ಹುಮನಾಬಾದ: ಸರ್ಕಾರದ ವಿವಿಧ ಇಲಾಖೆ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ, ಸಕಾಲಕ್ಕೆ ಸರ್ಕಾರದ ಸೌಲಭ್ಯ ದಕ್ಕುವಂತೆ ನೋಡಿಕೊಂಡು ಜನಾನುರಾಗಿ ಅಧಿಕಾರಿಗಳಾಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಎನ್.ಎಂ.ಓಲೇಕಾರ್ ಹೇಳಿದರು.
ಪಟ್ಟಣದ ಮಿನಿವಿಧಾನ ಸೌಧದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬೀದರ್ ಲೋಕಾಯುಕ್ತ ಕಚೇರಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಆಲಿಕೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕಾಯುಕರು ಎಂದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುವ ನೌಕರರ ವೈರಿಗಳು ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ಸರ್ಕಾರದ ಯೋಜನೆಗಳು ಭ್ರಷ್ಟಾಚಾರ ರಹಿತವಾಗಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಅನಗತ್ಯವಾಗಿ ಯಾವುದೇ ಇಲಾಖೆಯ ಅಧಿಕಾರಿಗಳಿಗೆ ಕಿರುಕುಳ ನೀಡುವುದಿಲ್ಲ ಎಂದರು.
ಸಮಾಜ ಕಲ್ಯಾಣ, ಬಿಸಿಎಂ, ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ಸಕಲ ಸೌಲಭ್ಯಗಳು ತಲುಪುವಂತೆ ನೋಡಿಳ್ಳಬೇಕು. ಬಿಸಿಯೂಟ ಯೋಜನೆ ಸಮರ್ಪಕ ಅನುಷ್ಠಾನ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಜಾಗರುಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಎಲ್ಲಕ್ಕೂ ಮಿಗಿಲಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದ ನಿಯಮಾನುಸಾರ ಮಕ್ಕಳಿಗೆ ಸಕಲ ಸೌಲಭ್ಯ ತಲುಪುವಂತೆ ಎಚ್ಚರ ವಹಿಸಬೇಕು ಎಂದರು.
ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅರ್ಹರಿಗೆ ಸರ್ಕಾರದ ನಿಯಮ ಅನುಸಾರವಾಗಿ ರಿಯಾಯ್ತಿ ದರದಲ್ಲಿಯೇ ಉಪಕರಣ, ರಸಗೊಬ್ಬರ, ಬೀಜ ವಿತರಿಸಬೇಕು. ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಭ್ರಷ್ಟಾಚಾರ ಎಸಗಿರುವ ಕುರಿತು ಬರುವ ದೂರುಗಳನ್ನು ಆಧರಿಸಿ, ತನಿಖೆ ಕೈಗೊಳ್ಳಲಾಗುವುದು. ತಪ್ಪಿತಸ್ಥರೆಂಬುದು ಸಾಬೀತಾದಲ್ಲಿ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ದೂರು ಬಂದು ವಿಷಯ ತನಿಖಾ ಹಂತಕ್ಕೆ ಹೋಗುವ ಮುನ್ನ ದೂರು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಲೋಕಾಯುಕ್ತ ಸಿಪಿಐ ಶಿವಕುಮಾರ ಮುಚ್ಚಂಡಿ ಪ್ರಾಸ್ತಾವಿಕ ಮಾತನಾಡಿ, ಸಾರ್ವಜನಿಕರು ಸರ್ಕಾರದ ಸೌಲಭ್ಯ ದಕ್ಕುವ ವಿಷಯದಲ್ಲಿ ಯಾವುದೇ ರೀತಿ ಅನ್ಯಾಯ ಆದರೂ ಮುಲಾಜಿಲ್ಲದೇ ನಿರ್ಭಯವಾಗಿ ಅಗತ್ಯ ಸಾಕ್ಷ್ಯಾಧಾರಗಳ ಸಮೇತ ದೂರು ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ವೈಜಪ್ಪ ಫುಲೆ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ|ಗೋವಿಂದ, ಬಿಇಒ ಶಿವರಾಚಪ್ಪ ವಾಲಿ, ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ, ಸಿಡಿಪಿಒ ಶೋಭಾ ಕಟ್ಟಿ, ಬಿಸಿಯೂಟ ಸಹಾಯಕ ನಿರ್ದೇಶಕ ಓಂಕಾರ ರೂಗನ್, ತಾಲೂಕು ವೈದ್ಯಾಧಿ ಕಾರಿ ಡಾ|ಅಶೋಕ ಮೈಲಾರೆ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅನುಷ್ಟಾನ ಅಧಿಕಾರಿಗಳು ಇದ್ದರು. ಲೋಕಾಯುಕ್ತ ಇಲಾಖೆ ಯುವರಾಜ ಭುರ್ಕಿ ಸ್ವಾಗತಿಸಿದರು. ಸಂತೋಷ ವಂದಿಸಿದರು.