ಮದ್ದೂರು: ಪ್ರಸಕ್ತ ದಿನಗಳಲ್ಲಿ ಮಾನವನ ದುರಾಸೆಯಿಂದಾಗಿ ಪರಿಸರ ಕಣ್ಮರೆಯಾಗಿ ಬೃಹತ್ ಕೈಗಾರಿಕಾ ಕಟ್ಟಡಗಳು ನಿರ್ಮಾಣಗೊಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಆರ್.ಕೆ.ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ ತಿಳಿಸಿದರು.
ತಾಲೂಕಿನ ಸೋಮನಹಳ್ಳಿ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಯುವ ಸಬಲೀಕರಣ ಕ್ರೀಡಾ ಇಲಾಖೆ, ವಿವೇಕಾನಂದ ಸಾಂಸ್ಕೃತಿಕ ಯುವ ಕ್ರೀಡಾ ಸಂಘ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ವಿವೇಕಾನಂದ ಸಪ್ತಾಹ ಹಾಗೂ ದೈಹಿಕ ಸಾಮರ್ಥಯ ದಿನದ ಪ್ರಯುಕ್ತ ಯುವಕ ಯುವತಿಯರಿಗೆ ಹಮ್ಮಿಕೊಂಡಿದ್ದ ಸೈಕಲ್ ರೇಸ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರ ರಕ್ಷಣೆ ಎಲ್ಲರ ಕರ್ತವ್ಯ: ವಿನಾಶದ ಹಂಚಿನಲ್ಲಿರುವ ಪರಿಸರವನ್ನು ಸಂರಕ್ಷಣೆ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸಬೇಕು. ತಲೆಗೊಂದು ಸಸಿ ನೆಟ್ಟು ಪರಿಸರ ರಕ್ಷಣೆ ಮಾಡಬೇಕು. ಕೇವಲ ಸಸಿ ನೆಟ್ಟರೆ ಅಲ್ಲಿಗೆ ನಮ್ಮ ಕೆಲಸ ಮುಗಿಯುವುದಿಲ್ಲ. ಆ ಸಸಿಯನ್ನು ಪೋಷಿಸುವುದು ತುಂಬಾ ಮುಖ್ಯ. ಹೆಸರಿಗೆ ಸಸಿ ನೆಡುವ ಕಾರ್ಯಕ್ರಮವಾಗದೆ, ಆ ಸಸಿ ಗಿಡವಾಗಿ, ಮರವಾಗಿ ಬೆಳೆದಾಗಲೇ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳು ಸಾರ್ಥಕ ಎಂದು ಹೇಳಿದರು.
ಸೈಕಲ್ ಸ್ಪರ್ಧೆ ಪ್ರೋತ್ಸಾಹಿಸಿ: ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಇಂತಹ ಸ್ಪರ್ಧೆ ಉತ್ತಮ ಮತ್ತು ಆರೋಗ್ಯಕರ ಬೆಳವಣಿಗೆಗೆ ಪೂರಕ. ಯುವಜನರು ಇಂತಹ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಜತೆಗೆ ಪ್ರೋತ್ಸಾಹಿಸಬೇಕು. ಅಲ್ಲದೆ ಹೊಗೆರಹಿತ ಸೈಕಲ್‌ಗಳನ್ನು ಬಳಸಿದರೆ ಪರಿಸರ ಮತ್ತು ಮನುಷ್ಯನ ಆರೋಗ್ಯವೂ ಸಂರಕ್ಷಣೆ ಮಾಡಬಹುದು. ಜಾಗತಿಕ ತಾಪಮಾನ ಇಳಿಕೆ ಮಾಡುವಲ್ಲಿ ಸೈಕಲ್ ಅಭ್ಯಾಸ ಉಪಯುಕ್ತಕರ. ಇದರಿಂದಾಗಿ ದೈಹಿಕ ಸಾಮರ್ಥ್ಯ ಹೆಚ್ಚುವ ಜತೆಗೆ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಎಸ್.ಆರ್.ಸತೀಶ್ ವಿಜೇತ ವಿದ್ಯಾರ್ಥಿಗಳಿಗೆ ನಗದು ಹಾಗೂ ಪಾರಿತೋಷಕ ವಿತರಿಸಿದರು. ಈ ವೇಳೆ ಜಿಪಂ ಸದಸ್ಯ ಬೋರಯ್ಯ, ಸೋಮನಹಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ, ಪ್ರಾಂಶುಪಾಲ ಪ್ರಕಾಶಬಾಬು, ಎನ್ನೆಸ್ಸೆಸ್ ಅಧಿಕಾರಿ ಚನ್ನಂಕೇಗೌಡ, ಸಂಘದ ಅಧ್ಯಕ್ಷೆ ಶೃತಿ, ಕಾರ್ಯದರ್ಶಿ ಎನ್.ಪ್ರಸನ್ನ, ದೈಹಿಕ ಶಿಕ್ಷಣ ಶಿಕ್ಷಕ ಸೋಮಣ್ಣ ಭಾಗವಹಿಸಿದ್ದರು.
ಯುವಕರ ವಿಭಾಗದಲ್ಲಿ: ಮಹಾಂತೇಶಗೌಡ(ಪ್ರ), ಜಸ್ವಂತ್(ದ್ವಿ), ಪ್ರಶಾಂತ್(ತೃ), ಸಿದ್ದರಾಜು, ಸುಹಾಸ್ ಸಮಾಧಾನಕರ ಬಹುಮಾನ ಪಡೆದರು. ಯುವತಿಯರ ವಿಭಾಗದಲ್ಲಿ ಎ.ಪಿ.ರಶ್ಮಿ(ಪ್ರ), ಸೋನಾ(ದ್ವಿ), ಭಾವನಾ(ತೃ), ಕೆ.ಟಿ.ಪೂಜಾಶ್ರೀ, ಸಿ.ಆರ್.ಪ್ರೀತಿ ಸಮಾಧಾನಕರ ಬಹುಮಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ರಾಜೇಶ್(ಪ್ರ), ಕೌಶಿಕ್‌ಗೌಡ(ದ್ವಿ), ಸಿ.ದರ್ಶನ್(ತೃ), ಕೆರಣ್, ಕೆ.ಎ.ನೋದಕುಮಾರ್ ಸಮಾಧಾನಕರ ಬಹುಮಾನ ಪಡೆದರು.