ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮುಜರಾಯಿ ವ್ಯಾಪ್ತಿಗೊಳಪಡುವ ವೀರಭದ್ರೇಶ್ವರ ದೇವಸ್ಥಾನ ಬಳಿಯ ಶೆಡ್‌ಗಳನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಖಾಯಂ ಮಳಿಗೆಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಜೂ.26ರಂದು ಶೆಡ್‌ಗಳನ್ನು ತೆರವುಗೊಳಿಸಲಾಗುತ್ತಿದ್ದು, ಈಗಾಗಲೇ ನೀಡಲಾಗಿರುವ ನೋಟಿಸ್‌ನಿಂದ ಮೂರು ದಶಕದಿಂದ ಅಲ್ಲಿ ವ್ಯಾಪಾರ ಮಾಡಿ ಉಪಜೀವನ ನಡೆಸುತ್ತಿದ್ದ ವ್ಯಾಪಾರಿಗಳಲ್ಲಿ ಆತಂಕ ಮೂಡಿದೆ.
ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ತೋರಿದ ಉದಾರ ಮನೋಭಾವದಿಂದ ಹಳೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಮೂರು ದಶಕದಿಂದ ನೂರಾರು ಕುಟುಂಬಗಳು ಸಣ್ಣಪುಟ್ಟ ಶೆಡ್‌ನಲ್ಲಿ ಸಣ್ಣ ವ್ಯಾಪಾರ ನಡೆಸಿ ಉಪಜೀವನ ಮಾಡುತ್ತಿದ್ದವು. 1997ನೇ ಸಾಲಿನಲ್ಲಿ 22 ಖಾಯಂ ಅಂಗಡಿ ನಿರ್ಮಿಸಿ ಅನುಕೂಲ ಮಾಡಿಕೊಟ್ಟಿತ್ತು. ಆದರೆ ಆ ವಾಣಿಜ್ಯ ಸಂರ್ಕೀಣಕ್ಕೆ ಹೊಂದಿಕೊಂಡ ಬಿಡಿ ಭಾಗದಲ್ಲಿ ಖಾಯಂ ಅಂಗಡಿ ನಿರ್ಮಿಸದ ಕಾರಣ ಅಲ್ಲಿಂದ ಹಳೆ ತಹಶೀಲ್ದಾರ್ ಕಚೇರಿ ವರೆಗಿನ ಸ್ಥಳದಲ್ಲಿ ಸ್ವತಃ ಶಡ್ ಹಾಕಿಕೊಂಡು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಟ್ಟಿರಿಂದ 25 ವರ್ಷಗಳ ಕಾಲ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು.
ಈಗ ನೊಟೀಸ್ ಜಾರಿ: ಶೆಡ್, ರಸ್ತೆ ಮುಂಬದಿ ಹಾಗೂ ಹಿಂಬದಿ ವ್ಯಾಪಾರಿಗಳಿಗೆ ಜೂನ್ 9ರಂದು ಮುಜರಾಯಿ ಇಲಾಖೆ ಈಗಾಗಲೇ ನೊಟೀಸ್ ನೀಡಿದೆ. ಸ್ವಯಂ ಪ್ರೇರಿತವಾಗಿ ತೆರವು ಮಾಡಕೊಳ್ಳಲು ಈ ನೊಟೀಸ್ ನೀಡಿದ್ದರೆ ಚಿಂತೆ ಇರಲಿಲ್ಲ. ತೆರವಿಗಾಗಿ ಜೆಸಿಬಿಗೆ ತಗಲುವ ಬಾಡಿಗೆಯನ್ನು ಶೆಡ್ ವ್ಯಾಪಾರಿಗಳಿಂದ ಭರಿಸಲು 26ರ ವರೆಗೆ ಗಡವು ನೀಡಲಾಗಿದೆ. ನಿಗದಿತ ಸಮಯದೊಳಗೆ ತೆರವು ಮಾಡಿಕೊಳ್ಳದಿದ್ದರೆ ಇಲಾಖೆ ಜೆಸಿಬಿಯಿಂದ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಕೇವಲ ತೆರವುಗೊಳಿಸುವುದಾಗಿ ಮಾತ್ರವಲ್ಲ ಹಣ ವಸೂಲಿ ಮಾಡಲಾಗುವುದು ಎಂದು ನೊಟೀಸ್‌ನಲ್ಲಿ ಸ್ಪಷ್ಟವಾಗಿ ನಮೂದಿಸಿರುವುದು ಎಲ್ಲ ವ್ಯಾಪಾರಿಗಳ ನಿದ್ದೆಗೆಡಿಸಿದೆ. ಶೆಡ್ ತೆರವುಗೊಳಿಸಿದ ಸ್ಥಳದಲ್ಲಿ ಖಾಯಂ ಅಂಗಡಿ ನಿರ್ಮಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಶೆಡ್ ತೆರವುಗೊಳಿಸಿದ ಬೆನ್ನಲ್ಲೇ ಹೊಸ ವಾಣಿಜ್ಯ ಮಳಿಗೆ ನಿರ್ಮಿಸುವುದಕ್ಕಾಗಿ ಯೋಜನೆ ರೂಪಿಸಿ, ಶೀಘ್ರದಲ್ಲಿ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭಿಸಿ, ಪೂರ್ಣಗೊಳಿಸಿ ವ್ಯಾಪಾರಿಗಳಿಗೆ ಬಾಡಿಗೆಯಿಂದ ನೀಡಲು ನಿರ್ಧರಿಸಿದೆ.
ಶೆಡ್ ವ್ಯಾಪಾರಿಗಳ ಅಳಲು: ಎರಡೂವರೆ ದಶಕದಿಂದ ಈ ಸ್ಥಳದಲ್ಲೇ ವ್ಯಾಪಾರ ನಡೆಸಿ, ಉಪಜೀವನ ನಡೆಸುತ್ತಿದ್ದ ನಾವು, ಈಗ ಶೆಡ್ ತೆರವುಗೊಳಿಸಿದರೆ ಎಲ್ಲಿ ಹೋಗಬೇಕು? ಹೇಗೆ ಹೊಟ್ಟೆ ಹೊರೆಯಬೇಕು? ಹೊಸ ಅಂಗಡಿ ಯಾವಾಗ ನಿರ್ಮಾಣ ಆಗುತ್ತವೋ ಏನೋ ? ಉಳ್ಳವರಾದರೆ ಹೇಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಬಡವರಾದ ನಮ್ಮ ಗತಿ ಏನು? ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರೂ ಆದ ಸಚಿವ ರಾಜಶೇಖರ ಪಾಟೀಲ, ಉಪವಿಭಾಗಾಧಿಕಾರಿ ಜ್ಞಾನೇಂದ್ರ ಗಂಗವಾರ್ ಅವರು ಇಲ್ಲಿನ ವ್ಯಾಪಾರಿಗಳಿಗೆ ತಾತ್ಕಾಲಿಕ ಸ್ಥಳದ ವ್ಯವಸ್ಥೆ ಮಾಡಿ ಉಪಜೀವನ ಸಾಗಿಸಲು ಅನುಕೂಲ ಕಲ್ಪಿಸಬೇಕು ಎಂಬುದು ಶೆಡ್ ವ್ಯಾಪಾರಿಗಳ ಅಳಲು.
ಈಗಾಗಲೇ ರಸ್ತೆ ವಿಸ್ತರಣೆಯಾಗಿದೆ. ಸೌಂದರ್ಯ ವೃದ್ಧಿಗಾಗಿ ಖಾಯಂ ಮಳಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ ಕಾರಣದಿಂದ ಸ್ವಲ್ಪ ದಿನಕಾಲ ವಿಳಂವಾಗಿದೆ. ತೆರವಾದ ನಂತರ ನವೆಂಬರ್ ಒಳಗಾಗಿ ಮಳಿಗೆ ಸಿದ್ಧಗೊಳ್ಳಲಿವೆ. ತೀರಾ ಬಡವರಿಗೆ ತಾತ್ಕಾಲಿಕವಾಗಿ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡುವ ಆಲೋಚನೆ ಇಲಾಖೆ ಮುಂದಿದ್ದು, ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ.
•
ಜ್ಞಾನೇಂದ್ರ ಗಂಗವಾರ್
ಉಪವಿಭಾಗಾಕಾರಿ, ಬಸವಕಲ್ಯಾಣ