Advertisement

ವಚನ ಸಾಹಿತ್ಯದಲ್ಲಿದೆ ಸಮಸ್ಯೆಗೆ ಪರಿಹಾರ

04:16 PM Aug 31, 2019 | Team Udayavani |

ಹುಮನಾಬಾದ: ವಚನ ಸಾಹಿತ್ಯದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾವಿದೆ. ವಿದ್ಯಾರ್ಥಿಗಳು ಅವುಗಳನ್ನು ಕೇವಲ ಕಂಠ ಪಾಠಕ್ಕೆ ಸೀಮಿತವಾಗಿಸದೇ ಆಳ ಅರ್ಥೈಸಿಕೊಂಡು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕ ಮಾಡಿಳ್ಳಬೇಕು ಎಂದು ಸಾಹಿತಿ ತುಕಾರಾಮ ಬೈನೋರ್‌ ಹೇಳಿದರು.

Advertisement

ಪಟ್ಟಣದ ಯಲಾಲ್ ಶಿಕ್ಷಣ ದತ್ತಿ ಸರ್ವೋದಯ ಪದವಿ ಕಾಲೇಜಿನಲ್ಲಿ ಶುಕ್ರವಾರ ಸುತ್ತೂರು ಮಠದ ಡಾ|ರಾಜೇಂದ್ರ ಸ್ವಾಮೀಜಿ ಜನ್ಮದಿನ ಆಚರಣೆ ಮತ್ತು ವಚನ ದಿನಾಚರಣೆ ನಿಮಿತ್ತಗ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದಿ. ಶಿಂಪಿ ಲಿಂಗಣ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ ಕಾಯಕ ಮಂತ್ರಕ್ಕೆ ಭಾರತ ದೇಶ ಮಾತ್ರವಲ್ಲದೇ ವಿಶ್ವದ ಅದೆಷ್ಟೋ ರಾಷ್ಟ್ರಗಳು ಕಲ್ಯಾಣದತ್ತ ಆಕರ್ಷಿತರಾಗಲು ಸಾಧ್ಯವಾಯಿತು. ಅದೇ ಮೋಳಿಗೆ ಮಾರಯ್ಯ ಸೇರಿದಂತೆ ಅರಸರು ತಮ್ಮ ವೈಭೋಗದ ಜೀವನಕ್ಕೆ ಇತಿಶ್ರೀ ಹೇಳಿ ಕಾಯಕ ಮಂತ್ರಕ್ಕೆ ಶರಣಾದರು. ಬಸವಣ್ಣವರ ಕಳಬೇಡ ಕೊಲಬೇಡ ಸಪ್ತಸೂತ್ರಗಳು ಅವರನ್ನು ವಿಶ್ವಗುರುವನ್ನಾಗಿಸಿದವು ಎಂದು ಹೇಳಿದರು.

ನಿವೃತ್ತ ಉಪನ್ಯಾಸಕ ಗುಂಡಪ್ಪ ಕುಂಬಾರ ಮಾತನಾಡಿ, ತನ್ನ ಸರಳ ಸಜ್ಜನಿಕೆ, ಕರ್ತವ್ಯ ನಿಷ್ಠೆ, ಕಾಯಕ ಮತ್ತು ದಾಸೋಹ ಮನೋಭಾವದಿಂದ ಬಸವಣ್ಣ ವಿಶ್ವಕ್ಕೆ ಅಣ್ಣನಾದರು. ಶರಣೆ ಮಹಾದೇವಿ ಇಡೀ ಶರಣ ಸಂಕುಲಕ್ಕೆ ಮಾತ್ರವಲ್ಲದೇ ವಿಶ್ವಕ್ಕೇ ಅಕ್ಕ ಎಂದೆನಿಸಿಕೊಂಡಳು. 12ನೇ ಶತಮಾನದ ಅನುಭವವೇ ಈಗ ಪಾರ್ಲಿಮೆಂಟ್ ಆಗಿ ಪರಿವರ್ತನೆಯಾಗಿದೆ. ಜಾತಿ, ವರ್ಗ, ವರ್ಣ ರಹಿತ ಕಲ್ಯಾಣ ರಾಜ್ಯ ನಿರ್ಮಾಣ ಬಸವಾದಿ ಶರಣರ ಗುರಿಯಾಗಿತ್ತು. ಅಂತೆಯೇ ಮಾದಾರ ಚೆನ್ನಯ್ಯ, ಸಮಗಾರ ಹರಳಯ್ಯ, ಹಡಪದ ಅಪ್ಪಣ್ಣ ಒಳಗೊಂಡಂತೆ ಎಲ್ಲ ಶರಣರನ್ನು ಒಪ್ಪಿ ಅಪ್ಪಿಕೊಳ್ಳುವ ಸಮಾನತೆ ಮತ್ತು ಸೌಹಾರ್ದತೆ ಸಮಾಜ ನಿರ್ಮಿಸಿದರು ಎಂದು ಹೇಳಿದರು.

ಉಪನ್ಯಾಸಕಿ ಗೌರಮ್ಮ ವಿರಕ್ತಮs್ ಮಾತನಾಡಿ, ಬಸವಾದಿ ಶರಣರ ವಚನಗಳು ಪ್ರತಿಯೊಬ್ಬರ ಜೀವನಕ್ಕೆ ದಾರಿ ದೀಪಗಳಾಗಿವೆ. ಯುವ ಪೀಳಿಗೆ ದುಶ್ಚಟಕ್ಕೆ ಬಲಿಯಾಗಿ ವ್ಯರ್ಥ ಹಾಳಾಗದೇ ಉತ್ತಮ ಸಂಸ್ಕಾರ ಮೈಗೂಡಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಮೌಡ್ಯದಿಂದ ಹೊರಬರದ ಜನರಿಗೆ ವಚನಗಳಲ್ಲಿನ ಸಾರ ಪರಿಚಯಿಸಿ ಬದುಕುವ ಮಾರ್ಗ ತೋರಿಸಿಕೊಡಬೇಕು. ಸ್ತ್ರೀ ಸ್ವಾತಂತ್ರ್ಯ ಹೋರಾಟ ಆರಂಭಗೊಂಡಿರುವುದು ಈ ಶತಮಾನದಲ್ಲಿ ಅಲ್ಲ, ಅಕ್ಕಮಹಾದೇವಿ ನೇತೃತ್ವದಲ್ಲಿ 12ನೇ ಶತಮಾನದಲ್ಲೇ ಆರಂಭಗೊಂಡಿತ್ತು. ಇಂದಿನ ಯುವತಿಯರು ಮಹಾದೇವಿಯಕ್ಕಳನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂದರು.

Advertisement

ಯಲಾಲ್ ಶಿಕ್ಷಣ ದತ್ತಿ ಪ್ರಜ್ವಲ್ ಯಲಾಲ್ ಮಾತನಾಡಿ, ಅಜ್ಞಾನ, ಮೋಸ, ವಂಚನೆಗಳಿಂದ ತತ್ತರಿಸಿಹೋದ ಇಂದಿನ ಯುವ ಪೀಳಿಗೆಗೆ 12ನೇ ಶತಮಾನದ ವಚನ ಸಾಹಿತ್ಯವೇ ಮತ್ತೆ ಕೈಹಿಡಿದು ಎತ್ತಲಿದೆ. ತನ್ಮೂಲಕ ಯುವ ಪೀಳಿಗೆ ಎಚ್ಚತ್ತುಕೊಂಡು ಜೀವನದ ನೈಜ ಸಾರ್ಥಕತೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಖೀಲ ಭಾರತ ಶರಣಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಎಸ್‌.ಉಪ್ಪಿನ್‌ ಮಾತನಾಡಿ, ಪ್ರೌಢ ಮತ್ತು ಪದವಿ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಂಡಿದ್ದು ಅರ್ಥಪೂರ್ಣವಾಯಿತು. ಅರ್ಥೈಸಿಕೊಳ್ಳದ ಯಾರದೋ ಮುಂದೆ ಗಂಟೆಗಟ್ಟಲೇ ಭಾಷಣ ಮಾಡುವ ಬದಲು ನಾಡಿನ ಭವಿಷ್ಯಗಳಾಗಲಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು ಸಾರ್ಥಕವಾಯಿತು ಎಂದರು. ಶೋಭಾ ಠಾಕೂರ ಪ್ರಾರ್ಥಿಸಿದರು. ಗಣೇಶಸಿಂಗ್‌ ತಿವಾರಿ ಸ್ವಾಗತಿಸಿದರು. ಸುರೇಶಕುಮಾರ ಬಪ್ಪಣ್ಣ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next