ಹುಮನಾಬಾದ: ತಾಲೂಕಿನಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕರೆಯುವ ಇ ಟೆಂಡರ್‌ನಲ್ಲಿ ಬಹುತೇಕ ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಸರಾಸರಿ 20ರಿಂದ 30ರಷ್ಟು ಕಡಿಮೆ ದರದಲ್ಲಿ ಗುತ್ತಿಗೆ ಪಡೆಯುತ್ತಿರುವ ಕೆಲಸ ನಡೆಯುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಲೋಕೋಪಯೋಗಿ ಇಲಾಖೆ, ಪಂಚಾಯತ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆಯುವ ರಸ್ತೆ, ಚರಂಡಿ, ಕಟ್ಟಡ ಕಾಮಗಾರಿ, ಸರ್ಕಾರಿ ಕಟ್ಟಡಗಳ ಕಾಮಗಾರಿಗೆ ಸರ್ಕಾರ ಅನುದಾನ ನಿಗದಿಪಡಿಸಿ ಅರ್ಹ ಗುತ್ತೆದಾರರಿಂದ ಇ ಟೆಂಡರ್ ಮೂಲಕ ಟೆಂಡರ್ ಕರೆಯಲಾಗುತ್ತಿದೆ. ಆದರೆ, ಅರ್ಹ ಗುತ್ತಿಗೆದಾರರು ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಗುತ್ತಿಗೆ ಪಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವೇ ಎಂಬುದು ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಡಿಮೆ ದರದಲ್ಲಿ ಕೆಲಸ ಹೇಗೆ?: ಶಾಸಕ ರಾಜಶೇಖರ ಪಾಟೀಲ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಕಡಿಮೆದರದಲ್ಲಿ ಗುತ್ತಿಗೆ ಪಡೆಯುತ್ತಿರುವ ಕುರಿತು ಸುದೀರ್ಘವಾಗಿ ಚರ್ಚೆ ನಡೆದಿದ್ದು, ಶಾಸಕ ರಾಜಶೇಖರ ಪಾಟೀಲ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆಯಿತು. ಬೇರೆ ಕಡೆಯಿಂದ ಬಂದ ಗುತ್ತಿಗೆದಾರರು ಯಾವ ಕಾರಣಕ್ಕೆ ಕಡಿಮೆ ದರದಲ್ಲಿ ಗುತ್ತಿಗೆ ಪಡೆಯುತ್ತಿದ್ದಾರೆ? ಯಾವ ಧೈರ್ಯದ ಮೇಲೆ ಅವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ? ಸರ್ಕಾರದ ನಿಯಮದ ಪ್ರಕಾರ ಅವರು ಕೆಲಸ ಮಾಡುತ್ತಾರೆಯೇ ಎಂದು ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.
ಅಧಿಕಾರಿಗಳು ಶಾಮಿಲು?: ಕಡಿಮೆ ದರದಲ್ಲಿ ಗುತ್ತಿಗೆ ಪಡೆಯುತ್ತಿರುವ ಗುತ್ತಿಗೆದಾರರ ಜೊತೆಗೆ ಇಲ್ಲಿನ ಅಧಿಕಾರಿಗಳು ಕೂಡ ಶಾಮೀಲು ಆಗಿರಬೇಕು ಅಲ್ಲವೆ? ಎಂದು ಶಾಸಕ ಪಾಟೀಲ ಅಧಿಕಾರಿಗಳನ್ನು ಪ್ರಶ್ನಿಸಿದ ಪ್ರಸಂಗ ಕೂಡ ನಡೆಯಿತು. ಗುತ್ತಿಗೆ ಕೆಲಸ ಯಾರು ಬೇಕಾದರೂ ಪಡೆಯಲಿ. ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಆದರೆ, ಸರ್ಕಾರದ ಅನುದಾನ ಮಾತ್ರ ಸೂಕ್ತವಾಗಿ ಬಳಕೆ ಆಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ಸರ್ಕಾರದ ಅನುದಾನ ದುರ್ಬಳಕೆ ಆದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಧಿಕಾರಿಗಳ ತಲೆದಂಡ: ಕಡಿಮೆ ದರದಲ್ಲಿ ಗುತ್ತಿಗೆ ಪಡೆದಿರುವ ಗುತ್ತೆದಾರರ ಜೊತೆಗೆ ಇಲಾಖೆಗಳ ಅಧಿಕಾರಿಗಳು ಕೈ ಜೊಡಿಸಿ ಗುಣಮಟ್ಟದಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡರೆ ಅಂತಹ ಅಧಿಕಾರಿಗಳ ತಲೆ ದಂಡ ಖಚಿತ. ಅಲ್ಲದೆ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನಾನೇ ಖುದ್ದು ಮೇಲಾ ಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸುತ್ತೇನೆ. ಸರ್ಕಾರದ ನಿಯಮದ ಪ್ರಕಾರ ಪಕ್ಕಾ ಕೆಲಸ ಆಗಬೇಕು. ತನಿಖೆ ಸಂದರ್ಭದಲ್ಲಿ ಗುತ್ತಿಗೆದಾರ ಸೇರಿದಂತೆ ಇತರರು ಕೈ ಎತ್ತಬಹುದು. ಆದರೆ, ಕೊನೆಯಲ್ಲಿ ಸಿಕ್ಕಿಬೀಳುವುದು ಅಧಿಕಾರಿಗಳು ಮಾತ್ರ ಎಂಬುದನ್ನು ಎಲ್ಲಾ ಅಧಿಕಾರಿಗಳು ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಪ್ರಸಂಗ ಸಭೆಯಲ್ಲಿ ನಡೆಯಿತು.
ಸರ್ಕಾರ ನಿಗದಿತ ಪಡಿಸಿ ಟೆಂಡರ್ ಕರೆದ ದರಕ್ಕಿಂತ ಕಡಿಮೆ ದರದಲ್ಲಿ ಗುತ್ತಿಗೆದಾರರು ಕೆಲಸ ಪಡೆಯುತ್ತಿರುವುದು ನೋಡಿದರೆ ಅನುಮಾನ ಹುಟ್ಟುವಂತೆ ಮಾಡಿದೆ. ಕಡಿಮೆ ದರದಲ್ಲಿ ಕೆಲಸ ಪಡೆಯುವ ವ್ಯಕ್ತಿಗಳು 100ರಷ್ಟು ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ. ನಾನು ಕೂಡ ಈ ಹಿಂದೆ ಪ್ರಥಮ ದರ್ಜೆ ಗುತ್ತಿಗೆದಾರನಾಗಿ ಕೆಲಸ ಮಾಡಿದ್ದೇನೆ. ನಿಜವಾಗಿಯೂ ಕಡಿಮೆ ದರದಲ್ಲಿ ಗುಣಮಟ್ಟದ ಕೆಲಸ ಮಾಡಿದರೆ ಸಂತೋಷ. ಆದರೆ, ಕಳಪೆ ಕಾಮಗಾರಿ ಆದರೆ ಮೊದಲು ಅಧಿಕಾರಿಗಳು ಶಿಕ್ಷೆ ಅನುಭವಿಸುತ್ತಾರೆ.
ರಾಜಶೇಖರ ಪಾಟೀಲ,
ಶಾಸಕರು
ದುರ್ಯೋಧನ ಹೂಗಾÃ