Advertisement

ಸಂಚಾರಕ್ಕೆ ಅಪಾಯಕಾರಿ ಈ ಹೆದ್ದಾರಿ!

11:42 AM Nov 23, 2019 | Naveen |

„ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಸುಗಮ ಸಂಚಾರಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ವಾಹನ ಸವಾರರು ನಿತ್ಯ ಯಾತನೆ ಅನುಭವಿಸುತ್ತಿದ್ದಾರೆ. 2017ರಲ್ಲಿ 242.56 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ-65 ವರೆಗಿನ 47.3 ಕಿ.ಮೀ. ಉದ್ದದ ರಸ್ತೆ ಕಾಮಗಾರಿ ನಿಯಮಾನುಸಾರ 2019ರ ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಈವರೆಗೆ ಕೇವಲ ಶೇ.75ರಷ್ಟು ಮಾತ್ರ
ಕಾಮಗಾರಿ ಪೂರ್ಣಗೊಂಡಿದ್ದು, ಕಿರು ಸೇತುವೆ ಒಳಗೊಂಡಂತೆ ಬಾಕಿ ಉಳಿದ ಕಾಮಗಾರಿ ಒಂದು ವರ್ಷದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಆ ಮಾರ್ಗದಿಂದ ಬೀದರ್‌ ಹಾಗೂ ಹುಮನಾಬಾದ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ವಿವಿಧ ಕೆಲಸಗಳಿಗಾಗಿ ತೆರಳುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

Advertisement

ಅಪಘಾತದಿಂದ ಅನೇಕರಿಗೆ ಗಾಯ: ಈ ಮಾರ್ಗದಿಂದ ತೆರಳುವ ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಬಿದ್ದು ತಲೆ, ಕೈಕಾಲು ಗಂಭೀರ ಗಾಯಗೊಂಡಿದ್ದಲ್ಲದೇ ಮೃತಪಟ್ಟಿದ್ದೂ ಇದೆ. ಇಷ್ಟೆಲ್ಲ ಅವಘಡ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎಂಬುದಕ್ಕೆ ಈವರೆಗೆ ಸಂಭವಿಸಿರುವ ಘಟನೆಗಳೆ ನಿದರ್ಶನ.

ಜಿಲ್ಲೆಯ ಸಂಸದ, ಸಚಿವರು ಹಾಗೂ ಶಾಸಕರೂ ಒಳಗೊಂಡಂತೆ ವಿವಿಧ ಹಂತದ ಚುನಾಯಿತ ಪ್ರತಿನಿಧಿ ಗಳು ಈ ಮಾರ್ಗದಿಂದಲೇ ಬೀದರ್‌ ಗೆ ತೆರಳುತ್ತಾರೆ. ಆದರೆ ನನೆಗುದಿಗೆ ಬಿದ್ದ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸದಿರುವುದು ನೋವಿನ ಸಂಗತಿ.

ಈ ಕುರಿತು ಮೇಲಧಿಕಾರಿಗಳನ್ನು ಸಂಪರ್ಕಿಸಿದರೆ ಗುತ್ತಿಗೆದಾರರು ಮಧ್ಯದಲ್ಲೇ ಕೆಲಸ ಸ್ಥಗಿತಗೊಳಿಸಿ ಹೋಗಿದ್ದರಿಂದ ಕಾರ್ಯ ನನೆಗುದಿಗೆ ಬಿದ್ದಿದೆ. ನಿಯಮಾನುಸಾರ ಹೊಸದಾಗಿ ಟೆಂಡರ್‌ ಕರೆಯಬೇಕು. ಪ್ರಕ್ರಿಯೆ ಪೂರ್ಣಗೊಂಡ ನಂತರ ಆ ಗುತ್ತಿಗೆದಾರರು ಕೆಲಸ ಆರಂಭಿಸಬೇಕು. ಎಲ್ಲವೂ ಅಂದುಕೊಂಡಂತೆ ನಡೆದರೆ ಕನಿಷ್ಟ 7 ತಿಂಗಳು ಬೇಕು ಎನ್ನುತ್ತಾರೆ.

ಹೊಸ ಗುತ್ತಿಗೆದಾರರು ಕೆಲಸ ಪಡೆದು ಕೆಲಸ ಆರಂಭಿಸಲು ಬಹುತೇಕ ವಿಳಂಬವಾಗುವ ಸಾಧ್ಯತೆಗಳಿವೆ. ಹಾಗೆಂದು ಸಂಬಂಧಪಟ್ಟವರು ಕೈಕಟ್ಟಿ ಕುಳಿತುಕೊಳ್ಳುವ ಹಾಗಿಲ್ಲ. ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಣಕ್ಕೆ ತರಲು ದುರುಸ್ತಿ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಲಬುರಗಿ ಇಇ ಕುಮಾರ ಅವರನ್ನು ವಿಚಾರಿಸಿದರೆ ಅದಕ್ಕಾಗಿ ತಗಲುವ 45 ಲಕ್ಷ ರೂ. ಅಂದಾಜು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ.

Advertisement

ಆ ಪ್ರಕ್ರಿಯೆಗೆ ಅನುಮೋದನೆ ಸಿಗುವುದು ತಿಳಿದುಕೊಂಡಷ್ಟು ಸರಳವಲ್ಲ. ಯಾವುದಕ್ಕೂ ಈ ಸಂಬಂಧ ಮೇಲ ಧಿಕಾರಿಗಳ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next