Advertisement

ವಸ್ತು ಪ್ರದರ್ಶನ ಶಿಕ್ಷಣದ ಅವಿಭಾಜ್ಯವಾಗಲಿ

04:30 PM Dec 07, 2019 | Naveen |

ಹುಮನಾಬಾದ: ವರ್ಗಕೋಣೆಯಲ್ಲಿ ಪಾಠ ಆಲಿಕೆ ಜೊತೆ ಪಠ್ಯ ವಿಷಯ ಸರಳ ಗ್ರಹಿಕೆಗೆ ವಸ್ತು ಪ್ರದರ್ಶನ ಪೂರಕ. ವಸ್ತು ಪ್ರದರ್ಶನ ಆಯೋಜನೆ ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಸ್ಪಷ್ಟ ಆದೇಶ ಹೊರಡಿಸಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಹೇಳಿದರು.

Advertisement

ಪಟ್ಟಣದ ವಿಶ್ವೇಶ್ವರಯ್ಯ ವಿವಿಧೋದ್ದೇಶ ಶಿಕ್ಷಣ ಸಂಸ್ಥೆಯ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವೈಶಿಷ್ಟ್ಯ ಪೂರ್ಣ ಶೈಕ್ಷಣಿಕ ವಸ್ತು ಪ್ರದರ್ಶನದಲ್ಲಿ ಡಾ| ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೈನಂದಿನ ಪಠ್ಯ ಬೋಧನೆ ಜೊತೆ ವರ್ಷದಲ್ಲಿ ಕನಿಷ್ಟ ಒಂದು ಬಾರಿ ಇಂಥ ವಸ್ತು ಪ್ರದರ್ಶನ ಆಯೋಜಿಸುವುದು ಅವಶ್ಯ ಮಾತ್ರವಲ್ಲ ಈಗ ಅನಿವಾರ್ಯ.

ಹಾಗೆಂದು ಈ ಮಾತನ್ನು ನಾನು ಹೇಳುತ್ತಿಲ್ಲ. ವಾರ್ಷಿಕ ಪಠ್ಯ ಯೋಜನೆಯಲ್ಲಿ ಶಿಕ್ಷಣ ಇಲಾಖೆ ಇದನ್ನು ಶೈಕ್ಷಣಿಕ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿ, ಕಡ್ಡಾಯ ಅನುಷ್ಠಾನಗೊಳಿಸಲು ಸ್ಪಷ್ಟ ಆದೇಶ ಹೊರಡಿಸಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಹುದುಗಿದ ಸುಪ್ತ ಪ್ರತಿಭೆ ಗುರುತಿಸಿ ಪೂರಕ ಪ್ರೋತ್ಸಾಹಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ಮನೆ ಮತ್ತು ಶಾಲೆಯಲ್ಲಿ ಮಗು ಯಾವುದೋ ಒಂದು ವಸ್ತುವಿನ ತಯಾರಿಕೆ ತಿಳಿದುಕೊಳ್ಳಲು ಬೆಲೆ ಬಾಳುವ ವಸ್ತು ಒಡೆದು ಹಾಳುಮಾಡುತ್ತದೆ. ಅಂಥ ಪ್ರಸಂಗದಲ್ಲಿ ಮಗುವನ್ನು ಬೈದು ಅದರಲ್ಲಿನ ಕ್ರಿಯಾಶೀಲತೆ ಕುಸಿಯಲು ಕಾರಣವಾಗದೇ ಅದನ್ನು ಮುಕ್ತವಾಗಿ ಬಿಡಬೇಕು.  ಏನೋ ಮಾಡಲು ಹೋಗಿ ಇನ್ನೋನೋ ಮಾಡಿರುವ ಅದೆಷ್ಟೋ ಮಕ್ಕಳು ಇಡೀ ರಾಷ್ಟ್ರದ ಗಮನ ಸೆಳೆಯುವ ಎಂಜಿನಿಯರ್‌, ವಿಜ್ಞಾನಿಗಳಾಗಿ ಹೊರಹೊಮ್ಮಿರುವ ನಿದರ್ಶನಗಳಿವೆ ಎಂದರು.

ಮಗುವಿನ ಕೌಶಲ್ಯ ಅವಲೋಕಿಸಿ, ಅಗತ್ಯ ಪ್ರೋತ್ಸಾಹಿಸಿದಲ್ಲಿ ಭವಿಷ್ಯ ಉಜ್ವಲಗೊಳ್ಳುತ್ತದೆ. ಬದಲಿಗೆ ಅವಮಾನ ಮಾಡಿ, ಹಿಯಾಳಿಸಿದರೆ ಆ ಮಗುವಿನನ ಭವಿಷ್ಯವೇ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕ, ಶಿಕ್ಷಕರು ಪ್ರತಿಯೊಂದು ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡಬೇಕು ಎಂದು ಸಲಹೆ ನೀಡಿದರು.

Advertisement

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ|ಗೋವಿಂದ ಮಾತನಾಡಿ, ಪ್ರಪಂಚದಲ್ಲಿ ಪ್ರತಿಭೆ ಇಲ್ಲದ ವ್ಯಕ್ತಿಗಳು ಸಿಗುವುದು ವಿರಳ. ಪ್ರತಿಯೊಬ್ಬರಲ್ಲಿ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಬೆಳೆವ ಪೈರು ಮೊಳಕೆಯಲ್ಲಿ ಎಂಬಂತೆ ಭವಿಷ್ಯ ಉಜ್ವಲಗೊಳಿಸಿಕೊಳ್ಳುವ ವಿದ್ಯಾರ್ಥಿಗಳ ಲಕ್ಷಣಗಳು ಬಾಲ್ಯದಲ್ಲೇ ಗೋಚರಿಸುತ್ತವೆ. ಅಂತೆಯೇ ಶಿಕ್ಷಕ ಹಾಗೂ ಪಾಲಕರು ಮಕ್ಕಳಲ್ಲಿನ ಆ ವಿಶಿಷ್ಟ ಚೈತನ್ಯ ಶಕ್ತಿ ಗುರುತಿಸಿ ಪ್ರೋತ್ಸಾಹಿಸಿದಲ್ಲಿ ಮಗು ಎಲ್ಲರ ನಿರೀಕ್ಷೆಗೂ ಮೀರಿ ಬೆಳೆಯುತ್ತದೆ ಎಂದರು. ಪ್ರೀತಿಗೆ ಇಡೀ ಜಗತ್ತನ್ನೇ ಗೆಲ್ಲುವ ಬಹುದೊಡ್ಡ ಶಕ್ತಿ ಇದೆ. ಆದರೆ ದ್ವೇಶ ಸಂಬಂಧ ಹದಗೆಡಿಸಿ, ವೈಶಮ್ಯ ಹೆಚ್ಚಿಸುತ್ತದೆ.

ಜೊತೆಗೆ ಶಿಕ್ಷಕರ ಹಾಗೂ ಮಕ್ಕಳ ಮಧ್ಯದ ಬಾಧವ್ಯ ಕಲ್ಮಶಗೊಳಿಸುತ್ತದೆ. ಈ ನಿಟ್ಟಿನಲ್ಲಿ ಪಾಲಕ, ಶಿಕ್ಷಕರು ಮಗುವಿಗೆ ಹೇಳುವುದೆಲ್ಲವನ್ನು ಪ್ರೀತಿಯಿಂದಲೇ ಹೇಳಿದರೆ ಖಂಡಿತಾ ಮನದಟ್ಟಗುತ್ತಾದೆ ಎಂದು ಮನವರಿಕೆ ಮಾಡಿಕೊಟ್ಟರು.

ಸಂಸ್ಥೆ ಅಧ್ಯಕ್ಷ ರಾಜಕುಮಾರ ಕೆ.ಭೂರೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತ್ಯಲ್ಪ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಮೂಲಕ ತಾಲೂಕಿನ ಶೈಕ್ಷಣಿಕ ಚಿತ್ರಣ ಬದಲಿಸಿದ ಕೀರ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಅವರಿಗೆ ಸಲ್ಲುತ್ತದೆ. ಅವರು ಹುಮನಾಬಾದಗೆ ಬರುವ ವಿಷಯ ತಿಳಿದ ಅದೆಷ್ಟೋ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಶಿಕ್ಷಕರಲ್ಲಿ ನಡುಕ ಹುಟ್ಟಿತ್ತು. ಶಿವರಾಚಪ್ಪ ವಾಲಿ ಅವರು ಬಂದ ನಂತರ ಶಿಕ್ಷರಿಗೆ ರಕ್ಷಕರಾಗಿ, ಭ್ರಷ್ಟರಿಗೆ ದುಃಸ್ವಪ್ನವಾಗಿ ಕಾಡಿ ಶುದ್ಧಗೊಳಿಸುವ ಪ್ರಯತ್ನ ಮಾಡಿ, ಇಲಾಖೆಯನ್ನು ಬಹುತೇಕ ಶುದ್ಧೀಕರಿಸಿದ್ದಾರೆ.

ಸರ್ಕಾರಿ ಇಲಾಖೆ ಆಡಳಿತ ಸುಧಾರಣೆಗೆ ಇಂಥ ಅಧಿಕಾರಿಗಳು ಅತ್ಯಂತ ಅವಶ್ಯ. ಈ ನಿಟ್ಟಿನಲ್ಲಿ ಹುಮನಾಬಾದ ತಾಲೂಕಿನ ಜನತೆ ನಿಜಕ್ಕೂ ಸುದೈವಿಗಳು ಎಂದರು.

ಮುಖ್ಯಶಿಕ್ಷಕಿ ವನಜಾಕ್ಷಿ, ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆದ ಪಾಲಕ ಕೆ.ಎಂ.ಗಜೇಂದ್ರ, ಸಂಗಮೇಶ ಮರೂರ, ನಿರ್ಮಲಾ, ಕಾವೇರಿ, ಗೀತಾ, ಸಂಪದಾ, ದೀಪಿಕಾ, ಕ್ರಿಸ್ತಕುಮಾರಿ, ಸಿದ್ಧಾರ್ಥ, ಬೆಂಜಮಿನ್‌, ಬಾಬುರಾವ್‌ ಮೊದಲಾದವರು ಇದ್ದರು. ಶಾರುಲಿ ಪ್ರಾರ್ಥಿಸಿದರು. ಹೀನಾ ಬೇಗಂ ಸ್ವಾಗತಿಸಿದರು. ಡ್ಯಾನಿಯಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ನಿರೂಪಿಸಿದರು. ರಂಜಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next