Advertisement
34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ನಿವಾಸಿಯೋರ್ವರು ಅನ್ಯಾಯಕ್ಕೆ ಒಳಗಾದ ಮಹಿಳೆ. ಕೂಲಿ ಕೆಲಸ ಮಾಡುತ್ತಿದ್ದು ಮಗನೊಡನೆ ಬೊಳ್ಳಾರಿನಲ್ಲಿ ವಾಸವಾಗಿರುವ ಮಹಿಳೆಯ ಜಾಗ, ರಾ.ಹೆ.ಗಾಗಿ ಭೂಸ್ವಾಧೀನಗೊಂಡಿತ್ತು. ಜಾಗದ ಪರಿಹಾರ ಮೊತ್ತ 5.20 ಲಕ್ಷ ರೂ.ವನ್ನು ಸರಕಾರ 2016ರ ಅ. 5ರಂದೇ ಉಪ್ಪಿನಂಗಡಿಯ ಕಾರ್ಪೊರೇಷನ್ ಬ್ಯಾಂಕಿನಲ್ಲಿರುವ ಮಹಿಳೆಯ ಖಾತೆಗೆ ಜಮೆ ಮಾಡಿತ್ತು. ಇದರ ಅನಂತರ ವಂಚನೆ ನಡೆದಿದೆ.
ಈ ಅನಕ್ಷರಸ್ಥ ಮಹಿಳೆಗೆ ಬ್ಯಾಂಕಿನಿಂದ ಹಣ ಪಡೆದುಕೊಳ್ಳಲು ಇನ್ನೊಬ್ಬರ ಸಹಾಯ ಬೇಕಾಗಿತ್ತು. ಇದನ್ನು ಸುಲಭವಾಗಿ ಬಳಸಿಕೊಂಡ ಸ್ಥಳೀಯ ನಿವಾಸಿ ಸತೀಶ್, ಮಹಿಳೆ ಜತೆಗೆ ಬ್ಯಾಂಕಿಗೆ ತೆರಳಿ 50 ಸಾವಿರ ರೂ.ಗಳನ್ನು ತೆಗೆದುಕೊಟ್ಟಿದ್ದರು. ಬಳಿಕ ಡಿ.17ರಂದು ಮತ್ತೆ 44,200 ರೂ. ತೆಗೆದುಕೊಟ್ಟಿದ್ದ. ಬಳಿಕ ಇಷ್ಟೇ ಹಣ ನಿಮಗೆ ಸೇರಿದ್ದು, ಉಳಿದ ಹಣವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಸುಳ್ಳು ಹೇಳಿದ್ದಾನೆ. ಇದನ್ನು ನಂಬದ ಮಹಿಳೆ, ಕಳೆದ ಎರಡು ವರ್ಷಗಳಿಂದ ಹಲವರ ಬಳಿ ಈ ವಿಚಾರ ಹೇಳುತ್ತಾ ಬಂದರೂ ನ್ಯಾಯ ದೊರಕಿರಲಿಲ್ಲ. ಆಕೆ ಕೊನೆಗೆ ಬೇರೆ ದಾರಿ ಕಾಣದೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ನೆರವು ಕೋರಿದ್ದಾರೆ. ಆಪದ್ಭಾಂಧವ ಎಸ್‌ಐ ನಂದಕುಮಾರ್
ಉಪ್ಪಿನಂಗಡಿಯ ಎಸ್‌ಐ ನಂದಕುಮಾರ್ ಅವರು ಪ್ರಕರಣವನ್ನು ಗಮನಿಸಿ, ಮಹಿಳೆಗೆ ವಂಚನೆ ನಡೆದಿರುವುದನ್ನು ಮನಗಂಡರು. ತತ್‌ಕ್ಷಣ ಸತೀಶ್‌ನನ್ನು ಬರಹೇಳಿ, ವಿಚಾರಣೆ ನಡೆಸಿದರು. ಆಗ ಪ್ರಕರಣ ಇನ್ನೊಂದು ರೂಪ ಬಯಲುಗೊಂಡಿದೆ. ಈ ಅವ್ಯವಹಾರ ಪ್ರಕರಣದಲ್ಲಿ ಸತೀಶ್ ಜತೆಗೆ ಅಮಾನತಿನಲ್ಲಿ ಇರುವ ರಾ.ಹೆ. ಪ್ರಾಧಿಕಾರದ ಅಧಿಕಾರಿಯೋರ್ವರು ಶಾಮೀಲಾಗಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಎಸ್‌ಐ ನಂದಕುಮಾರ್ ನೇತೃತ್ವದ ಪೊಲೀಸರ ತ್ವರಿತ ಕಾರ್ಯಾಚರಣೆ ಕಂಡು ದಂಗಾದ ವಂಚಕರು, ತಾವು ಇರಿಸಿಕೊಂಡಿದ್ದ ಸಂತ್ರಸ್ತ ಮಹಿಳೆಯ 4.20 ಲಕ್ಷ ರೂ. ಹಿಂದಿರುಗಿಸಿದರು.
Related Articles
Advertisement
ಎಸ್‌ಐ ಕಾರ್ಯಕ್ಕೆ ಶ್ಲಾಘನೆಪ್ರಕರಣದಲ್ಲಿ ಎಸ್‌ಐ ನಂದಕುಮಾರ್ ಕಾರ್ಯ ವೈಖರಿ ಶ್ಲಾಘನೆಗೆ ಪಾತ್ರವಾಗಿದೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಕೇವಲ 24 ತಾಸುಗಳಲ್ಲಿ ಮಹಿಳೆಗೆ ಅಷ್ಟೂ ಹಣ ಮರಳಿ ಸಿಗುವುದಕ್ಕೆ ಎಸ್‌ಐ ಕೈಗೊಂಡ ಮಾದರಿ ಕಾರ್ಯಾಚರಣೆ ಕಾರಣ ಎಂಬ ಪ್ರಶಂಸೆಯ ಮಾತು ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ವೈರಲ್ ಆಗಿದೆ. ಚತುಷ್ಪಥದ ಹಿಂದೆ ಇದೆ ವಂಚನೆಯ ಕರಿನೆರಳು
ಮಂಗಳೂರು- ಬೆಂಗಳೂರು ನಡುವಿನ ರಾ.ಹೆದ್ದಾರಿಯನ್ನು ಚತುಷ್ಪಥಗೊಳಿಸುವುದಕ್ಕಾಗಿ ಈಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಜಾಗವನ್ನು ಸ್ವಾಧೀನ ಪಡಿಸಲಾಗಿದೆ. ಭೂಮಾಲಕರ ನಿರೀಕ್ಷೆಯ ದುಪ್ಪಟ್ಟು ಮೊತ್ತವನ್ನು ಸರಕಾರ ನೀಡಿರುವ ಕಾರಣ, ಭೂ ಸ್ವಾಧೀನಕ್ಕೆ ಸಂಬಂಧಿಸಿ ಯಾವುದೇ ಗೊಂದಲ ಏರ್ಪಟ್ಟಿಲ್ಲ. ಆದರೆ ಪರಿಹಾರ ವಿತರಣೆಯನ್ನು ಮಧ್ಯವರ್ತಿಗಳು ವಂಚನೆಗಾಗಿ ಬಳಸಿಕೊಂಡಿರುವ ಕರಿನೆರಳು ಕಾಣಿಸಿದೆ. ಅಧಿಕಾರಿ ವರ್ಗದ ಸಹಕಾರ ಪಡೆದುಕೊಂಡು, ಮಧ್ಯವರ್ತಿಗಳು ಸಾಕಷ್ಟು ವಂಚನೆ ನಡೆಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅನಕ್ಷರಸ್ಥರು, ಜಾಗದ ದಾಖಲೆಯ ತಿಳಿವಳಿಕೆ ಇಲ್ಲದವರು ಮಧ್ಯವರ್ತಿಗಳ ಸಹಕಾರ ಪಡೆದಿರುವ ಶಂಕೆ ಇದೆ. ಇವರು ಕುಟಿಲ ತಂತ್ರ ಬಳಸಿ ಭೂಮಿಯ ಮೌಲ್ಯ ಹೆಚ್ಚಿಸಿ, ಉಪಾಯದಿಂದ ಹಣ ಕೀಳುತ್ತಿರುವ ತಂತ್ರ ವಿಚಾರಣೆ ಸಂದರ್ಭ ಬೆಳಕಿಗೆ ಬಂದಿದೆ. ವಂಚನೆಯ ಒಟ್ಟು ಹೂರಣ ಹೊರಬರಬೇಕಾದರೆ ದೊಡ್ಡ ಮಟ್ಟಿನಲ್ಲಿ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಅಮಾಯಕ ಮಹಿಳೆಗೆ ವಂಚನೆ ನಡೆಸಿರುವುದು ಗಮನಕ್ಕೆ ಬರುತ್ತಿದ್ದಂತೆ, ಮಧ್ಯವರ್ತಿಯನ್ನು ಕರೆಸಿ ವಿಚಾರಣೆ ನಡೆಸಿದ್ದೇವೆ. ಒಟ್ಟು ಚಿತ್ರಣ ಸಿಗುತ್ತಿದ್ದಂತೆ ಆರೋಪಿಗಳಿಗೆ ಎಚ್ಚರಿಕೆ ನೀಡಲಾಯಿತು. ಪ್ರಕರಣ ಸುಖಾಂತ್ಯಗೊಂಡಿತು. ಇಂತಹ ಅದೆಷ್ಟು ಪ್ರಕರಣ ನಡೆದಿದೆಯೋ ಗೊತ್ತಿಲ್ಲ.
– ನಂದಕುಮಾರ್, ಎಸ್‌ಐ, ಉಪ್ಪಿನಂಗಡಿ ಠಾಣೆ