ಹುಮನಾಬಾದ: ಕ್ರೀಡೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯ ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕರಕುಶಲ ಕಲೆಯ ಶಿಕ್ಷಣ ನೀಡಿ ಪ್ರೋತ್ಸಾಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಸಲಹೆ ನೀಡಿದರು.
ಮಾಣಿಕನಗರದ ಮಾಣಿಕಪ್ರಭು ಕ್ರೀಡಾಂಗಣದಲ್ಲಿ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ನಗರೇಶ್ವರ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಹುಮನಾಬಾದ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗವಾದ ಇಂದು ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ಕಠಿಣ ಪರಿಶ್ರಮಪಟ್ಟು ಸ್ಪರ್ಧೆ ಒಡ್ಡುವುದು ಪ್ರಸ್ತುತ ಅನಿವಾರ್ಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಕ್ರಿಯಾಶೀಲತೆ ವೃದ್ಧಿಯಾಗಿ ಓದಿನಲ್ಲಿ ಆಸಕ್ತಿ ಹೆಚ್ಚುತ್ತದೆ. ನಿತ್ಯ ಕ್ರೀಡಾ ಅಭ್ಯಾಸದ ಜೊತೆಯಲ್ಲಿ ಯೋಗ ಅಭ್ಯಾಸಕ್ಕೂ ಸಮಯ ಮೀಸಲಿಡಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರವಣಕುಮಾರ ಮಾತನಾಡಿ, ಶಾಲೆಯ ದೈಹಿಕ ಶಿಕ್ಷಕರ ಶಿಸ್ತು ಪಾಲನೆ ಇಡೀ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾದರಿ ಆಗಿರುವುದರಿಂದ ದೈಹಿಕ ಶಿಕ್ಷಣ ಶಿಕ್ಷಕರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು. ಸರ್ಕಾರಿ ಪದವಿಪೂರ್ವ ಕಾಲೇಜು ಉಪಪ್ರಾಚಾರ್ಯ ಕಾಶೀನಾಥ ಕೂಡ್ಲಿ ಮಾತನಾಡಿ, ಶಿಸ್ತು ಪಾಲನೆಗೆ ಮೂಲ ಕ್ರೀಡೆ. ಪ್ರತಿಯೊಬ್ಬರು ಅದಕ್ಕಾಗಿ ಸಮಯ ನಿಶ್ಚಿತ ಮಾಡಬೇಕೆಂದು ಸಲಹೆ ನೀಡಿದರು.
ನಗರೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ ರಘೋಜಿ ಮಾತನಾಡಿ, ಮೂರುವರೆ ದಶಕದ ಹಿಂದೆ ನಗರೇಶ್ವರ ದೇವಸ್ಥಾನದಲ್ಲಿ ಚಿಕ್ಕ ಕೋಣೆಗಳಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆ ಈಗ ಅತ್ಯಾಧುನಿಕ ಸೌಲಭ್ಯ ಉಳ್ಳ ಅತ್ಯಾಕರ್ಷಕ ಕಟ್ಟಡ ಜೊತೆಗೆ ಹೈಟೆಕ್ ಶೌಚಾಲಯ ಕೂಡ ನಿರ್ಮಿಸಲಾಗಿದೆ. ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಶಿಕ್ಷಣ ನೀಡಲಾಗುತ್ತಿದ್ದು, ಹಲವು ವರ್ಷಗಳಿಂದ ಎಸ್‌ಎಸ್‌ಎಲ್ಸಿ ಫಲಿತಾಂಶ ಶೇ.100ರಷ್ಟು ಬರುತ್ತಿರುವುದು ನಮ್ಮ ಸಂಸ್ಥೆ ಸಿಬ್ಬಂದಿ ಶ್ರಮಕ್ಕೆ ಸಾಕ್ಷಿ ಎಂದರು.
ಉಪಾಧ್ಯಕ್ಷ ದತ್ತಕುಮಾರ ಚಿದ್ರಿ ಮಾತನಾಡಿ, ಸಾರ್ವಜನಿಕ ಗಣೇಶ ಉತ್ಸವ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತೀ ವರ್ಷ ಆಯೋಜಿಸುವ ಪ್ರತಿಭಾ ಕಾರಂಜಿ ಸ್ಪರ್ಧೆ ಸಂದರ್ಭದಲ್ಲೂ ನಮ್ಮ ಮಕ್ಕಳದು ಎತ್ತಿದ ಕೈ. ಸರ್ಕಾರ ಏರ್ಪಡಿಸುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ತನು-ಮನ ಧನದಿಂದ ಅಗತ್ಯ ಸಹಾಯ ಸಹಕಾರ ನೀಡುತ್ತ ಬಂದಿದ್ದೇವೆ. ಭವಿಷ್ಯದಲ್ಲೂ ನೀಡುತ್ತೇವೆ ಎಂದರು.
ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಜಾಜಿ, ಸಹ ಕಾರ್ಯದರ್ಶಿ ಲಕ್ಷ್ಮಣರಾವ್ ಹಣಕುಣಿ, ಕೋಶಾಧ್ಯಕ್ಷ ಜೈಪಾಲ್ ಗುಪ್ತಾ, ನಿರ್ದೇಶಕರಾದ ಪ್ರೇಮಕುಮಾರ ಜಾಜಿ, ಸಂಧ್ಯಾರಾಣಿ ಎನ್.ರಘೋಜಿ, ನಿರ್ಮಲಾ ರಾಯಚೂರಕರ್, ನಾರಾಯಣರಾವ್ ಚಿದ್ರಿ ಇದ್ದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಅನಂತರೆಡ್ಡಿ ಶಿವರಾಯ್ ಸ್ಪರ್ಧೆಗೆ ಮಾರ್ಗದರ್ಶನ ನೀಡಿದರು.
ಪ್ರೌಢಶಾಲೆ ಮುಖ್ಯಶಿಕ್ಷಕ ಗೇಮು ಚವಾಣ ಸ್ವಾಗತಿಸಿದರು. ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಮೇಶ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಕುಮಾರ ಕಣಜಿ ನಿರೂಪಿಸಿದರು. ಪ್ರೌಢಶಾಲೆ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕ ಅಂಬಾದಾಸ ಪೋಳ್ ವಂದಿಸಿದರು. ಸ್ಪರ್ಧೆ ಉದ್ಘಾಟನೆಗೂ ಮುನ್ನ ನಗರೇಶ್ವರ ಶಾಲೆಯಿಂದ ಮಾಣಿಕಪ್ರಭು ಕ್ರೀಡಾಂಗಣವರೆಗೆ ಮ್ಯಾರಾಥಾನ್ ನಡೆಯಿತು.