ಹುಮನಾಬಾದ: ಚಿಟಗುಪ್ಪ ತಾಲೂಕು ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರುವ ರೋಗಿಗಳಿಗೆ ಮೂಲ ಸೌಕರ್ಯಗಳು ದೊರೆಯದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಹರಿದ ಬೆಡ್‌ನಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಣಂತಿಯರ ವಾರ್ಡ್ ನಲ್ಲಿ ಮಹಿಳೆಯರು ಮನೆಯಿಂದಲೇ ಬೆಟ್ ಶೀಟ್ ತಂದು ಬೆಡ್ ಮೇಲೆ ಹಾಸಿಕೊಂಡು ಮಲಗುವ ಸ್ಥಿತಿ ಇಲ್ಲಿದೆ. ಇದೊಂದೇ ಆಸ್ಪತ್ರೆ ಎಂದರೆ ತಪ್ಪಗುತ್ತದೆ.
ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಇದೇ ಸ್ಥಿತಿ ಇದೆ. ಯಾವ ಕಾರಣಕ್ಕೆ ಬೆಡ್‌ಗಳ ಮೇಲೆ ಬೇಡ್‌ಶೀಟ್ ಹಾಕಿಲ್ಲ ಎಂದು ಸಿಬ್ಬಂದಿಗಳನ್ನು ವಿಚಾರಿಸಿದರೆ, ಒಗೆಯುವುದಕ್ಕೆ ಕಳುಹಿಸಲಾಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಯಾರು ಕೇಳಿದರೂ ದಿನ ನಿತ್ಯ ಹಾಕಲಾಗುತ್ತದೆ. ಇವತ್ತೆ ಇಲ್ಲ ಎಂದು ಸುಳ್ಳು ಹೇಳಿಕೆ ನೀಡಿ ಸಿಬ್ಬಂದಿ ರೋಗಿಗಳಿಗೆ ಸಮಾಧಾನ ಮಾಡುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ರೋಗಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರೆ ಬೆಟ್‌ಶೀಟ್ ಹಾಕುತ್ತಿಲ್ಲ. ನಾವು ಮನೆಯಿಂದ ತಂದು ಹಾಕಿಕೊಂಡಿದ್ದೇವೆ ಎಂದು ಹೆಸರು ಹೇಳಲಿಚ್ಚಿಸಿದ ಬಾಣಂತಿಯರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಎರಡೂವರೆ ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಆಸ್ಪತ್ರೆಯಲ್ಲಿಯೇ ಸ್ಥಾಪಿಸಲಾಗಿದೆ. ಆದರೆ, ಇಂದಿಗೂ ಕೂಡ ಇಲ್ಲಿನ ರೋಗಿಗಳು ಅದರಲ್ಲಿ ಹನಿ ನೀರು ಕಂಡಿಲ್ಲ. ಆಸ್ಪತ್ರೆ ಸುಧಾರಣೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತಿದೆ. ಆದರೆ, ರೋಗಿಗಳಿಗೆ ನ್ಯಾಯಯುತವಾಗಿ ನೀಡಬೇಕಾದ ಮೂಲ ಸೌಕರ್ಯಗಳನ್ನು ನೀಡುವಲ್ಲಿ ಇಲ್ಲಿನ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪಗಳು ಇವೆ. ಆಸ್ಪತ್ರೆಯಲ್ಲಿನ ಬಾಣಂತಿಯರು ಬಿಸಿ ನೀರು ಹಾಗೂ ಶುದ್ಧ ಕುಡಿಯುವ ನೀರು ಬೇಕು ಎಂದರೆ, ಇದರ ಬಗ್ಗೆ ತಲೆ ಕಡೆಸಿಕೊಳ್ಳದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಷ್ಕಾಳಜಿಯಿಂದ ವರ್ತಿಸುತ್ತಾರೆ. ಇದರಿಂದ ರೋಗಿಗಳ ಆರೈಕೆಗೆ ಬಂದಿರುವ ಸಂಬಂಧಿಕರು ಆಸ್ಪತ್ರೆಯಲ್ಲಿ ಸೌಕರ್ಯಗಳನ್ನು ನೋಡಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇತ್ತೀಚೆಗೆ ಆಸ್ಪತ್ರೆಗೆ ಬಣ್ಣ ಹಚ್ಚಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಕೆಲ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಆದರೆ, ಆಸ್ಪತ್ರೆ ಸುಂದರ ಕಂಡರೆ ಸಾಲದು, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳು ಕೂಡ ಸುಂದರವಾಗಿರಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರದ ಸೌಲಭ್ಯಗಳು ಉತ್ತಮವಾಗಿ ದೊರೆಯುವಂತಾಗಬೇಕು ಎಂಬ ಅನಿಸಿಕೆಗಳನ್ನು ರೋಗಿಗಳು ವ್ಯಕ್ತಪಡಿಸಿದ್ದಾರೆ.
ಚಿಟಗುಪ್ಪ ಆಸ್ಪತ್ರೆಯಲ್ಲಿ ರೋಗಿಗಳ ಸೌಕರ್ಯಗಳು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಶುದ್ಧ ಕುಡಿಯುವ ಘಟಕ ಮುಂದಿನ ಕೆಲ ದಿನಗಳಲ್ಲಿ ಶುರುಮಾಡಿ ರೋಗಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಅಲ್ಲದೆ, ತಣ್ಣನೆಯ ನೀರು ಕುಡಿಸುವ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಆಸ್ಪತ್ರೆಯಲ್ಲಿ ಅಮೋಘ ಬದಲಾವಣೆ ತರಲಾಗುವುದು.
ಡಾ| ವೀರನಾಥ ಕನಕ,
ಚಿಟಗುಪ್ಪ ಆಸ್ಪತ್ರೆ ಮುಖ್ಯಸ್ಥರು
ದುರ್ಯೋಧನ ಹೂಗಾರ