Advertisement

ವಿದೇಶದಿಂದ ಬಂದವರ ತಪಾಸಿಸಿ

06:24 PM Mar 06, 2020 | Naveen |

ಹುಮನಾಬಾದ: ಕೊರೊನಾ ವೈರಸ್‌ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ಕಂದಾಯ ಇಲಾಖೆ, ಪಂಚಾಯತ ರಾಜ್‌ ಹಾಗೂ ಅಂಗನವಾಡಿ ಸಿಬ್ಬಂದಿ ಆಯಾ ಪ್ರದೇಶದಲ್ಲಿ ವಿದೇಶದಿಂದ ಬಂದ ಜನರನ್ನು ಗುರುತಿಸಿ ಅವರಿಗೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಬೇಕು ಎಂದು ತಹಶೀಲ್ದಾರ್‌ ನಾಗಯ್ನಾ ಹಿರೇಮಠ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Advertisement

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಕೊರೊನಾ ಮುಂಜಾಗ್ರತೆ ಕುರಿತು ಮಾತನಾಡಿದ ಅವರು, ವಿದೇಶದಿಂದ ಹಾಗೂ ನೆರೆ ರಾಜ್ಯಗಳಿಂದ ಬಂದ ಜರನ್ನು ಗುರುತಿಸಿ ಪಟ್ಟಿ ತಯಾರಿಸಬೇಕು. ಬೇರೆಡೆಯಿಂದ ಬಂದವರು ಖುದ್ದು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಇಲ್ಲವಾದರೆ ಆರೋಗ್ಯ ಅಧಿ ಕಾರಿಗಳೆ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಾರೆ ಎಂದು ತಿಳಿಸಿದರು.

ಕೊರೊನಾ ಭಯ ಬೇಡ: ಕೊರೊನಾ ವೈರಸ್‌ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ರೋಗದ ಲಕ್ಷಣಗಳನ್ನು ತಿಳಿದುಕೊಂಡು ಮುಂಜಾಗ್ರತೆ ವಹಿಸಿದರೆ ವೈರಸ್‌ ಬರುವುದಿಲ್ಲ. ನಮ್ಮ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಖಚಿತವಾಗಿಲ್ಲ. ಕಾರಣ ಇಲ್ಲಿನ ಜನರು ಭಯ ಪಡುವ ಅಗತ್ಯ ಇಲ್ಲ. ಆದರೆ, ಪ್ರತಿಯೊಬ್ಬರು ಸ್ವತ್ಛತೆಗೆ ಹೆಚ್ಚಿನ ಆದತ್ಯೆ ನೀಡಬೇಕು ಎಂದು ಸಲಹೆ ನೀಡಿದರು.

ಜಾಗೃತಿ ಮೂಡಿಸಿ: ಅಂಗನವಾಡಿ, ಪಂಚಾಯತ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲಕಡೆಗಳಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಿಗೆ ರೋಗದ ಲಕ್ಷಣಗಳು, ರೋಗ ಹರಡದಂತೆ ಮಾಡಬೇಕಾದ ನಿಯಮಗಳ ಕುರಿತು ತಿಳಿವಳಿಕೆ ನೀಡಬೇಕು. ಶಾಲಾ ಕಾಲೇಜು ಹಾಗೂ ಗ್ರಾಮೀಣ ಭಾಗದಲ್ಲಿ ಈ ಕುರಿತು ಹೆಚ್ಚಿನ ಪ್ರಚಾರ ನಡೆಸಬೇಕು. ಹುಮನಾಬಾದ, ಚಿಟಗುಪ್ಪ ಹಾಗೂ ಹಳ್ಳಿಖೇಡ(ಬಿ) ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆ ವಾಹನಗಳ ಮೂಲಕ ಜನರಿಗೆ ತಿಳಿವಳಿಕೆ ನೀಡುವ ಮೂಲಕ ಭಯ ಬೇಡ ಎಂಬ ಸಂದೇಶ ಸಾರಬೇಕು ಎಂದು  ತಹಶೀಲ್ದಾರ್‌ ಮಾಹಿತಿ ನೀಡಿದರು.

ರಜೆ ಪಡೆಯಬೇಡಿ: ಮುಂದಿನ ಕೆಲ ದಿನಗಳಲ್ಲಿ ಬೇಸಿಗೆ ರಜೆ ಆರಂಭವಾಗಲ್ಲಿದ್ದು, ಕೊರೊನಾ ಜಾಗೃತಿಗಾಗಿ ಹಾಗೂ ನಿರ್ವಹಣೆಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ರಜೆ ಪಡೆಯುವಂತಿಲ್ಲ. ಜಿಲ್ಲಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದು, ರಜೆ ಪಡೆಯದೇ ಅಧಿಕಾರಿಗಳು ಜನ ಜಾಗೃತಿ ಮೂಡಿಸಿ ಕೊರೊನಾ ಬರದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಇದು ನಮ್ಮ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

Advertisement

ಕೈ ತೊಳೆಯುವ ಅಭಿಯಾನ: ಎಲ್ಲ ಶಾಲಾ, ಕಾಲೇಜು, ವಸತಿ ನಿಲಯಗಳಲ್ಲಿ ಮತ್ತು ವಿವಿಧ ಪಟ್ಟಣ, ಗ್ರಾಮೀಣ ಭಾಗದ ಜನರಿಗೆ ಕೈ ತೊಳೆಯುವ ಕುರಿತು ಮಾಹಿತಿ ನೀಡಬೇಕು. ಇದು ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕು. ಊಟ ಮಾಡುವ ಮುನ್ನ, ಶೌಚಾಲಯಯದ ನಂತರ ಪ್ರತಿ ಎರಡು ಗಂಟೆಗಳಿಗೆ ಒಮ್ಮೆ ತಪ್ಪದೆ ಕೈ ತೊಳೆಯುವ ಕಾರ್ಯ ಮಾಡಿದರೆ ವೈರಸ್‌ ಬರದಂತೆ ಮಾಡಬಹುದು.

ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಿ: ಕೊರೊನಾ ವೈರಸ್‌ ಬರುವ ಮುನ್ನವೇ ಎಲ್ಲ ಸಮುದಾಯ ಆಸ್ಪತ್ರೆಗಳಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ ಮೈಲಾರೆ ಹೇಳಿದರು.

ಕೊರೊನಾ ರೋಗಿ ಬಂದ ನಂತರ ಸಿದ್ಧತೆ ಮಾಡಿಕೊಳ್ಳುವ ಬದಲಿಗೆ ಕೂಡಲೇ ಎಲ್ಲ ಕಡೆ ಮುನ್ನೆಚ್ಚರಿಕೆ ಕ್ರಮಗಳು ವಹಿಸಬೇಕು. ಮಾಸ್ಕ್ಸೇ ರಿದಂತೆ ಒಂದು ಸೇಟ್‌ ಸಮವಸ್ತ್ರ ಖರೀದಿಸಿ. ಅಲ್ಲದೆ, ಎರಡು ಹಾಸಿಗೆಗಳ ಘಟಕ ಸ್ಥಾಪಿಸಿಕೊಳ್ಳಿ ಎಂದು ತಿಳಿಸಿದರು. ಈ ಮಧ್ಯದಲ್ಲಿ ಹಳ್ಳಿಖೇಡ(ಬಿ) ಆಸ್ಪತ್ರೆಯ ವೈದ್ಯ ಮಾತನಾಡಿ, ಕೊರೊನಾ ಘಟಕ ಸ್ಥಾಪನೆ ಕೂರಿತು ಸೂಕ್ತ ನಿಯಮಾವಳಿಗಳನ್ನು ನೀಡಿ ಎಂದು ಹೇಳಿದರು. ಇದಕ್ಕೆ ತಹಶೀಲ್ದಾರ್‌ ಉತ್ತರಿಸಿ, ಜಿಲ್ಲಾಧಿಕಾರಿಗಳು ಮೌಖೀಕ ಆದೇಶ ನೀಡಿದ್ದು, ಎಲ್ಲ ಸಂದರ್ಭದಲ್ಲಿ ಆದೇಶಗಳನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರಯಾಣಿಕರಿಗೆ ತಪಾಸಣೆ ಮಾಡಿ: ನೆರೆ ರಾಜ್ಯದಿಂದ ಇಲ್ಲಿಗೆ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸುವುದರಿಂದ ಬೇರೆ ಕಡೆಯಿಂದ ರೋಗ ಬರದಂತೆ ಎಚ್ಚರಿಕೆ ವಹಿಸಬಹುದಾಗಿದೆ. ದಿನಕ್ಕೆ ನೂರಾರು ಬಸ್‌ ಸಂಚಾರ ಇದ್ದು, ಬಸ್‌ ನಿಲ್ದಾಣ ಅಥವಾ ಇತರೆ ಕಡೆಗಳಲ್ಲಿ ಕಡ್ಡಾಯ ತಪಾಸಣೆ ಮಾಡಿದರೆ ಸೂಕ್ತ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪ್ರಶಾಂತ ಕನಕಟ್ಟೆ ಕೊರೊನಾ ಕುರಿತು ವಿವರಣೆ ನೀಡಿದರು. ತಾಲೂಕು ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೈಜಿನಾಥ ಫುಲೆ, ಸಿಡಿಪಿಒ ಶೋಭಾ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next