ಕಲಬುರಗಿ: ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಜನತೆಯಲ್ಲಿ ದ್ವೇಷ ಭಾವನೆ ಮೂಡಿಸುವ ಕೋಮುವಾದಿ ಶಕ್ತಿಗಳ ವಿರುದ್ಧ ಒಟ್ಟಾಗಿ ನಿಲ್ಲೋಣ ಎನ್ನುವ ಸಂದೇಶದೊಂದಿಗೆ ಸೌಹಾರ್ದ ಕರ್ನಾಟಕ ನಿರ್ಮಾಣಕ್ಕಾಗಿ ಜಾಗೃತಿ ಮೂಡಿಸಲು ಮಂಗಳವಾರ ನಗರದಲ್ಲಿ ಮಾನವ ಸರಪಳಿ ರಚಿಸಲಾಯಿತು.
ನಗರದ ಜಗತ್ ವೃತ್ತದಲ್ಲಿ ಸೌಹಾರ್ದ ಕರ್ನಾಟಕ ವೇದಿಕೆಯಡಿ ಪ್ರಗತಿಪರ ಸ್ವಾಮೀಜಿಗಳು, ಚಿಂತಕರು, ಬರಹಗಾರರು, ಹೋರಾಟಗಾರರು, ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ ನಿರ್ಮಿಸಿ ನೆಲದ ಸೌಹಾರ್ದತೆ, ಸಹಬಾಳ್ವೆಗೆ ಎಲ್ಲರೂ ಬದ್ಧರಾಗಿದ್ದೇವೆಂದು ಘೋಷಣೆ ಕೂಗಿದರು.
ದೇಶದಲ್ಲಿ ಇತ್ತೀಚೆಗೆ ಕೋಮುವಾದ ಹೆಚ್ಚಾಗಿದ್ದು, ರಾಜಕೀಯ ಲಾಭಕ್ಕಾಗಿ ಭಾಷೆ, ಆಹಾರ, ಜಾತಿ, ಮತದ ಹೆಸರಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಶಾಂತಿ, ನೆಮ್ಮದಿಯಿಂದ ಕೂಡಿರುವ ಸಮಾಜ ಒಡೆಯುವ ಕೆಲಸ ಮಾಡಲಾಗುತ್ತಿದೆ. ಪ್ರಶ್ನಿಸುವರಿಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದ್ದು, ಕೊಲ್ಲುವ ಸಂಸ್ಕೃತಿ ಬೆಳೆಯುತ್ತಿದೆ. ಹಿಂದೂ ಜಾಗೃತಿ ಹೆಸರಲ್ಲಿ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ. ಆದ್ದರಿಂದ ಶಾಂತಿ, ಸಾಮರಸ್ಯ ನೆಲೆಸಲು ಸಹಕರಿಸಿ ಎಂದು ಮನವಿ ಮಾಡಿದರು.
ಕೋಮುವಾದಿಗಳ ವಿಚ್ಛಿದ್ರಕಾರಿ ನಡೆಗಳು ಸಂವಿಧಾನಕ್ಕೆ ಅಪಾಯ ತಂದೊಡ್ಡುತ್ತಿವೆ. ಪ್ರಾಣ ಕೊಟ್ಟಾದರೂ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ರಕ್ಷಿಸಿಕೊಳ್ಳುತ್ತೇವೆ. ಸೌಹಾರ್ದ ಕರ್ನಾಟಕ, ಸೌಹಾರ್ದ ಭಾರತದ ಸ್ವರೂಪಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ ಎಂದು ನೆರೆದವರು ಸಂಕಲ್ಪ ತೊಟ್ಟರು.
ಮುಖಂಡರಾದ ಮಾರುತಿ ಮಾನ್ಪಡೆ, ಪ್ರೊ| ಕಾಶಿನಾಥ ಅಂಬಲಗಿ, ಶರಣಬಸಪ್ಪ ಮಮಶೆಟ್ಟಿ, ಅಲ್ತಾಫ್ ಇನಾಮದಾರ, ಮಠಾಧೀಶರು, ಪಾದ್ರಿಗಳು, ಮೌಲ್ವಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.