ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ಮಾರಾಟವನ್ನು ಸರ್ಕಾರ ನಿಷೇಧಿಸಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನೆ ಮಾರಾಟ ಮಾಡುವಂತೆ ಜಿಲ್ಲಾ ಆಡಳಿತ ಹೊರಡಿಸಿದ ಆದೇಶವನ್ನು ಗಾಳಿಗೆ ತೋರಿ ಜಿಲ್ಲಾದ್ಯಂತ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.
ಸರ್ಕಾರ ಎರಡು ವಾರಗಳ ಹಿಂದೆಯೇ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿದ್ದಲ್ಲದೇ ಪತ್ರಿಕೆ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿತ್ತು. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ, ಯಾರಾದರೂ ಪಿಒಪಿ ಗಣೆಶ ಮೂರ್ತಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ಅಂಥ ಅಂಗಡಿಗಳನ್ನು ಸೀಜ್ ಮಾಡಿ, ದಂಡ ವಿಧಿಸಲಾಗುವುದು ಎಂದು ಸ್ಪಷ್ಟವಾಗಿ ಎಚ್ಚರಿಸಲಾಗಿತ್ತು.
ಜಿಲ್ಲಾ ಆಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರಿಂದ ನಿಯಮ ಉಲ್ಲಂಘಿಸದೇ ಸಮೀಪದ ಚಿಟಗುಪ್ಪ ತಾಲೂಕು ರಾಂಪೂರ ಗ್ರಾಮದ ಗಿರಿಗಿರಿ ಪರಿವಾರ ಕಾಶೀನಾಥ ಅವರು ಪರಿಸರ ಸ್ನೇಹಿ ಗಣೇಶ ಮೂರ್ತಿ ಸಿದ್ಧಪಡಿಸಿದ್ದಾರೆ. ಪಕ್ಕದ ಬಸವಕಲ್ಯಾಣ ಮತ್ತಿತರ ಕಡೆ ಕೂಡ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೇ ಮಾರಾಟ ಮಾಡುವ ಅಂಗಡಿಯವರು ಜಿಲ್ಲಾ ಆಡಳಿತದ ಮೇಲೆ ಭರವಸೆ ಮಾಡಿ, ಪಿಒಪಿ ಗಣೇಶ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಅಂಗಡಿಗಳಲ್ಲಿ ತಂದಿಟ್ಟಿದ್ದಾರೆ.
ಸರ್ಕಾರದ ಆದೇಶ ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ಬರಬಹುದೆಂಬ ನಂಬಿಕೆಯಿಂದ ವ್ಯಾಪಾರಿಗಳು ಪರಿಸರ ಸ್ನೇಹಿ ಗಣೇಶ ಮೂರ್ತಿ ಮಾರಾಟಕ್ಕೆ ಮುಂದಾಗಿರುವ ಈ ಸಂದರ್ಭದಲ್ಲಿ ಪ್ರತಿ ವರ್ಷ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುವ ವ್ಯಾಪಾರಿಗಳು ಯಾರ ಭಯವೂ ಇಲ್ಲದೇ ಮಾರುಕಟ್ಟೆಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ಆದೇಶ ಹೊರಡಿಸಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಮಧ್ಯ ಕೆಲ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುವ ವ್ಯಾಪಾರಿಗಳು ನಾವು ಸಂಬಂಧಪಟ್ಟವರಿಂದ ಪರವಾನಗಿ ಪಡೆದುಕೊಂಡೇ ಮೂರ್ತಿ ಖರೀದಿಸಿ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ.