ಹುಮನಾಬಾದ: ಗಣೇಶ ಪ್ರತಿಷ್ಠಾಪನೆ ಸ್ಥಳ ಅಥವಾ ಅದರ ಆಸುಪಾಸು ನಿಯಮ ಬಾಹಿರ ಚಟುವಟಿಕೆಗಳು ನಡೆದಿರುವುದು ಗಮನಕ್ಕೆ ಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಪಿಐ ಜೆ.ಎಸ್.ನ್ಯಾಮಗೌಡರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಗಣೇಶ ಪ್ರತಿಷ್ಠಾಪನೆ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಅವಕಾಶವಿಲ್ಲದಂತೆ ಎಚ್ಚರ ವಹಿಸಬೇಕು. ವೇದಿಕೆಯಲ್ಲಿ ಯಾವುದೇ ಕೋಮು ಪ್ರಚೋದನೆಗೆ ಅವಕಾಶ ಕಲ್ಪಿಸುವಂತ ಭಾಷಣಕಾರರನ್ನು ಆಹ್ವಾನಿಸುವುದಾಗಲಿ, ಹಾಡುಗಳನ್ನು ಹಚ್ಚುವುದು ಕಾನೂನು ಪ್ರಕಾರ ಅಪರಾಧ. ಪ್ರತಿಷ್ಠಾಪನಾ ಸ್ಥಳದ ಆಸುಪಾಸು ಸ್ಪೋಟಕ ವಸ್ತುಗಳು ಇರದಂತೆ ಎಚ್ಚರ ವಹಿಸಬೇಕು. ಉತ್ಸವದ ಆರಂಭದಿಂದ ವಿಸರ್ಜನೆ ವರೆಗೆ ನಡೆಯುವ ಸಾಂಸ್ಕೃತಿಕ ಚಟುವಟಿಕೆಯನ್ನು ನಿತ್ಯ ರಾತ್ರಿ 10:00ರೊಳಗೆ ಪೂರ್ಣಗೊಳಿಸಬೇಕು. ಸಂಜೆ 6:00ರಿಂದ ರಾತ್ರಿ 10:00ರ ವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ದಿನದ 24ಗಂಟೆ ಗಣೇಶ ಪೆಂಡಾಲ್ ಬಳಿ ಸಮಿತಿ ಸ್ವಯಂ ಸೇವಕರನ್ನು ಸರದಿಯಂತೆ ನಿಯೋಜಿಸಿಕೊಳ್ಳಬೇಕು ಎಂದು ಸೂಚಿಸಿದರು.
ಪಿಎಸ್‌ಐ ಎಲ್.ಟಿ. ಸಂತೋಷ ಮಾತನಾಡಿ, ಗಣೇಶ ಪ್ರತಿಷ್ಠಾಪನಾ ಸ್ಥಳಕ್ಕೆ ಸಂಬಂಧಿಸಿದಂತೆ ಸಮಿತಿ ಸಂಬಂಧ ಪುರಸಭೆ, ಪೆಂಡಾಲ್ ಸದೃಢತೆ ಕುರಿತು ಲೋಕೋಪಯೋಗಿ ಇಲಾಖೆಯಿಂದ, ವಿದ್ಯುತ್‌ಗೆ ಸಂಬಂಧಿಸಿದಂತೆ ಜೆಸ್ಕಾಂನಿಂದ ಅನುಮತಿ ಪಡೆಯುವುದು ಕಡ್ಡಾಯ. ಎಲ್ಲಕ್ಕೂ ಮುಖ್ಯವಾಗಿ ವಿವಾದಿತ ಸ್ಥಳಗಳಲ್ಲಿ ಗಣೇಶ ಪೆಂಡಾಲ್ ಹಾಕುವಂತಿಲ್ಲ. ಪ್ರತಿಷ್ಠಾಪನೆಯಿಂದ ಸಾರ್ವಜನಿಕ ವಾಹನ ಹಾಗೂ ಜನಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು. ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿದರು. ಪಟ್ಟಣದ ವಿವಿಧ ಗಣೇಶ ಪ್ರತಿಷ್ಠಾಪನಾ ಸಮಿತಿ ಪ್ರಮುಖರು ಇದ್ದರು.
ಗಣೇಶ ಉತ್ಸವ ಸಮಿತಿಗಳು ಡಿಜೆ ಸೌಂಡ್ ಸಿಸ್ಟ್‌ಂ ಅಳವಡಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಸಾರ್ವಜನಿಕ ವಾಹನ ಹಾಗೂ ಜನ ಸಂಚಾರಕ್ಕೆ ಅಡ್ಡಿ ಉಂಟಾಗುವ ರೀತಿಯಲ್ಲಿ ಪೆಂಡಾಲ್ ಅಳವಡಿಸುವುದನ್ನು ಸಹಿಸಲಾಗದು. ಯಾವುದಾದರೂ ಗಣೇಶ ಉತ್ಸವ ಸಮಿತಿ ಸಾರ್ವಜನಿಕರಿಂದ ಒತ್ತಾಯಪೂರ್ವಕ ಚಂದಾ ವಸೂಲಿ ಮಾಡಿರುವುದು ಗಮನಕ್ಕೆ ಬಂದಲ್ಲಿ ಅಂಥ ಸಮಿತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.
•
ಜೆ.ಎಸ್.ನ್ಯಾಮಗೌಡರ,
ಸಿಪಿಐ ಹುಮನಾಬಾದ