Advertisement

ಸಾಧಕರಿಗೆ ಡಾ|ಅಂಬೇಡ್ಕರ್‌ ಪ್ರೇರಣೆ

10:00 AM Aug 08, 2019 | Naveen |

ಹುಮನಾಬಾದ: 20ನೇ ಶತಮಾನದ ದೇಶದ ಶ್ರೇಷ್ಟ ಸಾಧಕರಿಗೆಲ್ಲ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಕಾರಣ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಮೇಲ್ವರ್ಗದವರಿಂದ ಶೋಷಣೆಗೊಳಗಾದ ಪ್ರತಿಯೊಬ್ಬರು ಕೊನೆಯುಸಿರು ಇರುವ ವರೆಗೂ ಡಾ| ಅಂಬೇಡ್ಕರ್‌ ಅವರನ್ನು ಮರೆಯಬಾರದು ಎಂದು ಖ್ಯಾತ ಕವಿ ಡಾ| ಸಿದ್ಧಲಿಂಗಯ್ಯ ಹೇಳಿದರು.

Advertisement

ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ದಲಿತ ವಿದ್ಯಾರ್ಥಿ ಹಾಗೂ ಮಹಿಳಾ ಒಕ್ಕೂಟ ಮೀಸಲಾತಿ ಹರಿಕಾರ ಛತ್ರಪತಿ ಶಾಹು ಮಹಾರಾಜರ 145ನೇ ಮತ್ತು ದಲಿತ ಚಳವಳಿ ಚೇತನ ಪ್ರೊ| ಬಿ. ಕೃಷ್ಣಪ್ಪ ಅವರ 81ನೇ ಜನ್ಮದಿನ ಆಚರಣೆ ಸ್ಮರಣಾರ್ಥ ಬುಧವಾರ ಏರ್ಪಡಿಸಲಾಗಿದ್ದ ಸಂವಿಧಾನ ಉಳವಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಒಂದು ಸಂವಾದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಹಿಮಾಲಯ ಪರ್ವತ ಹತ್ತಿದ ವ್ಯಕ್ತಿ, ಖ್ಯಾತ ನಟಿ ಶಬಾನಾ ಆಜ್ಮಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ ಸೇರಿದಂತೆ ಅಸಂಖ್ಯಾತ ಸಾಧಕರ ಸಾಧನೆಗೆ ಪ್ರೇರಣೆ ಏನು ಎಂಬ ಮಾಧ್ಯಮದವರ ಪ್ರಶ್ನೆಗೆ ಬಂದ ಉತ್ತರ ಒಂದೇ ಡಾ| ಬಿ.ಆರ್‌. ಅಂಬೇಡ್ಕರ್‌ ಎಂದು ಹೇಳಿದರು.

ಜಪಾನ್‌ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಶತಮಾನದ ಶ್ರೇಷ್ಟ ಜ್ಞಾನಿಗಳನ್ನು ಗುರುತಿಸಿದಾಗ ಡಾ| ಅಂಬೇಡ್ಕರ್‌ ಅವರ ಹೆಸರು ಬರಯುತ್ತದೆ. ಜಾತಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಮಹಾನ ಕ್ರಾಂತಿ ಮಾಡಿದ ವಿಶ್ವಗುರು ಬಸವೇಶ್ವರರು ಹಾಗೂ ಸಾಮಾಜಿಕ ಸಮಾನತೆ, ತುಳಿತಕ್ಕೊಳಗಾದವರನ್ನು ಮೇಲೆತ್ತಲು ಬದುಕನ್ನೇ ಸವೆಸಿ ನಿರಂತರ ಅಧ್ಯಯನ ಮೂಲಕ ವಿಶ್ವಜ್ಞಾನಿ ಎಂದೇ ಗುರುತಿಸಿಕೊಂಡ ಡಾ| ಬಿ.ಆರ್‌. ಅಂಬೇಡ್ಕರ್‌ ಅವರಿಬ್ಬರಲ್ಲಿ ಸಾಕಷ್ಟು ಸಾಮ್ಯತೆ ಇದೆ ಎಂದು ಹೇಳಿದರು. ಡಾ| ಬಿ.ಆರ್‌.ಅಂಬೇಡ್ಕರ್‌ ಅವರಲ್ಲಿನ ಅಂತಃ ಶಕ್ತಿ ಗುರುತಿಸಿ ಇಡೀ ದೇಶಕ್ಕೆ ಪರಿಚಯಿಸಿದ ಕೀರ್ತಿ ಶಾಹು ಮಹಾರಾಜರಿಗೆ ಸಲ್ಲುತ್ತದೆ. ನೊಂದವರ ಅಭಿವೃದ್ಧಿಗಾಗಿ ಶ್ರಮಿಸಲು ಮುಂದಾದ ಅವರಿಗೆ ತನು-ಮನ ಧನದಿಂದ ನೆರವು ನೀಡಿದ ಶಾಹು ಮಹಾರಾಜರ ಕಾರ್ಯ ಅವಿಸ್ಮರಣೀಯ ಎಂದು ಹೇಳಿದರು.

ಉತ್ತರ ಕರ್ನಾಟಕ ಬೀದರ ಜಿಲ್ಲೆ ಜನರು ಬಗ್ಗೆ ಅಭಿಮಾನದಿಂದ ಮಾತನಾಡಿದ ಡಾ| ಸಿದ್ಧಲಿಂಗಯ್ಯ, ಇಲ್ಲಿನ ಜನರ ಸರಳ ಸಜ್ಜನಿಕೆ, ಹೃದಯ ವೈಶಾಲ್ಯ ಪ್ರತಿಯೊಂದು ಪ್ರಶಂಸನೀಯ ಎಂದು ಬಣ್ಣಿಸಿದರು.

Advertisement

ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ ಮಾತನಾಡಿ, ಕವಿ ಡಾ| ಸಿದ್ಧಲಿಂಗ್ಯ ಅವರು ಕೇವಲ ದಲಿತ ಸಮುದಾಯದ ಚಿಂತಕರಾಗಿರದೇ ತುಳಿತಕ್ಕೊಳಗಾದ ಜನರ ಧ್ವನಿಯಾಗಿದ್ದಾರೆ ಎಂದು ಹೇಳಿದರು.

ಕೇಂದ್ರದ ಮೋದಿ ಸರ್ಕಾರಕ್ಕೆ ದೇಶದ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ಬ್ಯಾಂಕ್‌, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸದೇ ರಾಷ್ಟ್ರೀಕರಣ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.

ಧರ್ಮದ ಹೆಸರಿನಲ್ಲಿ ರಾಷ್ಟ್ರಪ್ರೇಮದಂಥಹ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ದೇಶದ ಮುಗ್ಧ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಎಲ್ಲ ಜಾತಿಯವರನ್ನು ಸಮಾನವಾಗಿ ಕಾಣುವುದಾಗಿ ಹೇಳುತ್ತಿರುವ ಕೇಂದ್ರದ ಸರ್ಕಾರದ 275 ಜಂಟಿ ಕಾರ್ಯದರ್ಶಿಗಳ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಅಧಿಕಾರಿಗಳು ಕೇವಲ 12 ಜನ ಇದ್ದಾರೆ. ಇದು ಸಮಾನತೆಯೇ ಎಂದು ಪ್ರಶ್ನಿಸಿದರು.

ಖ್ಯಾತ ದಲಿತ ಲೇಖಕಿ ಡಾ| ಜಯದೇವಿ ಗಾಯಕವಾಡ ಮಾತನಾಡಿ, ರಾಜ್ಯದ ಆಮರಾಜನಗರದಲ್ಲಿ ದಲಿತರ ಮೇಲೆ ನಡೆದ ಹಿಂಸೆ ಸೇರಿದಂತೆ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ. ಇದು ದಲಿತರ ಮೇಲಿನ ಕಾಳಜಿಯೇ? ದಲಿತರ ಉದ್ಧಾರ ಕೇವಲ ಭಾಷಣದಿಂದ ಆಗುವುದಿಲ್ಲ. ಅದೂ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಸಂವಿಧಾನ ರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮನ್ನಾನ್‌ ಸೇs್, ಗೌರವಾಧ್ಯಕ್ಷ ಅಮೃತರಾವ ಚಿಮ್ಕೋಡ್‌, ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ, ಲಿಂಗಾಯತ ಯುವ ಒಕ್ಕೂಟದ ರಾಜ್ಯ ಅಧ್ಯಕ್ಷ ಆನಂದ ದೇವಪ್ಪ ಇದ್ದರು.

ಪ್ರಭುರಾವ ಚಿತ್ತ‌ಕೋಟಾ ಸ್ವಾಗತಿಸಿದರು. ತಾಪಂ ಅಧ್ಯಕ್ಷ ರಮೇಶ ಡಾಕುಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಾರ್ಥ ಕಾಂಬ್ಳೆ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next