ಅವನಿಗಿಹುದು ಜ್ಞಾನದ ಬಲ,
ಇದಿಲ್ಲ ಇನ್ನಿತರ ಪ್ರಾಣಿಗಳಿಗೆ,
ಜ್ಞಾನಿಯಾಗುತ ನೀ ದೇವಮಾನವನಾಗೆಂದ,
ನಮ್ಮ ಮೃಡಗಿರಿ ಅನ್ನದಾನೀಶ
ಸಕಲ ಜೀವರಾಶಿಗಳಲ್ಲಿ ಮಾನವನೇ ಮಿಗಿಲು. ಬಹುಜನ್ಮದ ಪುಣ್ಯದ ಫಲವಾಗಿ ಮಾನವ ಜನ್ಮ ಸಿಕ್ಕುತ್ತದೆ. ಮಾನವನಿಗಿರುವ ಜ್ಞಾನಸಂಪತ್ತು ಇತರ ಪ್ರಾಣಿಗಳಿಗೆ ಇರುವುದಿಲ್ಲ. ಆದರೂ, ಭಗವಂತನು ಆಯಾ ಪ್ರಾಣಿಗಳಿಗೆ ವಿಶಿಷ್ಟವಾದ ಗುಣವನ್ನು ಕೊಟ್ಟಿದ್ದಾನೆ. ಮಾನವನಿಗೆ ಶಿವನು ಜ್ಞಾನ ಕೊಟ್ಟಿದ್ದರೂ ಗುರುಕೃಪೆಯಿಂದ ಮತ್ತು ಸ್ವಪ್ರಯತ್ನದಿಂದ ಮಾತ್ರ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ಮನುಷ್ಯರೂ ಬುದ್ಧಿವಂತರಾಗಿರುವುದಿಲ್ಲ.
Advertisement
ಜಾಣರಿಗಾಗಿ ವೇದೋಪನಿಷತ್ತುಗಳು, ಆಗಮ ಪುರಾಣಗಳು, ಶಾಸ್ತ್ರ ಕೃತಿಗಳು ವಿಪುಲವಾಗಿವೆ. ಬುದ್ಧಿವಂತರು ಜ್ಞಾನರಾಶಿಯನ್ನು ಅಭ್ಯಸಿಸಿ ಸುಖೀಗಳಾಗುತ್ತಾರೆ. ಒಮ್ಮೆ ಅರಣ್ಯದಲ್ಲಿ ಪ್ರಾಣಿಗಳ ಸಭೆ ಜರುಗಿತು. ಅಲ್ಲಿ ಪ್ರಾಣಿಗಳು ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಿದ್ದವು. ಇಲಿಯು, ಮಾನವರು ಸಂಗ್ರಹಿಸಿದ ಧವಸ ಧಾನ್ಯಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿ ಸುಖವಾಗಿರುವುದನ್ನು ಹೇಳಿತು. ಬೆಕ್ಕು, ತಾನು ಹಾಲು ತುಪ್ಪವನ್ನು ಕುಡಿದು ಸುಖವಾಗಿರುವೆ ಎಂದಿತು.