Advertisement

ಶರಣರ ಆದರ್ಶ ಪಾಲಿಸಿದರೆ ಜಾತ್ರೆ ಸಾರ್ಥಕ

10:19 AM Aug 19, 2019 | Team Udayavani |

ಹುಮನಾಬಾದ: ಕಿನ್ನರಿ ಬೊಮ್ಮಯ್ಯ ಶರಣರು ಸೇರಿದಂತೆ 12ನೇ ಶತಮಾನದ ಸ‌ಮಸ್ತ ಶಿವಶರಣರು, ಮಹಾತ್ಮರು ಮತ್ತು ದಾರ್ಶನಿಕರ ಆದರ್ಶ ಪಾಲಿಸಿದರೆ ಮಾತ್ರ ಜಾತ್ರೆ ನಡೆಸಿದ್ದಕ್ಕೂ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಇಂಥ ಉತ್ಸವಗಳನ್ನು ಕೇವಲ ವೇದಿಕೆ ಭಾಷಣ, ಮೆರವಣಿಗೆಗೆ ಸೀಮಿತವಾಗಿಸದೇ ನಿಜ ಆಚರಣೆಗೆ ತರಲು ಯತ್ನಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಹಳ್ಳಿಖೇಡ(ಕೆ) ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶರಣರ ಕಿನ್ನರಿ ಬೊಮ್ಮಯ್ಯನವರ 50ನೇ ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ನಾಡು ಸಂತರು, ಶರಣರು ನಡೆದಾಡಿದ ಪವಿತ್ರ ನೆಲ. ಅಂಥ ಮಹಾತ್ಮರು ಜೀವಿಸಿದ ಈ ಪುಣ್ಯ ಭೂಮಿಯಲ್ಲಿ ಜನ್ಮ ಪಡೆದ ನಾವೇ ಧನ್ಯರು. ಕೊಡಂಬಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಡುವ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಈವರೆಗೆ ಸಾಕಷ್ಟು ಅನುದಾನ ನೀಡಿದ್ದೇನೆ. ದೇವಸ್ಥಾನದ ಸಮಿತಿಯವರ ಬೇಡಿಕೆ ಆಧರಿಸಿ, ಮುಂಬರುವ ದಿನಗಳಲ್ಲಿ ಒಂದೇ ಅವಧಿಯಲ್ಲಿ ಆಗದಿದ್ದರೂ ಹಂತಹಂತವಾಗಿ ಅಗತ್ಯ ಅನುದಾನ ಬಿಡುಗಡೆಗೊಳಿಸಿ, ಅಭಿವೃದ್ಧಿಗಾಗಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠದ ಡಾ|ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಾದಿ ಶರಣರ ಸಪ್ತಸೂತ್ರ ಜೀವನದಲ್ಲಿ ಅಳವಡಿಸಿಳ್ಳಬೇಕು. ಅಧರ್ಮ, ಅನಾಚಾರಗಳನ್ನು ತೊರೆದು, ಧರ್ಮ, ಆಚಾರ, ಪರೋಪಕಾರ ಮನೋಭಾವದಿಂದ ಜೀವನ ಸಾಗಿಸುವುದರೊಂದಿಗೆ ಮಹಾತ್ಮರು, ದಾರ್ಶನಿಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಅಕ್ಕ ಡಾ|ಗಂಗಾಂಬಿಕೆ ಮಾತನಾಡಿ, ಬಸವಾದಿ ಶರಣರು ಕಲ್ಯಾಣ ನಾಡಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಅಭೂತಪೂರ್ವವಾದ ಕಾಯಕ ಸಂದೇಶ ನೀಡಿ, ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಕಾರಣ ಇಂದಿನ ವಿದ್ಯಾರ್ಥಿಗಳು, ವಿಶೇಷವಾಗಿ ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಸಚ್ಚಾರಿತ್ರ್ಯ ಮೈಗೂಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

Advertisement

ನೇತೃತ್ವ ವಹಿಸಿದ್ದ ಬೆಂಗಳೂರು ಕೈಲಾಸ ಆಶ್ರಮದ ಚರಮೂರ್ತಿ ಸಿದ್ಧರಾಮ ಶರಣರು ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತೀಬಾಯಿ ಶೇರಿಕಾರ, ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೀರಣ್ಣ ಪಾಟೀಲ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವೇಂದ್ರಪ್ಪ ಪೋಲಾ, ದೇವಸ್ಥಾನ ಸಮಿತಿಯ ಸಮಸ್ತ ಪದಾಧಿಕಾರಿಗಳು ಇದ್ದರು.

ಇದೇ ವೇಳೇ ಎಸ್‌ಎಸ್‌ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಶಾಲೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಗಳ ಪ್ರದರ್ಶನ ನೀಡಿ, ಪ್ರೇಕ್ಷಕರ ಮನಸೂರೆಗೊಂಡರು. ಸುಭಾಷ ವಾರದ ಸ್ವಾಗತಿಸಿದರು. ಭಕ್ತರಾಜ ಚಿತ್ತಾಪೂರೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next