ಶಶಿಕಂತ ಕೆ.ಭಗೋಜಿ
ಹುಮನಾಬಾದ್: ಮುಂಗಾರು ಆರಂಭದಲ್ಲಿ ನಡೆಯುವ ರೈತರ ಹಬ್ಬ ಕಾರ ಹುಣ್ಣಿಮೆ ಹೊತ್ತಿಗೆ ಬರಬೇಕಿದ್ದ ಮಳೆ ಈ ಬಾರಿ ಬಾರದಿದ್ದರೂ ಬರುವ ವಿಶ್ವಾಸದೊಂದಿಗೆ ರೈತರು ಹಬ್ಬಕ್ಕಾಗಿ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಮುಂಗಾರು ಆರಂಭದ ಮೂಲಕ ಪ್ರಕೃತಿಯಲ್ಲಿ ಬದಲಾವಣೆಯಾಗಿ, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಪ್ರಮುಖ ಘಟ್ಟವಾದ ಈ ವೇಳೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಬಂಡಿ, ನೇಗಿಲು, ಕುಂಟೆ, ಕೂರ್ಗಿ ಮೊದಲಾದವುಗಳ ಜೊತೆಗೆ ವರ್ಷವಿಡೀ ಶ್ರಮಿಸುವ ಎತ್ತುಗಳು ಸಂತಸದಿಂದ ಇರಬೇಕೆಂಬ ಉದ್ದೇಶದಿಂದ ಎತ್ತುಗಳಿಗೆ ಬಾಸಿಂಗ, ಕೊರಳ ದಾರ, ಸೊಂಟದ ದಾರ ಇತ್ಯಾದಿಗಳಿಂದ ಶೃಂಗರಿಸಲಾಗುತ್ತದೆ, ಕಾರಹುಣ್ಣಿಮೆ ಮುನ್ನಾದಿನವಾದ ಹೊನ್ನು ಹುಗ್ಗಿ ದಿನದಂದು ರಾತ್ರಿ ಎತ್ತುಗಳಿಗೆ ಸ್ನಾನಮಾಡಿಸಿ, ಬಾಸಿಂಗ ಕಟ್ಟಿ, ಗೋಧಿಹುಗ್ಗಿ, ಧಪಾಟಿ ಮೊದಲಾದವುಗಳನ್ನು ನೈವೇದ್ಯವಾಗಿ ಉಣಬಡಿಸುವುದು ಈ ಹಬ್ಬದ ವಿಶೇಷ.
ಕಾರಹುಣ್ಣಿಮೆ ದಿನ ಎತ್ತುಗಳನ್ನು ವಿಶೇಷ ಅಲಂಕಾರ ಮಾಡಿ, ವಾದ್ಯವೃಂದ ಸಮೇತ ಗ್ರಾಮ ಪ್ರಮುಖ ದೇವಾಲಯದ ವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆಯಲ್ಲಿ ರೈತರು ತಮಟೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಅಂದು ಸಂಜೆ ನಡೆಯುವ ಕರಿ ಕಡಿಯುವ ಕಾರ್ಯಕ್ರಮದಲ್ಲಿ ಜೋಡೆತ್ತುಗಳು ಕರಿ ದಾರ ಕಡಿದರೆ ಕರಿಕಾಳು, ಬಿಳಿದಾರ ಕಡಿದರೆ ಬಿಳಿಕಾಳು ಸಮೃದ್ಧ ಉತ್ಪನ್ನವಾಗುತ್ತದೆ ಎಂಬುದು ರೈತರ ನಂಬಿಕೆ.
ಕಳೆಗುಂದುತ್ತಿದೆ ಕಾರಹುಣ್ಣಿಮೆ: ಸಕಾಲಕ್ಕೆ ಮಳೆ ಬಾರದಿರುವುದರಿಂದ ಮೇವಿನ ಅಭಾವ, ದುಬಾರಿಯಾದ ಕಾರ್ಮಿಕರ ಕೂಲಿಯಿಂದಾಗಿ ಎತ್ತು, ಬಂಡಿ, ನೇಗಿಲು ಕುಂಟೆಗಳ ಸ್ಥಳವನ್ನು ಆತಿಕ್ರಮಿಸಿದ ಅತ್ಯಾಧುನಿಕ ತಂತ್ರಜ್ಞಾನದ ಟ್ರಾಕ್ಟರ್ ಕಾರಣದಿಂದ, ಬಿತ್ತನೆಗೆ ಅಗತ್ಯವಿರುವ ಎತ್ತು, ಹೈನುಗಾರಿಕೆ ಮೂಲವಾದ ಆಕಳು, ಎಮ್ಮೆಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ. ಕಾರಣ ಕಳೆದೆರಡು ದಶಕಗಳ ಹಿಂದೆ ಕಾರಹುಣ್ಣಿಮೆ ಹಬ್ಬದಲ್ಲಿದ್ದ ಸಂಭ್ರಮ ಈಗ ಶೇ.75ರಷ್ಟು ಇಲ್ಲದಾಗಿದೆ. ಎತ್ತುಗಳಿದ್ದರೆ ಸರಿ ಇಲ್ಲದಿದ್ದರೇ ಕೃಷಿಗೆ ಬಳಸಲಾಗುವ ಟ್ರ್ಯಾಕ್ಟರ್ ಮೊದಲಾದ ಪರಿಕರಗಳನ್ನೇ ಪೂಜೆ ಮಾಡುವುದು ಅನಿವಾರ್ಯವಾಗಿದೆ.
ಕನಿಷ್ಟ ಮಾರಾಟ: ವರ್ಷಗಳು ಕಳೆದಂತೆ ಕಾರ ಹುಣ್ಣಿಮೆ ಹಬ್ಬದ ಸಂದರ್ಭದಲ್ಲಿ ಎತ್ತುಗಳನ್ನು ಶೃಂಗರಿಸಲು ಬೇಕಾಗುವ ಬಾಸಿಂಗ, ಕೊರಳು ದಾರ, ಬಾರ್ಕೋಲು, ಜತಗಿ, ಸೊಂಟದ ದಾರ ಇತ್ಯಾದಿಗಳನ್ನು ಮಹಾರಾಷ್ಟ್ರದ ಲಾತೂರನಿಂದ ತಂದು ಪ್ರತಿ ವರ್ಷ ಮಾರಾಟ ಮಾಡುತ್ತೇವೆ. ಆದರೆ ವರ್ಷ ಗತಿಸಿದಂತೆ ವ್ಯಾಪಾರದ ಪ್ರಮಾಣ ಕುಸಿಯುತ್ತಿದೆ ಎನ್ನುತ್ತಾರೆ ಕಾರಣ ಹುಣ್ಣಿಮೆ ಅಲಂಕಾರಿಕ ವಸ್ತುಗಳ ವ್ಯಾಪಾರಿ ಷರಿಪೋದ್ದೀನ್.
ಸಂಪ್ರದಾಯ ಉಳಿಕೆಗೆ ಆಚರಣೆ: ಹಿಂದಿನಂತೆ ಕಾರ ಹುಣ್ಣಿಮೆ ಹಬ್ಬದಂದು ಆ ಸಂಭ್ರಮ ಇಲ್ಲದಿದ್ದರೂ ರೈತರು ಒಲ್ಲದ ಮನಸ್ಸಿನಿಂದಲಾದರೂ ತಲತಲಾಂತರದಿಂದ ಆಚರಿಸಿಕೊಂಡು ಬರುತ್ತಿರುವ ಕಾರಹುಣ್ಣಿಮೆಯನ್ನು ಸ್ಥಗಿತಗೊಳಿಸಬಾರದೆಂಬ ಕಾರಣ ಪ್ರತೀ ವರ್ಷ ಶಕ್ತ್ಯಾನುಸಾರ ಈ ಹಬ್ಬ ಆಚರಿಸುವ ಮೂಲಕ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿರುವುದು ಸಮಾಧಾನದ ಸಂಗತಿ.