ನಂಜನಗೂಡು: ಮಾನವ ಹಕ್ಕುಗಳನ್ನು ರಕ್ಷಿಸುವುದು ಮತ್ತು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ನ್ಯಾಯಾಧೀಶ ಗಣಪತಿ ಪ್ರಶಾಂತ ಮಂಜೇಶ್ವರ ಅಭಿಪ್ರಾಯಪಟ್ಟರು. ತಾಲೂಕಿನ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಮತ್ತು ತಾಪಂ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಆಚರಣೆ: ವಿಶ್ವದಲ್ಲಿನ ಪ್ರತಿಯೊಂದು ಜೀವಿ ಬದುಕುವ ಹಕ್ಕು ಕಾಪಾಡಲೋಸುಗವೇ ವಿಶ್ವಸಂಸ್ಥೆ ಹುಟ್ಟುಹಾಕಲಾಗಿದೆ. ಆ ಸಂಸ್ಥೆಯೇ ಮಾನವ ಹಕ್ಕುಗಳ ಕಾನೂನು, ರಚಿಸಿ ವಿಶ್ವಾದ್ಯಂತ ಜಾರಿಗೊಳಿಸಿದೆ. 1948 ಡಿಸೆಂಬರ್ 10ರಂದು ಈ ನಡವಾಳಿ ಜಾರಿಗೆ ಬಂದ ದಿನವನ್ನು ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇದನ್ನು ಜಾರಿ ಮಾಡಿದ ವಿಶ್ವ ಸಂಸ್ಥೆಯೇ, ಇದರ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದು ಸದಸ್ಯ ರಾಷ್ಟ್ರಗಳಲ್ಲಿ ಎಲ್ಲಿಯಾದರೂ, ಇದರ ಪಾಲನೆಯಲ್ಲಿ ಲೋಪ ಕಂಡರೆ ವಿಶ್ವ ಸಂಸ್ಥೆ ನೇರವಾಗಿ ಪ್ರವೇಶ ಮಾಡುತ್ತದೆ ಎಂದು ಹೇಳಿದರು.
ಮಾನವ ಹಕ್ಕು ಉಲ್ಲಂಘನೆಯಾಗದಿರಲಿ: ಮಾನವ ಹಕ್ಕುಗಳ ನಿರ್ವಹಣೆ, ಕಾನೂನು ಕ್ರಮ, ಕೌನ್ಸಿಲಿಂಗ್ ಇನ್ನೂ ಮುಂತಾದವು ದೇಶದಲ್ಲಿ ಜಾರಿಯಲ್ಲಿವೆ. ಸರ್ಕಾರದ ಅಂಗ ಸಂಸ್ಥೆಗಳ ನೌಕರರಿಂದ ತಪ್ಪುಗಳಾದರೆ, ವ್ಯಕ್ತಿಗೆ ಸಂಬಂಧಿಸಿದ್ದಾದರೆ, ಅವುಗಳನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಈ ರೀತಿಯ ಆರೋಪಗಳು ಬಾರದಂತೆ ಸರ್ಕಾರಿ ನೌಕರರು ನಡೆದುಕೊಳ್ಳಬೇಕು. ಎಲ್ಲೂ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಗಿರಿರಾಜ್ ಮಾತನಾಡಿ, ಬೇರೆಯವರಿಗೆ ಧಕ್ಕೆಯಾಗದಂತೆ ತಮ್ಮ ಆಸ್ತಿ ಪಾಸ್ತಿಗಳನ್ನು ರಕ್ಷಣೆ ಮಾಡಿಕೊಳ್ಳುವುದು ಈ ಕಾನೂನಿನ ಉದ್ದೇಶ. ಇನ್ನೊಬ್ಬರ ಬದುಕನ್ನು ಕಸಿಯುವುದು ಅಥವಾ ತುಳಿಯುಲು ಪ್ರಯತ್ನಿಸುವದೇ ಮಾನವ ಹಕ್ಕುಗಳ ಉಲ್ಲಂಘನೆ. ಅದು ಅಕ್ಷಮ್ಯ ಅಪರಾಧ. ಇದರಿಂದ ಕಠಿಣ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಬ್ಲ್ಯಾಕ್‌ಮೇಲ್‌ಗೆ ಬಳಕೆಯಾಗುತ್ತಿರುವುದು ವಿಷಾದನೀಯ: ತಾಲೂಕಿನ ಹಿರಿಯ ವಕೀಲ ಶ್ರೀಕಂಠ ಪ್ರಸಾದ ಮಾತನಾಡಿ, ಮಾನವ ಮಾತ್ರವಲ್ಲ. ವಿಶ್ವದ ಪ್ರತಿಯೊಂದು ಜೀವಿಯ ಬದುಕಿನ ಹಕ್ಕನ್ನು ಕಾಪಾಡುವುದೇ ಈ ಕಾನೂನಿನ ಉದ್ದೇಶವಾಗಿದೆ. ಸಕಲ ಜೀವಿಗಳ ರಕ್ಷಣೆಯೇ ಪ್ರಜಾಪ್ರಭುತ್ವದ ತಿರುಳು. ಪ್ರತಿಯೊಂದು ಜೀವಿಯ ಬದುಕಿನ ಹಕ್ಕನ್ನು ಕಿತ್ತುಕೊಂಡಾಗ ಈ ಕಾನೂನಿನ ಸ್ಪಷ್ಟ ಉಲ್ಲಂಘನೆ. ಇಂತಹ ಹಕ್ಕಿನ ರಕ್ಷಣೆ ಕಾನೂನು, ಬ್ಲಾಕ್ ಮೇಲ್‌ಗೆ ಬಳಕೆಯಾಗತ್ತಿರುವುದು ವಿಷಾದನೀಯ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹೇಳಿದರು.
ತಾಪಂ ಇಒ ಅಧಿಕಾರಿ ಶ್ರೀಕಂಠ ರಾಜ ಅರಸು ಸರ್ಕಾರಿ ವಕೀಲ ರಾಚಪ್ಪ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೀನಾಥ್, ಸರ್ಕಾರಿ ಅಭಿಯೋಜಕಿ ಬಿ.ಸವಿತಾ, ವಕೀಲ ಸಂಘದ ಕಾರ್ಯದರ್ಶಿ ನಾಗೇಂದ್ರಪ್ಪ, ಕಂದಾಯ ಇಲಾಖೆ ಅಧಿಕಾರಿ ಶಿವಪ್ರಸಾದ, ಉಚಿತ ಕಾನೂನು ಸೇವಾ ಸಮಿತಿ ರಾಮಣ್ಣ ಸೇರಿದಂತೆ ತಾ.ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು. ಉಪತಹಶೀಲ್ದಾರ ಬಾಲಸುಬ್ರಹ್ಮಣ್ಯಂ ನಿರೂಪಣೆ ಮಾಡಿದರು.