ಹುಮನಾಬಾದ: ಜಾತಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಾಣ ಉದ್ದೇಶದಿಂದ 1875ರಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರ ನೇತೃತ್ವದಲ್ಲಿ ಮುಂಬೈಯಲ್ಲಿ ಆರ್ಯ ಸಮಾಜ ಅಸ್ತಿತ್ವಕ್ಕೆ ಬಂದಿತು. ವೈದಿಕ ಧರ್ಮ, ಆರ್ಯ ಸಂಸ್ಕೃತಿಯನ್ನು ಪುನಃಶ್ಚೇತನಗೊಳಿಸುವುದು ಮತ್ತು ಪ್ರಚಾರ ಪಡಿಸುವುದೇ ಆರ್ಯ ಸಮಾಜದ ಪ್ರಮುಖ ಉದ್ದೇಶ ಎಂದು ಅಜ್ಮೀರದ ಪಂ|ಶ್ರದ್ಧಾನಂದ ಶಾಸ್ತ್ರಿ ಹೇಳಿದರು.
ಪಟ್ಟಣದ ಆರ್ಯ ಸಮಾಜದಲ್ಲಿ ಶ್ರಾವಣ ಅಂಗವಾಗಿ ಒಂದು ತಿಂಗಳ ಕಾಲ ನಡೆದ ಪಾರಿವಾರಿಕ ಸತ್ಸಂಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಸತ್ಯವನ್ನು ತಿರಸ್ಕರಿಸಿ, ಸತ್ಯವನ್ನು ಪುರಸ್ಕರಿಸುವುದೇ ಆರ್ಯ ಸಮಾಜದ ಮೂಲ ಉದ್ದೇಶ. ಮನುಷ್ಯರನ್ನು ದೈಹಿಕವಾಗಿ ಸದೃಢಗೊಳಿಸುವುದು, ಆಧ್ಯಾತ್ಮಿಕವಾಗಿ ಪ್ರಬುದ್ಧಗೊಳಿಸುವುದು, ಜಗತ್ತಿನ ಒಳಿತಿಗಾಗಿ ಶ್ರಮ ವಹಿಸುವುದು, ಪರಸ್ಪರ ಜಾತಿ-ಧರ್ಮ ಭೇದವಿಲ್ಲದೇ ಪ್ರೀತಿ, ನ್ಯಾಯ ಮತ್ತು ಸನ್ಮಾರ್ಗದಲ್ಲಿ ಜೀವಿಸುವುದನ್ನು ಇದು ಬೋಧಿಸಿದೆ. ವೇದ ಒಂದೇ ಸತ್ಯದ ಮೂಲವೆಂದು ಪರಿಗಣಿಸುವುದು, ಮೂರ್ತಿ ಪೂಜೆ ತಿರಸ್ಕರಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣ, ಬಹು ಪತ್ನಿತ್ವ ಮತ್ತು ಬಾಲ್ಯವಿವಾಹ ವಿರೋಧಿಸುವುದು, ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಪ್ರಚುರಪಡಿಸುವುದು ಆರ್ಯ ಸಮಾಜದ ಮುಖ್ಯ ತತ್ವಗಳಾಗಿವೆ ಎಂದು ವಿವರಿಸಿದರು.
ಆರ್ಯ ಪ್ರತಿನಿಧಿ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಸುಭಾಷ ಅಷ್ಠಿಕರ್ ಪ್ರಾಸ್ತಾವಿಕ ಮಾತನಾಡಿ, ಪರಿಸರ ಶುದ್ಧಿಗಾಗಿ ಹವನ ಅತ್ಯಂತ ಅವಶ್ಯ. ಅದೇ ಕಾರಣಕ್ಕಾಗಿ ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಪಾರಿವಾರಿಕ ಸತ್ಸಂಗದ ಹೆಸರಲ್ಲಿ ತಿಂಗಳಲ್ಲಿ ಬೆಳಗ್ಗೆ ಸಂಜೆ ಸೇರಿ 75ಕ್ಕೂ ಅಧಿಕ ಮನೆಗಳಲ್ಲಿ ಹವನ ನಡೆಸುತ್ತೇವೆ. ಹಿಂದೆಂದಿಗಿಂತ ಈ ಬಾರಿ ಹವನ ಆಯೋಜನೆ ಬಗ್ಗೆ ಸಾರ್ವಜನಿಕರಿಂದ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿರುವುದು ಆಯೋಜಕರಲ್ಲಿ ನೆಮ್ಮದಿ ತಂದಿದೆ ಎಂದರು.
ಶಾಂತಿದೇವಿ ಶಾಸ್ತ್ರಿ ನಡೆಸಿಕೊಟ್ಟ ಭಜನೆ ನೆರೆದ ಆರ್ಯ ಸಮಾಜ ಅನುಯಾಯಿಗಳ ಮನಸೂರೆಗೊಂಡಿತು. ಆರ್ಯ ಪ್ರತಿನಿಧಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ನಾರಾಯಣರಾವ್ ಚಿದ್ರಿ, ಬಸವರಾಜ ಆರ್ಯ, ತಾಲೂಕು ಉಪ ಪ್ರಧಾನ ದೇವಿದಾಸ ಸೂರ್ಯವಂಶಿ, ಪ್ರಧಾನ ಕಾರ್ಯದರ್ಶಿ ಗೋವಿಂದಸಿಂಗ್ ತಿವಾರಿ, ದಶರಥ ಆರ್ಯ, ರಾಹುಲ ಘವಾಳ್ಕರ್, ಬುಜಂಗರಾವ್ ಖಮೀತ್ಕರ್, ದಿಗಂಬರರಾವ್ ಒಳಸೆ, ಶರಣರೆಡ್ಡಿ, ವಿಜಯಕುಮಾರ ಸಾಯಿಗಾಂವಕರ್, ಬಸವರಾಜ ಭಾವಿ, ಗುರುನಾಥ ಖಮೀತ್ಕರ್, ಪ್ರಕಾಶ ಸುವರ್ಣಕರ್ ಇದ್ದರು. ಇದೇ ಸಂದರ್ಭದಲ್ಲಿ ಹವನ ಪೂರ್ಣಾಹುತಿಯಲ್ಲಿ 32 ದಂಪತಿಗಳು ಭಾಗವಹಿಸಿ ಗಮನ ಸೆಳೆದರು.