Advertisement

ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರ ವಹಿಸಿ

03:29 PM Mar 09, 2020 | Naveen |

ಹುಮನಾಬಾದ: ಹುಮನಾಬಾದ, ಚಿಟಗುಪ್ಪ ಪಟ್ಟಣ ಸೇರಿದಂತೆ ಕ್ಷೇತ್ರದ ಎಲ್ಲ ಗ್ರಾಮೀಣ ಭಾಗಗಳಿಗೆ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಪಟ್ಟಣದ ಶಾಸಕರ ಭವನದಲ್ಲಿ ರವಿವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವ ಯೋಜನೆಗಳಲ್ಲಿ ಎಷ್ಟು ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಎಷ್ಟು ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ ಎಂಬ ವಿವರವನ್ನು ಎಲ್ಲ ಪುರಸಭೆ ಅಧಿಕಾರಿಗಳು ನೀಡಬೇಕು ಎಂದು ಸೂಚಿಸಿದರು. ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಖುದ್ದು ಗ್ರಾಮೀಣ ಪ್ರದೇಶಕ್ಕೆ ತೆರಳಿ ಅಲ್ಲಿನ ಸ್ಥಿತಿ ಕುರಿತು ಒಂದು ವಾರದಲ್ಲಿ ಮಾಹಿತಿ ನೀಡಬೇಕು. ಮುಂದಿನ ವಾರ ಮತ್ತೆ ಸಭೆ ನಡೆಸಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.

ಪಂಚಾಯತ ಕಡೆ ಇರಲಿ ಗಮನ: ಎಲ್ಲ ಗ್ರಾಮ ಪಂಚಾಯತಗಳಲ್ಲಿನ ಅನುದಾನ ಕುರಿತು ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿಗಳು ಗಮನ ಹರಿಸಬೇಕು. ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದ್ದು, ಚುನಾವಣೆ ಪೂರ್ವದಲ್ಲಿ ಎಲ್ಲ ಖಾತೆಗಳಲ್ಲಿನ ದುಡ್ಡು ಖಾಲಿ ಆಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಅನುದಾನದ ಅವಶ್ಯಕತೆ ಇರುತ್ತದೆ. ಖಾತೆಗಳು ಖಾಲಿ ಆದರೆ, ಮತ್ತೆ ಸಮಸ್ಯೆ ಹೆಚ್ಚಾಗುತ್ತದೆ. ಈ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.

ಗುತ್ತೆದಾರನ ವಿರುದ್ಧ ಕ್ರಮ: ರಾಷ್ಟ್ರೀಯ ಹೆದ್ದಾರಿ ಮೂಲಕ ಗಡವಂತಿ ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಯನ್ನು ಎರಡು ವರ್ಷಗಳಿಂದ ಗುತ್ತಿಗೆ ಪಡೆದ ಗುತ್ತೆದಾರರ ವಿರುದ್ಧ ಅಧಿಕಾರಿಗಳು ಕ್ರಮ ಕ್ರಮ ಕೈಗೊಳ್ಳಿ ಎಂದು ಶಾಸಕರು ಬಿಆರ್‌ಜಿಎಫ್‌ ಅಧಿಕಾರಿಗೆ ಸೂಚಿಸಿದರು. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದು ವರ್ಷ ಕಳೆದಿದ್ದು, ಯಾವ ಕಾರಣಕ್ಕೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿ ಮಾತನಾಡಿ, 2.67 ಕೊಟಿ ವೆಚ್ಚದ ಕಾಮಗಾರಿಯನ್ನು ಜಗದೀಶ ಖೂಬಾ ಪಡೆದುಕೊಂಡಿದ್ದು, ಇದೀಗ ಕಾಮಗಾರಿ ಪ್ರಾರಂಭಿಸಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಆಕ್ರೋಷಗೊಂಡ ಶಾಸಕರು ನಿಗದಿತ ಅವಧಿಯಲ್ಲಿ ಕಾಮಗಾರಿ ಮಾಡಲು ಏನು ಸಮಸ್ಯೆ. ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ ಅವರು, ಸರ್ಕಾರದಿಂದ ಅನುದಾನ ತರುತ್ತಿರುವುದು ಗುತ್ತಿಗೆದಾರರ ಬದುಕಿಗಾಗಿ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆಆರ್‌ಐಡಿಎಲ್‌ ಕಾಮಗಾರಿ ಪರಿಶೀಲನೆ: ಕೆಆರ್‌ಐಡಿಎಲ್‌ ವತಿಯಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಯಾವ ಕಾರಣಕ್ಕೆ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂಬುದರ ಕುರಿತು ತಹಶೀಲ್ದಾರ್‌ ಹಾಗೂ ತಾಲೂಕು ಪಂಚಾಯತ ಇಒ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಎಷ್ಟು ಅನುದಾನದ ಕಾಮಗಾರಿ, ಎಷ್ಟು ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಯಾವ ಹಂತಕ್ಕೆ ಬಂದಿದೆ ಎಂಬುದರ ಮಾಹಿತಿ ನೀಡಿ ಎಂದು ತಿಳಿಸಿದರು.

Advertisement

ಸಿಡಿಪಿಒ ವಿರುದ್ಧ ಆಕ್ರೋಶ: ಶಿಶು ಅಭಿವೃದ್ಧಿ ಅಭಿವೃದ್ಧಿ ಅಧಿಕಾರಿ ಶೋಭಾ ವಿರುದ್ದ ಶಾಸಕ ರಾಜಶೇಖರ ಪಾಟೀಲ ಹಾಗೂ ತಾಲೂಕು ಪಂಚಾಯತ ಅಧ್ಯಕ್ಷ ರಮೇಶ ಡಾಕುಳಗಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿದ ಇತರೆ ಅಧಿ ಕಾರಿಗಳು, ಸಿಡಿಪಿಒ ಮೊಬೈಲ್‌ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರಿದರು. ಅಲ್ಲದೆ, ಪಂಚಾಯತ ರಾಜ್‌ ಇಲಾಖೆ ಅಧಿಕಾರಿ ಮಾತನಾಡಿ, ಚಿಟಗುಪ್ಪ ಪಟ್ಟಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಸಮಸ್ಯೆ ಇದ್ದು, ಪರಿಹಾರಕ್ಕೆ ಸ್ಪಂದಿಸುವಂತೆ ತಿಳಿಸಿದರೆ ಅಧಿಕಾರಿ ಸ್ಪಂದಿಸುತ್ತಿಲ್ಲ. ಅನುದಾನ ಮರಳಿ ಹೋಗುತ್ತದೆ ಎಂದರೂ ಕೂಡ ಲೆಕ್ಕಿಸುತ್ತಿಲ್ಲ. ಮರಳಿ ಹೋಗಲಿ ಬಿಡಿ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಇದಕ್ಕೆ ಸಿಡಿಮಿಡಿಗೊಂಡ ಶಾಸಕ ಪಾಟೀಲ, ಯಾವ ಕಾರಣಕ್ಕೆ ಆ ರೀತಿ ಮಾತನಾಡಿದ್ದೀರಿ? ಅನುದಾನ ತರಬೇಕಾದರೆ ಎಷ್ಟು ಕಷ್ಟ ಎಂಬುದು ನಿಮಗೆ ಗೊತ್ತಾ ಎಂದು ಪ್ರಶ್ನಿಸಿದರು. ಅಧಿಕಾರಿಗಳದೇ ಸರ್ವಾಧಿ ಕಾರ ಎಂಬುದು ಸರಿಯಲ್ಲ. ನಿಮ್ಮ ಮೇಲೆ ಕೂಡ ಅಧಿಕಾರಿಗಳು ಇದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಗುಣಮಟ್ಟಕ್ಕೆ ಮಹತ್ವ ನೀಡಿ: ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಅಧಿಕಾರಿಗಳು ಗಮನ ಹರಿಸಬೇಕು. ಯಾರೆ ಗುತ್ತಿಗೆದಾರ ಕೆಲಸ ಮಾಡಿದರೂ ಕೂಡ ಗುಣಮಟ್ಟಕ್ಕೆ ಮಹತ್ವ ನೀಡಿ. ಶಾಸಕ ಅಥವಾ ಶಾಸಕರ ಮಗ ಕೂಡ ಕೆಲಸ ಮಾಡಿದರು ಅಧಿಕಾರಿ ಗುಣಮಟ್ಟಕೆ ಮೊದಲ ಆದ್ಯತೆ ನೀಡಬೇಕು. ನಾಳೆ ಜನರು ಪ್ರಶ್ನೆ ಕೇಳುತ್ತಾರೆ. ನಾನು ಅವರಿಗೆ ಉತ್ತರ ನೀಡಬೇಕಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next