ಹುಮನಾಬಾದ: ಪುರಸಭೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾದ ಈ ಸಂದರ್ಭದಲ್ಲಿ ತೀವ್ರ ಪೈಪೋಟಿ ಇರುವ ಕಾಂಗ್ರೆಸ್ ಟಿಕೇಟ್ಗಾಗಿ ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ ಶನಿವಾರ ಸಾಮಾನ್ಯ ಗುಂಪಿಗೆ ಮೀಸಲಾದ ವಾರ್ಡ್ ಸಂಖ್ಯೆ 17ರ ಕೋಳಿವಾಡ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ಕೋರಿ ಲಖನ ಶಿವರಾಜ ಕುಡಂಬುಲ್ಕರ್ ಅವರು ತಮ್ಮ ನೂರಾರು ಬೆಂಬಲಿಗೊಂದಿಗೆ ತಮಟೆ ವಾದ್ಯ ಸಮೇತ ಸಚಿವ ರಾಜಶೇಖರ ಪಾಟೀಲ ಅವರ ನಿವಾಸಕ್ಕೆ ಮೆರವಣಿಗೆ ಕೊಂಡೊಯ್ದರು.
ಟಿಕೇಟ್ಗಾಗಿ ಮೆರವಣಿಗೆಯೇ ಎಂಬ ಪ್ರಶ್ನೆಗೆ- ಟಿಕೇಟ್ ಆಕಾಂಕ್ಷಿಗಳು ಬೆಂಬಲಿಗರ ಜೊತೆಗೆ ಬರುವಂತೆ ಹೇಳಿದ್ದಾರೆ. ಆದ್ದರಿಂದ ನಮಗಿರುವ ಜನ ಬೆಂಬಲ ಪ್ರದರ್ಶಿಸಲು ಹೋಗುತ್ತಿದ್ದೇವೆ ಎಂದು ಅವರು ಉತ್ತರಿಸಿದರು. ಟಿಕೇಟ್ಗಾಗಿ ಆಕಾಂಕ್ಷಿಗಳು ಜನರೊಂದಿಗೆ ಬೆಳಗ್ಗೆಯಿಂದ ಸಂಜೆ ವರೆಗೆ ಗೌಡರ ನಿವಾಸದ ಎದುರು ಸೇರುತ್ತಿದ್ದಾರೆ.
ವರ್ಷವಿಡೀ ಶಾಸಕರು ಮತ್ತು ಪಕ್ಷದ ಪ್ರಮುಖರ ಜೊತೆಯಲ್ಲೇ ಇದ್ದರೂ ಸಚಿವರಿಗೆ ಯಾರಿಂದ ಹೇಳಿಸಿದರೆ ತಮಗೆ ಟಿಕೆಟ್ ಸರಳವಾಗಿ ದಕ್ಕಬಹುದು ಎಂಬ ಬಗ್ಗೆ ಟಿಕೇಟ್ ಆಕಾಂಕ್ಷಿಗಳು ಹಗಲು-ರಾತ್ರಿ ಚಿಂತಿಸುತ್ತಿದ್ದಾರೆ. ನಿಮಗೂ ಸಚಿವರಿಗೂ ತುಂಬಾ ಚೆನ್ನಾಗಿದೆ ಒಂದ್ಸಾರಿ ಫೋನ್ ಮಾಡಿ ನಮಗೆ ಟಿಕೆಟ್ ಕೊಡುವಂತೆ ಸಿಫಾರಸ್ಸು ಮಾಡಿ ಎಂದು ಸಚಿವರ ನಿಕಟ ವರ್ತಿಗಳ ಎದುರಿಗೆ ಅಂಗಲಾಚುತ್ತಿದ್ದರೆ, ಇನ್ನೂ ಕೆಲವು ವಾರ್ಡ್‌ಗಳಲ್ಲಿ ಇಂತಿಂಥ ವಾರ್ಡ್‌ನಿಂದ ಟಿಕೇಟ್ ತಮಗೇ ಅಂತಿಮವಾಗಿವುರುದಾಗಿ ಆತ್ಮವಿಶ್ವಾಸದಿಂದ ಸಾರ್ವಜನಿಕರೆದುರು ಹೇಳಿಕೊಂಡು ಅಲೆದಾಡುತ್ತಿದ್ದಾರೆ.
ಬಿಜೆಪಿಯಲ್ಲಿ ಮಾಜಿ ಶಾಸಕ ಸುಭಾಷ ಕಲ್ಲೂರ ಮೊದಲಾದ ಪ್ರಮುಖರ ಬಳಿ ಸಿಫಾರಸ್ಸು ತೆಗೆದುಕೊಂಡು ಬರುತ್ತಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನಸ್ಸೀಮೋದ್ದಿನ್ ಪಟೇಲ, ಸುರೇಶ ಸೀಗಿ ಮತ್ತು ಮಹೇಶ ಅಗಡಿ ಮೇಲೆ ಬಿಎಸ್‌ಪಿ ಟಿಕೇಟ್ಗಾಗಿ ಪಕ್ಷದ ಜಿಲ್ಲಾ ಅಧ್ಯಕ್ಷ ಅಂಕುಶ ಗೋಖಲೆ ಮೇಲೆ ವಿವಿಧೆಡೆಯಿಂದ ಸಿಫಾರಸ್ಸು ಬರುತ್ತಿವೆ.
ಕೆಲ ವಾರ್ಡ್‌ಗಳಿಂದ ತೀವ್ರ ಪೈಪೋಟಿ
ಪುರಸಭೆ ಚುನಾವಣೆ ಸಾಮಾನ್ಯ ಗುಂಪಿನ ವಾರ್ಡ್‌ಗಳಲ್ಲಿ ಅತೀ ಹೆಚ್ಚು ಪೈಪೋಟಿ ಇದೆ. ವಾರ್ಡ್ 2ರಲ್ಲಿ 5 ಅರ್ಜಿ, 13ರಲ್ಲಿ 5ಅರ್ಜಿ, ಇನ್ನೂ ಎ ಗುಂಪಿಗೆ ಮೀಸಲಾದ ವಾರ್ಡ್ 4ರಲ್ಲಿ 5ಅರ್ಜಿ, ಎಸ್ಸಿಗೆ ಮೀಸಲಾದ ವಾರ್ಡ್ 21ರಲ್ಲಿ 8ಅರ್ಜಿಗಳು ಬಂದಿವೆ. ಅತ್ಯಂತ ಪ್ರಮುಖ ವಾರ್ಡ್ ಎಂದೇ ಹೇಳಲಾಗುವ ಜೇರೆಪೇಟೆ ಸಾಮಾನ್ಯ ಗುಂಪಿಗೆ ಮೀಸಲಾದ 15ರಿಂದ ಸುನೀಲ (ಕಾಳಪ್ಪ) ಪಾಟೀಲ, ಸಂಜಯ್ ಪಾಟೀಲ ಮತ್ತು ಎಂ.ಡಿ.ಇಸ್ಮಾಯಿಲ್ ಸೇರಿ 3 ಅರ್ಜಿಗಳು ಬಂದಿವೆ. ಬಲ್ಲ ಮೂಲಗಳ ಪ್ರಕಾರ ಮೇ 13/15ಕ್ಕೆ ಅಧಿಕೃತವಾಗಿ ಬಿ ಫಾರ್ಮ್ ನೀಡುವ ಸಾಧ್ಯತೆಗಳಿವೆ. ಈ ಮೇಲೆ ಸೂಚಿಸಲಾದ ವಾರ್ಡ್ ಗಳಲ್ಲಿ ಎಲ್ಲ ಪಕ್ಷಗಳಿಂದಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದೆ.
ಶಶಿಕಂತ ಕೆ.ಭಗೋಜಿ