರ್ಖಾನೆಗಳ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುತ್ತಿಲ್ಲ. ಈ ಬೇಜವಾಬ್ದಾರಿ ಹಿಂದೆ ಈ ಎಲ್ಲರ ಸ್ವಾರ್ಥವಿದೆ ಎಂಬುದು ಸಾರ್ವಜನಿಕರ ಆರೋಪ.

Advertisement

Udayavani is now on Telegram. Click here to join our channel and stay updated with the latest news.

Next