ಹುಮನಾಬಾದ: ಅಕ್ಷರದ ಮೂಲಕ ಬೆಳಕಿನ ದಾರಿ ತೋರಿಸಿ ವ್ಯಕ್ತಿತ್ವ ರೂಪಿಸಬೇಕಾದ ಪಟ್ಟಣದ ಕೇಂದ್ರ ಗ್ರಂಥಾಲಯ ಮೂಲಸೌಲಭ್ಯ ಕೊರತೆಯಿಂದ ನರಳುತ್ತಿದ್ದು, ಓದುಗರಿಗೆ ಸೂಕ್ತ ಪರಿಸರವಿಲ್ಲದೇ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.
1968ರಲ್ಲಿ ಈಗಿನ ಮುಖ್ಯ ಮಾರುಕಟ್ಟೆ ಇರುವ ಬಸವೇಶ್ವರ ವೃತ್ತದ ಪುರಸಭೆಯ ಮೊದಲ ಮಹಡಿಯಲ್ಲಿ ಗ್ರಂಥಾಲಯ ಆರಂಭಗೊಂಡಿತ್ತು. ಕಾದಂಬರಿ ಓದುವ ಹವ್ಯಾಸ ಹೆಚ್ಚಾಗಿದ್ದ ಆ ಸಂದರ್ಭದಲ್ಲಿ ಸದಸ್ಯತ್ವ ಹೊಂದಿದ್ದ ಮಹಿಳೆಯರು ಮತ್ತು ಪುರುಷರು ವಾರದಲ್ಲಿ ಎರಡು ಮೂರು ಬಾರಿ ಪುಸ್ತಕ ಬದಲಾಯಿಸಿಕೊಳ್ಳಲು ಬರುತ್ತಿದ್ದರು. ಸಾಧ್ಯವಾದವರು ಪ್ರತಿನಿತ್ಯವೂ ಬಂದು ದಿನಪತ್ರಿಕೆ, ವಾರ ಪತ್ರಿಕೆ ಓದಲು ತಪ್ಪದೇ ಬರುವ ಹವ್ಯಾಸ ಹೊಂದಿದ್ದರು.
ನಾಲ್ಕು ಬಾರಿ ಸ್ಥಳಾಂತರ: 1968ರಲ್ಲಿ ಪುರಸಭೆ ಕಟ್ಟಡದಲ್ಲಿ ಆರಂಭಗೊಂಡ ಗ್ರಂಥಾಲಯ ಸುಗಮವಾಗಿಯೇ ಸಾಗಿತ್ತು. ಆದರೆ ಹೆಚ್ಚಾದ ಜನಸಂಖ್ಯೆ ಮತ್ತು ಸಂಚಾರಕ್ಕೆ ಅಡಚಣೆಯಾದ ಹಿನ್ನೆಲೆಯಲ್ಲಿ ಆ ಕಟ್ಟಡ ನೆಲಸಮಗೊಳಿಸಲಾಯಿತು. ನಂತರ ಅಂದಿನ ಬಿಡಿಒ ಈಗಿನ ತಾಲೂಕು ಪಂಚಾಯಿತಿ ಕಚೇರಿ ಪ್ರಾಂಗಣದಲ್ಲಿದ್ದ ಸಾರ್ವಜನಿಕ ಸಂಪರ್ಕ ಕಚೇರಿ ಇರುವ ಕಟ್ಟಡಕ್ಕೆ ಸ್ಥಳಾಂತರಿಸಿದರು. ಶಿಥಿಲಗೊಂಡ ಹಳೆ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿದ್ದ ಹಿನ್ನೆಲೆಯಲ್ಲಿ ಪುಸ್ತಗಳು ಸಂಪೂರ್ಣ ಹಾಳಾಗುತ್ತಿರುವುದನ್ನು ಗಮನಿಸಿ, ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಎದುರಿಗೆ ಈಗಿನ ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಕೆಲ ವರ್ಷ ಸ್ಥಳದ ಅಭಾವದ ಹಿನ್ನೆಲೆಯಲ್ಲಿ ಗ್ರಂಥಾಲಯ ಸೇವೆ ಸ್ಥಗಿತಗೊಂಡಿತ್ತು. ತದನಂತರ ಎರಡು ದಶಕ ಹಿಂದೆ ಈಗಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿರುವ ಪುರಸಭೆ ಜಮೀನಿನಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಅನೈರ್ಮಲ್ಯದ ಪರಿಸರ: ಈಗಿರುವ ಸ್ಥಳದಲ್ಲಿ ಗ್ರಂಥಾಲಯಕ್ಕೆ ಅಗತ್ಯಕ್ಕೆ ತಕ್ಕಷ್ಟು ಸ್ಥಳ ಇಲ್ಲ. ಅಲ್ಲದೇ ಹಿಂದೆ ಮತ್ತು ಬಲಬದಿಯ ಪರಿಸರದಲ್ಲಿ ಗಿಡಗಂಟೆ ಬೆಳೆದು ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಎದುರಿಗೆ ಖಾಸಗಿ ವ್ಯಕ್ತಿಗಳು ಸುರಿದಿರುವ ಜೆಲ್ಲಿ ಕಲ್ಲು ತೆರವುಗೊಳಿಸದ ಕಾರಣ ಗ್ರಂಥಾಲಯದ ಮುಂಭಾಗ ತಿಪ್ಪೆಯಾಗಿ ಮಾರ್ಪಟ್ಟಿದೆ. ಗ್ರಂಥಾಲಯ ಎದುರಿಗಿರುವ ಸ್ಥಳದಲ್ಲಿ ನಿರ್ಮಿಸಿದ ಸಾರ್ವಜನಿಕ ಮೂತ್ರಾಲಯ ನಾರುತ್ತಿರುವುದುರಿಂದ ಓದಗರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ನಿತ್ಯ ತಪ್ಪದೇ ಬರುವ ಬೆರಳೆಣಿಕೆಯಷ್ಟು ಓದುಗರು ಕುಳಿತಷ್ಟು ಹೊತ್ತು ಸೊಳ್ಳೆಗಳನ್ನು ಹೊಡೆಯುತ್ತಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ.
ಅಗತ್ಯಕ್ಕೆ ತಕ್ಕಷ್ಟು ಆಸನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಹಿಳೆಯರು, ಪುರುಷರಿಗಾಗಿ ಪ್ರತ್ಯೇಕ ಶೌಚಾಲಯವಿಲ್ಲ. ಓದುಗರಿಗಾಗಿ ಪುರುಷರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಇಲ್ಲ. ಈ ಎಲ್ಲದರ ಜೊತೆಗೆ ಪುಸ್ತಕಗಳ ಜೋಡಣೆ ಸಹ ನಿಯಮ ಅನುಸಾರ ಇಲ್ಲ.
ಧೂಳು ತುಂಬಿದ ಪುಸ್ತಕಗಳು: ಈ ಗ್ರಂಥಾಲಯದಲ್ಲಿನ ಪುಸ್ತಗಳ ಮೇಲೆ ಧೂಳು ಸಂಗ್ರಹಗೊಂಡಿರುವುದರಿಂದ ಪುಸ್ತಕ ಕೈಗೆತ್ತಿಕೊಂಡವರು ಕಡ್ಡಾಯವಾಗಿ ಕೈ ತೊಳೆದುಕೊಳ್ಳಬೇಕು. ತೊಳೆದುಕೊಳ್ಳದಿದ್ದರೇ ಧರಿಸಿದ ಶರ್ಟ್ ಕೆಂಪು ವರ್ಣದ್ದಾಗುತ್ತದೆ. ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ ಹೆಚ್ಚಿನ ಜ್ಞಾನಕ್ಕಾಗಿ ಬೇರೆ ಬೇರೆ ಲೇಕಕರು ಬರೆದ ಪುಸ್ತಗಳು ಇಲ್ಲಿ ಲಭ್ಯವಿಲ್ಲದ ಕಾರಣ ಇಲ್ಲಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಜ್ಞಾನಾರ್ಜನೆ ಜೊತೆಗೆ ಸ್ಪರ್ಧಾತ್ಮಕ ಯುಗವಾದ ಇಂದು ಸರ್ಕಾರಿ ಹುದ್ದೆ ಪಡೆಯುವ ವಿದ್ಯಾರ್ಥಿಗಳಿಗೆ ಓದಲು ಅಗತ್ಯ ಪುಸ್ತಕಗಳು ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಪಟ್ಟಣದ ಗ್ರಂಥಾಲಯದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ಕನ್ನಡ, ಹಿಂದಿ, ಆಂಗ್ಲ, ಮರಾಠಿ, ಉರ್ದು ಭಾಷೆಯ ಪತ್ರಿಕೆಗಳು, ಕನ್ನಡ ವಾರ-ಪಾಕ್ಷಿಕ ಪತ್ರಿಕೆ ಕಡ್ಡಾಯ ಲಭ್ಯ ಇರುತ್ತವೆ. 3 ಜನ ಗ್ರಂಥಾಲಯ ಸಹಾಯಕರು ಬೆಳಗ್ಗೆ 8ರಿಂದ 12, ಮಧ್ಯಾಹ್ನ 12ರಿಂದ 3 ಮತ್ತು ಸಂಜೆ 3ರಿಂದ 8ಗಂಟೆ ವರೆಗೆ ಸೇವೆ ಸಲ್ಲಿಸುತ್ತಾರೆ. ಮೂರು ತಿಂಗಳಿಗೊಮ್ಮೆ ಪತ್ರಿಕಾ ವಿತರಕರಿಗೆ ಶುಲ್ಕ ಪಾವತಿಸುವ ವ್ಯವಸ್ಥೆ ಇದೆ.