Advertisement

ಹೆದ್ದಾರಿ ತಡೆದು ರೈತರ ಸಂಘ ಪ್ರತಿಭಟನೆ

10:20 AM Aug 28, 2019 | Team Udayavani |

ಹುಮನಾಬಾದ: ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ರಾಷ್ಟ್ರೀಯ ಹೆದ್ದಾರಿ-65ರ ರೈಲ್ವೆ ಸೇತುವೆ ಕೆಳಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ರೈತರ ವಿವಿಧ ಹಂತದ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರದ ಹಿನ್ನೆಲೆಯಲ್ಲಿ ಜಿಲ್ಲೆ ಜನರಿಗೆ ಕುಡಿಯುವ ನೀರಿಗೂ ದಿಕ್ಕಿಲ್ಲದೇ ಪರದಾಡುವ ಈ ಸಂದರ್ಭದಲ್ಲಿ ಸರ್ಕಾರ ಮೋಡ ಬಿತ್ತನೆಗೆ ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ ಹಣ ಪಾವತಿಸಿದ ಯಾರೊಬ್ಬ ರೈತರಿಗೂ ಅನ್ಯಾಯವಾಗದಂತೆ ಪ್ರತಿ ರೈತರ ಖಾತೆಗೂ ಪರಿಹಾರ ಹಣ ಜಮಾ ಮಾಡಬೇಕು. ಕಳೆದ ವರ್ಷ ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಬರ ಘೋಷಿಸಿದರೂ ಕೂಡ ಯಾರೊಬ್ಬರಿಗೂ ಪರಿಹಾರ ದೊರೆತಿಲ್ಲ. ಈ ವಿಷಯವನ್ನು ಗಂಭೀರ ಪರಿಗಣಿಸಬೇಕು ಎಂದು ಒತ್ತಾಯಿಸಿರು.

ತಾಲೂಕು ಅಧ್ಯಕ್ಷ ಸತೀಶ ನನ್ನೂರೆ ಮಾತನಾಡಿ, ಕಳೆದ ಸಾಲಿನಲ್ಲಿ ವಿವಿಧ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ಈವರೆಗೆ ಹಣ ಪಾವತಿಯಾಗಿಲ್ಲ. ರಾಜ್ಯದ ಇತರೆ ಕಾರ್ಖಾನೆಗಳು ನೀಡುತ್ತಿರುವ ಬೆಲೆಗೆ ಹೋಲಿಸಿದರೆ ಬೀದರ್‌ ಜಿಲ್ಲೆಯ ಕಾರ್ಖಾನೆಗಳು ಕೇವಲ ರೂ.1900 ಮಾತ್ರ ಪಾವತಿಸುತ್ತಿವೆ ಎಂದು ಅಸಮಾಧಾನ ಹೊರ ಹಾಕಿದರು.

ಮುಚ್ಚುವ ಸ್ಥಿತಿಯಲ್ಲಿ ಇರುವ ಜಿಲ್ಲೆಯ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನೂ ಪುನರ್‌ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳು ಸಕ್ಕರೆ ರಿಕವರಿಯಲ್ಲಿ ಭಾರೀ ಪ್ರಮಾಣದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದು, ಸರ್ಕಾರ ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ವಾರ್ಷಿಕ ಸಾಮಾನ್ಯ ಸಭೆಯ ನೆಪದಲ್ಲಿ ಕಾರ್ಖಾನೆ ಆಡಳಿತ ಮಂಡಳಿ ಪ್ರತೀ ವರ್ಷ ರೂ.5 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈ ಬಾರಿ ಸಾಮಾನ್ಯ ಸಭೆ ರದ್ದುಗೊಳಿಸಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಎಲ್ಲ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯ ರೈತರ ವಿರುದ್ಧ ದಾಖಲಿಸಲಾದ ವಿವಿಧ ಕೇಸು ಹಿಂದಕ್ಕೆ ಪಡೆಯಬೇಕು. ಈ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ಬಗೆಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಉಪವಿಭಾಗಾಧಿಕಾರಿ ಜ್ಞಾನೇಂದ್ರ ಗಂಗವಾರ್‌ ಅವರಿಗೆ ಸಲ್ಲಿಸಿದರು.

Advertisement

ಉಪವಿಭಾಗಾಕಾರಿ ಜ್ಞಾನೇಂದ್ರ ಗಂಗವಾರ್‌ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯ ಕಲ್ಪಿಸುವ, ವಿಶೇಷವಾಗಿ ಸಾಲದ ವಿಷಯ ಕುರಿತಂತೆ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೈನೋದ್ದಿನ್‌ ಲಾಡ್ಜಿ, ಸಿದ್ದಣ್ಣ ಭೂಶೆಟ್ಟಿ, ಗುರುಲಿಂಗಪ್ಪ ಮೇಲ್ದೊಡ್ಡಿ, ಮಲ್ಲಿಕಾರ್ಜುನ ಮೇತ್ರೆ, ಜ್ಞಾನದೇವ ಭೋಸ್ಲೆ, ಅಣ್ಯಪ್ಪ ಮೇತ್ರೆ ಓತಗಿ, ಚಂದ್ರಶೇಖರ ಜಮಖಂಡಿ, ಎಂ.ಡಿ.ಖಾಸೀಂಲಿ ಸೇರಿದಂತೆ ರೈತ ಸಂಘದ ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳ ಪ್ರಮುಖ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ ಅವರ ಮಾರ್ಗದರ್ಶನದಲ್ಲಿ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿತ್ತು. ಸಿಪಿಐ ಜೆ.ಎಸ್‌.ನ್ಯಾಮಗೌರ್‌, ಬಡವರಾಜ ಮಡಿವಾಳ, ಪಿಎಸ್‌ಐಗಳಾದ ಎಲ್.ಟಿ.ಸಂತೋಷ, ಜಿ.ಎಂ.ಪಾಟೀಲ, ಮಹಾಂತೇಶ ಲುಂಬಿ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next