Advertisement

ಚಿಟಗುಪ್ಪ  ಬಸ್‌ ನಿಲ್ದಾಣ ಪೂರ್ಣ ಎಂದು?

12:01 PM Nov 07, 2019 | Naveen |

„ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಹೊಸ ತಾಲೂಕು ಕೇಂದ್ರ ಚಿಟಗುಪ್ಪ ಪಟ್ಟಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಾರ್ಕೆಟ್‌, ಬಸ್‌ ನಿಲ್ದಾಣ, ವಾಣಿಜ್ಯ ಮಳಿಗೆಗೆ ಅಗತ್ಯ ಅನುದಾನವಿದ್ದರೂ ಒಂದು ವರ್ಷದಿಂದ ಕಾಮಗಾರಿ ನನೆಗುದಿಗೆ ಬೀಳುವ ಮೂಲಕ ಅಪೂರ್ಣ ಸ್ಥಿತಿಯಲ್ಲಿರುವ ಕಾರಣ ದುರ್ವ್ಯಸನಿಗಳ ತಾಣವಾಗಿ ಮಾರ್ಪಟ್ಟಿದೆ.

Advertisement

ಚಿಟಗುಪ್ಪ ಪಟ್ಟಣದ ಜನಸಂಖ್ಯೆ ಜೊತೆಗೆ ನಗರವೂ ಸಾಕಷ್ಟು ಬೆಳೆಯುತ್ತಿರುವುದರಿಂದ ಹೆಚ್ಚಿದ ಜನ ಹಾಗೂ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ನಾಗರಿಕರ ಬೇಡಿಕೆ ಗಂಭೀರ ಪರಿಗಣಿಸಿದ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಸಂಬಂಧಪಟ್ಟ ಸಂಸ್ಥೆ ಅಧಿಕಾರಿಗಳು ಮತ್ತು ಅಂದಿನ ಸಾರಿಗೆ ಸಚಿವರ ಮೇಲೆ ಒತ್ತಡ ಹೇರಿ 80ಲಕ್ಷ ರೂ. ತಂದು, ಅತ್ಯಾಕರ್ಷಕ ನಿಲ್ದಾಣ, ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶದಿಂದ 2017ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ವಿಶೇಷ ಏನೇನಿದೆ?: 80 ಲಕ್ಷ ರೂ.ದಲ್ಲಿ ನಿರ್ಮಿಸುತ್ತಿರುವ ಈ ಕಟ್ಟಡದಲ್ಲಿ ನಿಯಂತ್ರಣ ಅಧಿಕಾರಿ ಕೊಠಡಿ, ಮಹಿಳೆಯರ ವಿಶ್ರಾಂತಿ ಕೊಠಡಿ, ಉಪಹಾರ ಗೃಹ, ಪುರುಷ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ಶೌಚಾಲಯ, ಜೊತೆಗೆ 7ವಾಣಿಜ್ಯ ಮಳಿಗೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

2017ನೇ ಸಾಲಿನಲ್ಲಿ ಅತ್ಯಂತ ವೇಗವಾಗಿ ಆರಂಭಗೊಂಡ ಕಾಮಗಾರಿ ಮೇಲ್ಛಾವಣಿವರೆಗೆ ತಡೆರಹಿತವಾಗಿ ನಡೆದಿತ್ತು. ಈ ಮಧ್ಯ ಸಮುದಾಯ ಒಂದರ ಮುಖಂಡರು ಪ್ರತ್ಯೇಕವಾಗಿ ಎರಡು ಕಡೆ ದಾರಿ ಬಿಟ್ಟುಕೊಡುವುದೂ ಸೇರಿದಂತೆ ವಿವಿಧ ವಿಷಯ ಮುಂದಿಟ್ಟುಕೊಂಡು ನ್ಯಾಯಕೋರಿ ಕೋರ್ಟ್‌ ಮೊರೆ ಹೋಗಿದ್ದರಿಂದ ಒಂದು ವರ್ಷದಿಂದ ಸ್ಥಗಿತಗೊಂಡ ನಿರ್ಮಾಣ ಕಾಮಗಾರಿ ಈವರೆಗೆ ಆರಂಭಗೊಂಡಿಲ್ಲ.

ದುರ್ವ್ಯಸನಿಗಳ ತಾಣ: ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ನಿರ್ಮಾಣ ಹಂತದಲ್ಲಿ ಇರುವ ಆ ಕಟ್ಟಡವನ್ನು ಆಸುಪಾಸಿನ ಜನ ಬೆಳಗಿನ ಜಾವ ಮತ್ತು ರಾತ್ರಿ ಶೌಚಕ್ಕಾಗಿ ಬಳಸುತ್ತಿದ್ದಾರೆ. ಹಗಲಲ್ಲಿ ಸುತ್ತಲಿನ ವ್ಯಾಪಾರಿಗಳು ಸಾರ್ವಜನಿಕ ಮೂತ್ರಾಲಯ ಸೌಲಭ್ಯವಿಲ್ಲದ ಕಾರಣ ಕಟ್ಟಡದ ಎದುರಿಗೆ ನಿಂತು ಮೂತ್ರ ವಿಸರ್ಜಿಸುತ್ತಿದ್ದಾರೆ. ಕಟ್ಟಡದ ಎದುರಿಗೆ ನಿಂತ ಮಳೆ ನೀರು ಎರಡೂ ಸೇರಿ ದುರ್ನಾತ ಹಿನ್ನೆಲೆಯಲ್ಲಿ ಆ ಮಾರ್ಗದಿಂದ ಜನ ಸಂಚರಿಸುವುದೇ ದುಸ್ತರವಾಗಿದೆ.

Advertisement

ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೈಗೊಳ್ಳುತ್ತಿರುವ ಈ ಕಾಮಗಾರಿಯನ್ನು ವಿವಿಧ ಹಂತದ ಚುನಾಯಿತ ಪ್ರತಿನಿಧಿ ಗಳು, ಅಧಿಕಾರಿಗಳು ಒಗ್ಗೂಡಿ ಇರುವ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿ, ಉದ್ದೇಶಿತ ಕೆಲಸಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂಬುದು ಪಟ್ಟಣದ ನಿವಾಸಿಗಳ ಒತ್ತಾಸೆ.

Advertisement

Udayavani is now on Telegram. Click here to join our channel and stay updated with the latest news.

Next