ಹುಮನಾಬಾದ: ಬುದ್ಧಿ ಜೀವಿಗಳ ಬಡಾವಣೆ ಎಂದೇ ಹೇಳಲಾಗುವ ಪಟ್ಟಣದ ಹಣಕುಣಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಶಿಕ್ಷಕರ ಬಡಾವಣೆಯಲ್ಲಿ ಮೂಲ ಸೌಲಭ್ಯವಿಲ್ಲದ ಕಾರಣ ನಿವಾಸಿಗಳ ಮನೆ ತ್ಯಾಜ್ಯ ರಸ್ತೆಯಲ್ಲೇ ಸಂಗ್ರಹವಾಗಿ ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಹಣಕುಣಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಮೊಟ್ಟ ಮೊದಲು ಹುಟ್ಟಿಕೊಂಡದ್ದೇ ಶಿಕ್ಷಕರ ಬಡಾವಣೆ. ಸಿಸಿ ರಸ್ತೆ ನಿರ್ಮಿಸಿದ್ದ ಜಾಗದಲ್ಲಿ ಒಳ ಚರಂಡಿ ನಿರ್ಮಿಸುವ ಉದ್ದೇಶದಿಂದ ಅಗೆದ ರಸ್ತೆಯನ್ನು ನಾಲ್ಕೈದು ವರ್ಷಗಳಿಂದ ದುರಸ್ತಿಗೊಳಿಸಿಲ್ಲ. ಇರುವ ಚರಂಡಿಗಳೆಲ್ಲವೂ ಮಣ್ಣಿನಲ್ಲಿ ಮುಚ್ಚಿಹೋಗಿವೆ. ಪರ್ಯಾಯ ವ್ಯವಸ್ಥೆ ಇಲ್ಲದೇ ನಿವಾಸಿಗಳ ಮನೆಯ ತ್ಯಾಜ್ಯ ರಸ್ತೆಯಲ್ಲೇ ಸಂಗ್ರಹವಾಗುತ್ತಿದೆ.
ಕಲ್ಲೂರ ಮುಖ್ಯ ರಸ್ತೆಯಿಂದ ಹಣಕುಣಿ ಮಾರ್ಗಕ್ಕೆ ತೆರಳುವ ಈ ರಸ್ತೆಯಲ್ಲಿ ಎರಡು ದೊಡ್ಡ ಗಾತ್ರದ ಇಳಿಜಾರು ಪ್ರದೇಶ ಇವೆ. ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿರುವ ಕಾರಣ ಇಲ್ಲಿ ನಿತ್ಯ ಅದೆಷ್ಟೋ ಜನ ವಾಹನ ಸಮೇತ ಬಿದ್ದು ಗಾಯಗೊಂಡಿದ್ದಾರೆ. ಶೀಘ್ರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸುವಂತೆ ವಿವಿಧ ಹಂತದ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸದ್ಯ ಇದೊಂದು ತಿಂಗಳು ಹೇಗೋ ತಾಳಿಕೊಳ್ಳಬಹುದು. ಆದರೆ ಮೇ ಕೊನೆ ವಾರದಿಂದ ಮಳೆ ಆರಂಭವಾದರೆ ಇಲ್ಲಿ ಸಂಚರಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಮತ್ತು ಚರಂಡಿ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.
ಅಭಿವೃದ್ಧಿ ಕುರಿತು ಸಂಬಂಧಪಟ್ಟವರು ಕಿಂಚಿತ್ತೂ ಗಮನಿಸದೇ ಇರುವುದು ನೋಡಿದರೆ ಶಿಕ್ಷಕರ ಬಡಾವಣೆ ಹುಮನಾಬಾದನಲ್ಲಿ ಇದೆಯೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ. ನಮ್ಮಿಂದ ಮತ ಪಡೆದು ಗೆದ್ದವರ್ಯಾರಿಗೂ ಇದು ಈಗ ಕಾಣದಿರುವುದು ನೋವಿನ ಸಂಗತಿ. ಸಮಸ್ಯೆ ಬಗೆಹರಿಸದಿದ್ದಲ್ಲಿ ಶೀಘ್ರದಲ್ಲೇ ಬರುವ ಪುರಸಭೆ ಚುನಾವಣೆಯಲ್ಲಿ ಸಂಬಂಧಿತರಿಗೆ ತಕ್ಕಪಠ ಕಲಿಸುವುದು ಖಚಿತ.
•
ಮಾಣಿಕಪ್ಪ, ಶಿಕ್ಷಕರ ಬಡಾವಣೆ ನಿವಾಸಿ
ಚರಂಡಿ ಮತ್ತು ರಸ್ತೆ ನಿರ್ಮಾಣ ಸಂಬಂಧ ಅಗತ್ಯ ಅನುದಾನ ನಿಗದಿಪಡಿಸಲಾಗಿದೆ. ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಲಸ ಆರಂಭಿಸಿಲ್ಲ. ಸದ್ಯ ಮುಚ್ಚಿಹೋದ ಚರಂಡಿಯ ಹೂಳೆತ್ತಿಸಿ, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ಆ ಸಂಬಂಧ ಎಸ್‌ಎಫ್‌ಸಿ ಅಡಿ 58 ಲಕ್ಷ ರೂ. ನಿಗದಿಪಡಿಸಲಾಗಿದ್ದು, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮಳೆಗಾಲದ ನಂತರ ಸಮಸ್ಯಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು.
•
ಗುಜ್ಜಮ್ಮ ಕನಕಟಕರ್, ಪುರಸಭೆ ಮಾಜಿ ಅಧ್ಯಕ್ಷೆ
•ಶಶಿಕಾಂತ ಕೆ.ಭಗೋಜಿ