Advertisement

ಸಮಸ್ಯೆ ನಿವಾರಿಸದಿದ್ದರೆ ಮತ ಬಹಿಷ್ಕಾರ

01:05 PM May 18, 2019 | Naveen |

ಹುಮನಾಬಾದ: ಪುರಸಭೆ ಆಡಳಿತದ ನಿರ್ಲಕ್ಷದಿಂದಾಗಿ ಪಟ್ಟಣದ ಎನ್‌ಜಿಒ ಬಡಾವಣೆಗೆ ವರ್ಷದಿಂದ ಮಲಿನ ನೀರು ಪೂರೈಕೆ ಆಗುತ್ತಿರುವ ಕಾರಣ ಬಡಾವಣೆ ನಿವಾಸಿಗಳು ರೋಗ ಭೀತಿಯಲ್ಲಿ ಕಾಲಕಳೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲು ಬಡಾವಣೆ ನಿವಾಸಿಗಳು ನಿರ್ಧರಿಸಿದ್ದಾರೆ.

Advertisement

ಪಟ್ಟಣದ ಪ್ರಮುಖ ವಾರ್ಡ್‌ನಲ್ಲಿ ಒಂದಾಗಿರುವ ಹಣಕುಣಿ ಮಾರ್ಗಕ್ಕೆ ಹೊಂದಿಕೊಂಡಿರುವ ಎನ್‌ಜಿಒ ಬಡಾವಣೆ ನಿರ್ಲಕ್ಷ್ಯಕ್ಕೊಳಗಾಗಿದೆ. ಸಿದ್ಧಾರ್ಥ ಕಾಲೋನಿ ನಿವಾಸಿಗಳ ಸಂಪೂರ್ಣ ತ್ಯಾಜ್ಯ ಹರಿದು ಹೋಗಲು ಅವಕಾಶವಿಲ್ಲದೇ ರಸ್ತೆ ಪಕ್ಕದಲ್ಲೇ ಸಂಗ್ರಹವಾಗುತ್ತಿದೆ. ಇದು ತ್ಯಾಜ್ಯದ ಕಥೆಯಾದರೆ ಎನ್‌ಜಿಒ ಬಡಾವಣೆಗೆ ನೀರು ಪೂರೈಸುವ ವಾಲ್ ಆ ಗಲೀಜಿನ ಮಧ್ಯದಲ್ಲಿ ಇರುವುದೇ ಇಷ್ಟೆಲ್ಲಕ್ಕೂ ಕಾರಣ. ನಿತ್ಯ ನೀರು ಪೂರೈಸುವ ಕಾರ್ಮಿಕ ಆ ಗಲೀಜಿನಲ್ಲೇ ಕೈ ಹಾಕಿ ವಾಲ್ ತಿರುಗಿಸಬೇಕು. ಅಲ್ಲಿಂದ ಪೂರೈಕೆ ಆಗುವ ನೀರು ಮಲೀನವಾಗಿರುವುದರಿಂದ ಕುಡಿಯುವುದು ದೂರದ ಮಾತು ಬಳಕೆಗೂ ಯೋಗ್ಯವಿರುವುದಿಲ್ಲ.

ಮಲೀನ ನೀರು ಪೂರೈಕೆ ಕಾರಣ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ವೃದ್ಧರು ಟೈಫಾಯಿಡ್‌, ಶೀತ, ತಲೆನೋವು ಸೇರಿದಂತೆ ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಚಿಕಿತ್ಸೆಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿದೆ. ಒಂದೆರಡು ದಿನ ಮಾತ್ರೆ ಮತ್ತು ಚುಚ್ಚುಮದ್ದು ತೆಗೆದುಕೊಳ್ಳದಿದ್ದರೆ ರೋಗ ಮತ್ತಷ್ಟು ಉಲ್ಬಣಗೊಂಡು ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಾರೆ.

ಈ ವಿಷಯವನ್ನು ಹಲವು ಬಾರಿ ಸಂಬಂಧಪಟ್ಟ ವಾರ್ಡ್‌ ಸದಸ್ಯರೂ ಸೇರಿದಂತೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡದಿರುವುದರಿಂದ ಸಮಸ್ಯೆ ಹಾಗೇ ಉಳಿದಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿ ಕಾರಣ.

ಮತದಾನ ಬಹಿಷ್ಕಾರ: ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಗೆ ಮುನ್ನ ಸಾರ್ವಜನಿಕ ತ್ಯಾಜ್ಯ ಸುಗಮವಾಗಿ ಸಾಗಲು ಪರ್ಯಾಯ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ನೀರು ಪೂರೈಕೆ ವಾಲ್ ಸ್ವಚ್ಛ ಸ್ಥಳದಲಿ ಅಳವಡಿಸಿ, ಶುದ್ಧ ನೀರು ಪೂರೈಕೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ ಮತದಾನ ಬಹಿಷ್ಕಕರಿಸಲು ಎನ್‌ಜಿಒ ಬಡಾವಣೆ ನಿವಾಸಿಗಳು ನಿರ್ಧಾರಿಸಿದ್ದಾರೆ.

Advertisement

ಬುದ್ಧಿಜೀವಿಗಳ ಬಡಾವಣೆ ನಿವಾಸಿಗಳ ಈ ಸಮಸ್ಯೆ ವರ್ಷ ಕಳೆದರೂ ಬಗೆಹರಿದಿಲ್ಲ. ಚುನಾವಣೆಯ ಈ ಸಂದರ್ಭದಲ್ಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬಡಾವಣೆ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿ, ಶಾಶ್ವತ ಪರಿಹಾರ ಒದಗಿಸುತ್ತಾರೋ ಅಥವಾ ನಾಮ್ಕೆ ವಾಸ್ತೆ ಎಂದಿನಂತೆ ಸುಳ್ಳು ಭರವಸೆ ನೀಡಿ, ದಿನ ಮುಂದೂಡುತ್ತಾರೊ ನೋಡಬೇಕಿದೆ. ಅಷ್ಟಕ್ಕೂ ಅವರಂತೆ ಎಚ್ಚರಿಕೆ ನೀಡಿದ್ದಾಗಿದೆ. ಸಮಸ್ಯೆ ಬಗೆಹರಿದರೆ ಮತ, ಇಲ್ಲದಿದ್ದರೇ ಬಹಿಷ್ಕಾರ. ಸಮಸ್ಯೆ ಬಗೆಹರಿಯುತ್ತಾ ಅಥವಾ ಮತದಾನ ಬಹಿಷ್ಕಾರ ಆಗುತ್ತಾ ಎಂಬುದನ್ನು ಕಾದು ನೋಡಬೇಕು.

ಈ ಜನಕ್ಕೆ ಮತ ಕೇಳುವುದು ಮಾತ್ರ ಗೊತ್ತು. ಸಮಸ್ಯೆ ಬಗೆಹರಿಸುವುದೆಂದರೆ ಅಲರ್ಜಿ. ಈ ಸಮಸ್ಯೆ ಕಳೆದ ಒಂದು ವರ್ಷದಿಂದ ಬಡಾವಣೆ ನಿವಾಸಿಗಳನ್ನು ಕಾಡುತ್ತಿದೆ. ಬಡಾವಣೆಯ ಬಹುತೇಕ ಮಕ್ಕಳು, ವದ್ಧರು ರೋಗದಿಂದ ಬಳಲುತ್ತಿದ್ದಾರೆ. ಈ ಜನಪ್ರತಿನಿಧಿ, ಅಧಿಕಾರಿಗಳಿಗೇ ಕನಿಷ್ಟ ಮಾನವೀಯತೆ ಬೇಡ್ವಾ? ಸದ್ಯ ಎಚ್ಚರಿದ್ದೇವೆ. ನೋಡೋಣ ಏನಾಗುತ್ತದೊ.
ಎಂ.ನಾಗರಾಜ,
ಎನ್‌ಜಿಒ ಕಾಲೋನಿ ನಿವಾಸಿ

ನಾನು ಹೊಸದಾಗಿ ಬಂದಿರುವೆ. ನಮ್ಮ ಸಿಬ್ಬಂದಿ ಪೈಕಿ ಯಾರೊಬ್ಬರೂ ಈ ಸಮಸ್ಯೆಯನ್ನು ಈವರೆಗೂ ನನ್ನ ಗಮನಕ್ಕೆ ತಂದಿಲ್ಲ. ಸಮಸ್ಯೆ ನಿಜಕ್ಕೂ ಗಂಭೀರವಾಗಿದೆ. ತೆರಿಗೆ ಪಾವತಿಸುವ ಪ್ರತಿಯೊಬ್ಬರಿಗೆ ಮೂಲಸೌಲಭ್ಯ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯ. ಮತದಾನ ಬಹಿಷ್ಕಾರಕ್ಕೆ ಅವಕಾಶ ಮಾಡದಂತೆ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುತ್ತೇವೆ.
ಮನೋಜಕುಮಾರ,
ಪುರಸಭೆ ಮುಖ್ಯಾಧಿಕಾರಿ

ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next