Advertisement

ಸೋರುವ ಮನೆಯಲ್ಲಿ ಉಪನ್ಯಾಸಕಿ ಆಗುವ ಕನಸು ಕಾಣುತ್ತಿರುವ ಸವಿತಾ

03:50 AM Jun 28, 2018 | Team Udayavani |

ಕಾಸರಗೋಡು: ಈಗಲೋ ಆಗಲೋ ಕುಸಿವ ಭೀತಿಯಲ್ಲಿರುವ ಮನೆ. ಆದರೆ ಅದರೊಳಗೇ ಕೂತು ಇಲ್ಲೊಬ್ಬಳು ಪ್ರತಿಭಾವಂತ ವಿದ್ಯಾರ್ಥಿನಿ ಉಪನ್ಯಾಸಕಿಯಾಗುವ ಕನಸು ಕಾಣುತ್ತಿದ್ದಾಳೆ. ಆಕೆಯ ಮನೆಯ ಪರಿಸ್ಥಿತಿ ಉನ್ನತ ಕನಸಿಗೆ ಅಡ್ಡಿಯಾಗಿದೆ.

Advertisement

ಪ್ರತಿಭೆಗೆ ತಡೆ
ಕಾಸರಗೋಡು ತಾಲೂಕಿನ ಚೆರ್ಕಳ ಪಂಚಾಯತ್‌ ನ ಪಾಡಿಯ ಮಹಾಬಲ ರೈ ಹಾಗೂ ಸುಮಿತ್ರ ದಂಪತಿಯ ಪುತ್ರಿ ಸವಿತಾ ಕನ್ನಡ ಬಿಎ ಪದವೀಧರೆಯಾಗಿದ್ದು ಕಣ್ಣೂರು ವಿ.ವಿ. ಮಟ್ಟದಲ್ಲಿ ತೃತೀಯ ಸ್ಥಾನಿಯಾಗಿ ಹೊರಹೊಮ್ಮಿದಾಕೆ. ತಂದೆ ಕೃಷಿ ಕಾರ್ಯ ಮಾಡಿದರೆ, ತಾಯಿ ಬೀಡಿ ಕಟ್ಟಿ ಮಾಡುವ ಸಂಪಾದನೆಯೇ ಇವರಿಗೆ ಆಶ್ರಯ. ಓದಿನಲ್ಲಿ ಉತ್ತಮ ಸಾಧನೆ ಮಾಡಿದ ಸವಿತಾಗೆ ಉಪನ್ಯಾಸಕಿ  ಆಗುವ   ಮಹದಾಸೆ ಇದೆ. ಆದರೆ ಅದು ಈಡೇರುತ್ತಿಲ್ಲ! 

ಗೋಡೆ ಜರಿದು ಬಿದ್ದ ಮನೆ


ಸವಿತಾಮತ್ತು ಹೆತ್ತವರು ಇರುವುದು 30 ವರ್ಷ ಹಳೆಯ ಮಣ್ಣಿನ ಮನೆಯಲ್ಲಿ. ಧಾರಾಕಾರ ಮಳೆಗೆ ಆ ಮನೆಯ ಗೋಡೆಯೆಲ್ಲ  ಕರಗಿ ಜರಿದು ಬಿದ್ದಿದೆ. ಗೋಡೆಯ ಮೇಲೆ ಸೋಗೆ ಹಾಸಲಾಗಿದ್ದು, ಅದರ ಮೇಲಿಂದ ಟಾರ್ಪಾಲ್‌ ಹಾಕಲಾಗಿದೆ. ಟಾರ್ಪಾಲ್‌ ಮತ್ತು ಸೋಗೆಯನ್ನು ಪ್ರತಿವರ್ಷ ಈ ಕುಟುಂಬ ಹಾಸಿದರೂ ಸೋರುವ ಮಾಡಿಗೆ ಪರಿಹಾರವೇ ಕಂಡಿಲ್ಲ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾತ್ರಿಯೂ ಛತ್ರಿ ಹಿಡಿದು ಕೂರುವ ಪರಿಸ್ಥಿತಿ ಇದೆ.

ಸಾಲದ ಹೊರೆ 
ಸವಿತಾ ಅವರ ಸೋದರಿಯ ವಿವಾಹಕ್ಕಾಗಿ ಮಹಾಬಲ ರೈ ಬ್ಯಾಂಕ್‌ ನಲ್ಲಿ ಸಾಲ ಮಾಡಿದ್ದು, ಸಾಲ ತೀರಿಸಲು ಇದುವರೆಗೆ ಸಾಧ್ಯವಾಗಿಲ್ಲ. ಸುಮಾರು 1 ಲಕ್ಷ ರೂ. ಸಾಲವಿದ್ದು ವರ್ಷಂಪ್ರತಿ 20,000 ರೂ. ಬಡ್ಡಿ ಪಾವತಿಸಲು ಇವರು ಸಂಕಷ್ಟ ಪಡುತ್ತಿದ್ದಾರೆ. ಇನ್ನು ಇವರ ಮನೆಯಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿಗೆ ಬಾವಿ ಇದ್ದರೂ ಅದು ಬೇಸಗೆಯಲ್ಲಿ ಬರಡಾಗಿ ನೀರಿಗೆ ಕಷ್ಟ ಪಡುವ ಸ್ಥಿತಿ ಇದೆ.

ಸವಿತಾಗೆ ನೆರವು ನೀಡಿ
ಸವಿತಾಳ ಕುಟುಂಬದ ಸ್ಥಿತಿಯನ್ನು ಮನಗಂಡು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಈ ಕುಟುಂಬಕ್ಕೆ ಪುಟ್ಟ ಸೂರೊಂದನ್ನು ನಿರ್ಮಿಸಲು ಮುಂದಾಗಿದೆ. ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಇಲ್ಲಿಗೆ ನೆರವು ನೀಡಬಹುದು. 

Advertisement

ಯೂನಿಯನ್‌ ಬ್ಯಾಂಕ್‌ ಖಾತೆ ನಂಬ್ರ: 501002010008056
IFSC ಕೋಡ್‌: UBINO 550108.

Advertisement

Udayavani is now on Telegram. Click here to join our channel and stay updated with the latest news.

Next