Advertisement

ಮಾನವ ಹಕ್ಕುಗಳ ರಕ್ಷಣೆ ಅಗತ್ಯ

08:19 PM Dec 10, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಸಾರ್ವಜನಿಕರಿಗೆ ಸಂವಿಧಾನ ಬದ್ಧವಾಗಿರುವ ತಮ್ಮ ಹಕ್ಕುಗಳ ಬಗ್ಗೆ ಇರುವ ಕಾಳಜಿ ಮೂಲಭೂತ ಕರ್ತವ್ಯಗಳ ಮೇಲೆಯೂ ಇರಬೇಕು. ಶ್ರೀ ಸಾಮಾನ್ಯನ ಮೇಲೆ ಆಗುವ ಶೋಷಣೆ ತಡೆದು ಅವರ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಮೂಲ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ತಿಳಿಸಿದರು.

Advertisement

ನಗರದ ಹೊರ ವಲಯದ ಚಿತ್ರಾವತಿ ಸಮೀಪದ ಶಿಕ್ಷಣ ಮಹಾ ವಿದ್ಯಾಲಯದ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿಶ್ವ ವಿದ್ಯಾಲಯ ಶಿಕ್ಷಣ ಕಾಲೇಜು ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದಿಂದ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬನ ಕರ್ತವ್ಯ: ಸಮಾಜದಲ್ಲಿ ಜನಸಾಮಾನ್ಯರು ಸುಗಮ ಜೀವನ ನಡೆಸಲು ಮಾನವ ಹಕ್ಕುಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಇತರರ ಹಕ್ಕುಗಳನ್ನು ಗೌರವಿಸಿ ಉಲ್ಲಂಘನೆಯಾಗದಂತೆ ತಡೆದು ರಕ್ಷಣೆ ನೀಡುವುದು ಪ್ರತಿಯೊಬ್ಬನ ಕರ್ತವ್ಯ ಎಂದರು. ಅಮಾನವ ಹಕ್ಕುಗಳು ಮನುಷ್ಯ ಹುಟ್ಟಿನಿಂದಲೇ ಎಲ್ಲಾ ರೀತಿಯ ಸೌಲಭ್ಯಗಳನ್ನು ಸಮಾನತೆ ಪಡೆಯುತ್ತಾನೆ. ಅದು ಸಂವಿಧಾನ ಕಲ್ಪಿಸಿರುವ ಅವಕಾಶ. ಮಾನವ ಹಕ್ಕುಗಳನ್ನು ರಕ್ಷಿಸುವ ಮೂಲ ಉದ್ದೇಶವನ್ನಿಟ್ಟುಕೊಂಡು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಆದರೆ ಇಂತಹ ಕಾರ್ಯಕ್ರಮಗಳು ಸಾಂಕೇತಿಕವಾಗಿ ನಡೆಯದೇ ಮಾನವ ಹಕ್ಕುಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕೆಂದು ಹೇಳಿದರು.

ದುಷ್ಪರಿಣಾಮ: ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ರೂಪಾ ಮಾತನಾಡಿ, ಮಾನವ ಹಕ್ಕುಗಳಿಂದ ಉಲ್ಲಂಘನೆಗೊಳಗಾದ ನಿರ್ಗತಿಕರಿಗೆ ಕಾನೂನಿನ ರಕ್ಷಣೆ, ನೆರವು, ಬದುಕಲು ದಾರಿ ತೋರಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ದಿನಾಚರಣೆಗಳನ್ನು ಮಾಡುವುದರ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು. ಮಾನವ ಹಕ್ಕುಗಳ ಉಲ್ಲಂಘನೆ ದೇಶದ ಅಭಿವೃದ್ದಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಅಸಮಾನತೆ, ದೌರ್ಜನ್ಯ: ಹಿರಿಯ ಸಿವಿಲ್‌ ನ್ಯಾಯಾಧೀಶ ಲೋಕೇಶ್‌ ಮಾತನಾಡಿ, ಜೈಲಿನಲ್ಲಿರುವಂತಹ ಕೈದಿಯನ್ನು ಕೊಲ್ಲುವುದು ಸಹ ಮಾನವ ಹಕ್ಕುಗಳ ವ್ಯಾಪ್ತಿಗೆ ಬರುತ್ತದೆ. ಜೊತೆಗೆ ಭ್ರೂಣದಲ್ಲಿರುವಂತಹ ಮಗು ಸಹ ಕೊಲ್ಲುವುದು ಭ್ರೂಣ ಹತ್ಯೆ. ಈ ಬಗ್ಗೆ ವಿದ್ಯಾರ್ಥಿಗಳು ಪೋಷಕರಲ್ಲಿ ಅರಿವು ಮೂಡಿಸಬೇಕೆಂದರು. ಎಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗುತ್ತವೆಯೋ ಅಲ್ಲಿ ಅಸಮಾನತೆ, ದೌರ್ಜನ್ಯ ಇರುತ್ತದೆ ಎಂದರು.

Advertisement

ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ. ವಿಶ್ವನಾಥ್‌ ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1993ರ ಕುರಿತು ಅರಿವು ಮೂಡಿಸಿದರು. ಮಾನವ ಹಕ್ಕುಗಳ ಆಯೋಗಕ್ಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಸುಮೋಟೋ ಅಧಿಕಾರವಿರುತ್ತದೆ ಮತ್ತು ಯಾವುದೇ ರೀತಿಯಾ ದೂರು ದಾಖಲಿಸಬಹುದು ಎಂದು ರಾಷ್ಟ್ರೀಯ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಕಾರ್ಯವ್ಯಾಪ್ತಿ ಮತ್ತು ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಪ್ರೊ.ಸಿ.ಎಂ.ಲೀಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಹೆಚ್‌.ದೇವರಾಜು, ಸಿವಿಲ್‌ ನ್ಯಾಯಾಧೀಶರಾದ ಕುಮಾರಿ ಮಾಲ, ನಿವೃತ್ತ ಪ್ರಾಂಶುಪಾಲ ಡಾ.ಕೋಡಿರಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದೇಶ ಮತ್ತು ರಾಜ್ಯ ಮಟ್ಟದಲ್ಲಿ ರಚಿಸಿರುವ ಮಾನವ ಹಕ್ಕುಗಳ ಆಯೋಗವು ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ತಡೆದು ರಕ್ಷಣೆ ಮಾಡುವ ಮೂಲ ಧ್ಯೇಯೋದ್ದೇಶ ಹೊಂದಿ ಕೆಲಸ ಮಾಡುತ್ತಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರಿಗೂ ಇಂದು ಮಾನವ ಹಕ್ಕುಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು.
-ಕೆ.ಅಮರನಾರಾಯಣ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು

Advertisement

Udayavani is now on Telegram. Click here to join our channel and stay updated with the latest news.

Next