ಹುಮನಾಬಾದ: ಸ್ವಚ್ಛತೆ ಬಗೆಗಿನ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಆರೋಗ್ಯ ಇಲಾಖೆ ಲಕ್ಷ್ಯ ಕಾರ್ಯಕ್ರಮದ ರಾಜ್ಯ ನಿರ್ದೇಶಕ ಡಾ| ರಾಜಕುಮಾರ ಆದೇಶ ನೀಡಿದರು.
ಇಲಾಖೆಯ ವಿನೂತನ ಯೋಜನೆ ಲಕ್ಷ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ರೋಗಿಯ ಆರೋಗ್ಯ ಸುಧಾರಣೆಗೆ ಸ್ವಚ್ಛ ಪರಿಸರ ಅತ್ಯಂತ ಅವಶ್ಯ. ಇಲ್ಲೇ ಸ್ವಚ್ಛತೆ ಇಲ್ಲದಿದ್ದರೇ ಹೇಗೆ. ಮುಂದಿನ ಭೇಟಿಗೂ ಮುನ್ನ ಸುಧಾರಣೆ ಆಗದಿದ್ದರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರಗಿಸುವುದು ಅನಿವಾರ್ಯವಾಗುತ್ತದೆ ಎಂದರು.
ಶಸ್ತ್ರ ಚಿಕಿತ್ಸಾ ಕೋಣೆ, ಹೆರಿಗೆ ಕೋಣೆ, ನವಜಾತ ಶಿಶು ಆರೈಕೆ ವಿಭಾಗ ಪರಿಶೀಲಿಸಿ, ಈ ವಿಭಾಗಗಳನ್ನು ನಿರ್ವಹಣೆ ಮಾಡುವ ವೈದ್ಯರು ಹಾಗೂ ಶುಶ್ರೂಷಕಿಯರಿಗೆ ಕೈಗೊಳ್ಳುವ ನಿರ್ವಹಣೆಯ ವಿಧಾನ ಕುರಿತು ಪ್ರಶ್ನಿಸಿದರು. ಸ್ವಲ್ಪ ಹೆಚ್ಚು ಕಡಿಮೆ ಆದರೂ ತಾಯಿ, ಮಗು ಮತ್ತು ರೋಗಿ ಆರೋಗ್ಯದ ಮೇಲೆ ದುಷರಿಣಾಮ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಒಳ್ಳೆ ಸಿಬ್ಬಂದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ, ಇಲಾಖೆಗೆ ಉತ್ತಮ ಹೆಸರು ತರಬೇಕೆಂದು ಸಲಹೆ ನೀಡಿದರು.
ತಾಯಿ ಮಗು ಆರೈಕೆ ಆಸ್ಪತ್ರೆಗಾಗಿ ಅನುಮತಿ ಕೋರಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸಲಹೆ ನೀಡಿದರು. ಹೊರ ಮತ್ತು ಒಳ ರೋಗಿಗಳ ನೋಂದಣಿ ವಿಭಾಗ ಪರಿಶೀಲಿಸಿದ ಅವರು, ದಾಖಲಾತಿ ಕಲೆ ಹಾಕುವ ವಿಷಯದಲ್ಲಿ ಬೇಜವಾಬ್ದಾರಿ ಪ್ರದರ್ಶಿಸುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು. ಔಷಧ ವಿಭಾಗ ಸಮರ್ಪಕ ನಿರ್ವಹಣೆ ಕುರಿತು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.
ಆಸ್ಪತ್ರೆಗೆ ಮಂಜೂರಾದ ಒಟ್ಟು ಸಿಬ್ಬಂದಿಗೆ ಸದ್ಯ ಸೇವೆಯಲ್ಲಿ ಇರುವ ಸಿಬ್ಬಂದಿ ಜೊತೆಗೆ ತುರ್ತು ಅಗತ್ಯವಿರುವ ಸಿಬ್ಬಂದಿಯ ಮಾಹಿತಿಯನ್ನು ವೈದ್ಯಾಧಿಕಾರಿ ಡಾ| ನಾಗನಾಥ ಹುಲ್ಸೂರೆ, ನಿರ್ದೇಶಕರಿಗೆ ವಿವರಿಸಿದರು.
ಲಕ್ಷ್ಯ ಕಾರ್ಯಕ್ರಮದ ರಾಷ್ಟ್ರೀಯ ಸಂಸ್ಥೆ ಸದಸ್ಯ ಸಂಪತ್‌ಸಿಂಗ್ ಇದ್ದರು. ರಾಜ್ಯ ಮಟ್ಟದ ಹಿರಿಯ ಅಧಿಕಾರಿ ಇಂದಿರಾ ಕಬಾಡೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ರವಿ ಶಿರ್ಸೆ, ಜಿಲ್ಲಾ ಆಸ್ಪತ್ರೆ ತಜ್ಞ ವೈದ್ಯೆ ಸರೋಜಾ ಪಾಟೀಲ, ಸಂಗೀತಾ ಅಗಡಿ, ಬಸವಂತರಾವ್ ಗುಮ್ಮೇದ್, ದಿಲೀಪ ಡೋಂಗ್ರೆ, ಪ್ರವೀಣ, ವಿ.ಬಿ.ಲಕ್ಕಾ, ಚೈತ್ರಾನಂದ, ವಿಶ್ವ ಸೈನೀರ್ ಅವರು ಉನ್ನತಾಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ವಸ್ತುಸ್ಥಿತಿ ವಿವರಿಸಿದರು. ಸಿಬ್ಬಂದಿ ಭಗವಂತ, ಸುರೇಶ, ಗ್ರೇಶೀಲಾ, ಸುಗಂಧಾ, ಶ್ರೀಶೈಲ, ಸುನೀಲಕುಮಾರ, ಹಾಜಿ, ಈಶ್ವರ ತಡೋಳಾ, ಅಬ್ಟಾಸ್ ಮತ್ತಿತರರು ಇದ್ದರು.