ಹುಮನಾಬಾದ: ಪುರಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಬಿಎಸ್‌ಪಿ ಪಕ್ಷಗಳ ಪೈಕಿ ಕಾಂಗ್ರೆಸ್‌ನಲ್ಲಿ ಇನ್ನಿಲ್ಲದ ಪೈಪೋಟಿ ಏರ್ಪಟಿದ್ದು, ಟಿಕೆಟ್ ದಕ್ಕದಿದ್ದರೆ ನಗರದ ಕೆಲವು ಪ್ರಮುಖ ವಾರ್ಡ್‌ಗಳ ಕಾರ್ಯಕರ್ತರು ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧಸಿರುವ ಕುರಿತು ನಗರದೆಲ್ಲೆಡೆ ಚರ್ಚೆ ನಡೆಯುತ್ತಿದೆ.
ಭಾರೀ ಪೈಪೋಟಿ: ಪಟ್ಟಣದ ವಾರ್ಡ್ ನಂ-2, 12 ಮತ್ತು 18ನೇ ವಾರ್ಡ್ ಸಾಮಾನ್ಯ ಗುಂಪಿಗೆ ಮೀಸಲಾಗಿದ್ದರಿಂದ ಎಲ್ಲ ಪಕ್ಷಗಳ ಜೊತೆಗೆ ವಿಶೇಷವಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಪ್ರತೀ ವಾರ್ಡ್‌ನಲ್ಲಿ ಕನಿಷ್ಠ 5-8 ಜನರಿರುವ ಕಾರಣ ಟಿಕೆಟ್ ವಿತರಣೆ ಪಕ್ಷದ ವರಿಷ್ಠರ ಪಾಲಿಗೆ ತಲೆ ಬಿಸಿಯಾಗಿದೆ.
ಪಕ್ಷೇತರರಾಗಿ ಸ್ಪರ್ಧೆ: ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಮಾತ್ರವಲ್ಲ, ಈ ಪಕ್ಷದಲ್ಲಿನ ಮುಖಂಡರು ಪ್ರಬಲರು ಆಗಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವಾಗ ಎಲ್ಲರನ್ನು ಸಮಾಧಾನ ಪಡಿಸುವುದು ವರಿಷ್ಠರಿಂದ ಕಷ್ಟ ಸಾಧ್ಯ. ಹಾಗಾಗಿ ನಮ್ಮ ಪಕ್ಷದ ವರಿಷ್ಠರಿಗೆ ಹೆಚ್ಚು ತೊಂದರೆ ಕೊಡದೇ ಸೂಕ್ಷ್ಮವಾಗಿ ಅವರಿಂದ ಗ್ರೀನ್ ಸಿಗ್ನಲ್ ಪಡೆದು ಪಕ್ಷೇತರರಾಗಿ ಸ್ಪರ್ಧಿಸುತ್ತೇವೆ. ನಾವು ಗೆದ್ದರೂ ಕಾಂಗ್ರೆಸ್, ಸೋತರೂ ಕಾಂಗ್ರೆಸ್. ಯಾವುದೇ ಕಾರಣಕ್ಕೂ ಈ ವಾರ್ಡ್‌ನಲ್ಲಿ ಅನ್ಯ ಪಕ್ಷಗಳ ಅಭ್ಯರ್ಥಿ ಗೆಲ್ಲುವುದಕ್ಕೆ ಬಿಡಬಾರದೆಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಒಂದು ವೇಳೆ ನಮ್ಮ ಸ್ವಂತ ಬಲದ ಮೇಲೆ ಗೆದ್ದರೂ ಕಾಂಗ್ರೆಸ್‌ನಲ್ಲೇ ಉಳಿಯುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಮಾಧ್ಯಮದವರೊಂದಿ ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದಾಖಲೆಗಳ ಸಿದ್ಧತೆ: ಈ ಉದ್ದೇಶದಿಂದ ಸಮಯ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಕೆಲವು ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಕೋರ್ಟ್ ಅಲೆದು ನಾಮಪತ್ರ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆ ಸಿದ್ಧಪಡಿಸಿ ಇಟ್ಟಿಕೊಳ್ಳವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
•
ಶಶಿಕಾಂತ ಕೆ.ಭಗೋಜಿ