Advertisement
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಹುಚರ್ಚಿತವಾಗಿರುವುದು ಬಡ ಕುಟುಂಬಗಳಿಗೆ ಪ್ರತಿ ವರ್ಷ 72,000 ರೂ. ನೀಡುವುದು, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವುದು, ಒಂದೇ ಶ್ರೇಣಿಯ ಜಿಎಸ್‌ಟಿ, ಮಹಿಳೆಯರಿಗೆ ಶೇ. 33 ಮೀಸಲಾತಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ರದ್ದುಪಡಿಸುವಂಥ ಆಶ್ವಾಸನೆಗಳು. 121 ಸಾರ್ವಜನಿಕ ಸಂಪರ್ಕಗಳನ್ನು ಏರ್ಪಡಿಸಿ 53 ಸಮಾಲೋಚನೆಗಳನ್ನು ನಡೆಸಿ. ತಜ್ಞರ ಸಲಹೆಗಳನ್ನು ಪಡೆದು ಪ್ರಣಾಳಿಕೆಯನ್ನು ರಚಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ ಬಿಡುಗಡೆಯಾದ ಗಳಿಗೆಯಿಂದಲೇ ಕಾಂಗ್ರೆಸ್ ಪ್ರಣಾಳಿಕೆ ವಿವಾದಕ್ಕೀಡಾಗಿದೆ. ಮುಖ್ಯವಾಗಿ ಸೇನೆಯ ವಿಶೇಷಾಧಿಕಾರವನ್ನು ಹಿಂದೆಗೆದುಕೊಳ್ಳುವ ವಿಚಾರ ತೀವ್ರ ಟೀಕೆಗೆ ಗುರಿಯಾಗಿ ಪಕ್ಷಕ್ಕೆ ಮುಜುಗರವಾಗಿದೆ. ಜೊತೆಗೆ ವಾರ್ಷಿಕ 72,000 ರೂ. ನೀಡುವುದಾಗಿ ಹೇಳಿದ್ದರೂ ಇದಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಹೇಗೆ ಹೊಂದಿಸಬೇಕೆಂಬ ಸ್ಪಷ್ಟತೆ ಪಕ್ಷಕ್ಕೆ ಇಲ್ಲ. ರಾಹುಲ್ ಗಾಂಧಿಯ ಸಲಹೆಗಾರ ಸ್ಯಾಮ್ ಪಿತ್ರೊಡ ಮಧ್ಯಮ ವರ್ಗದವರ ಮೇಲೆ ತೆರಿಗೆ ಹಾಕಿ ಸಂಪನ್ಮೂಲ ಸಂಗ್ರಹಿಸಲಾಗುವುದು ಎಂದರೆ ರಾಹುಲ್ ಗಾಂಧಿ ಶ್ರೀಮಂತರಿಗೆ ತೆರಿಗೆ ಹಾಕುತ್ತೇವೆ ಎನ್ನುತ್ತಾರೆ. ಪಿ.ಚಿದಂಬರಂ ಸೇರಿದಂತೆ ಕೆಲವು ನಾಯಕರು ದೇಶದ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದ ಹೆಚ್ಚುವರಿ ತೆರಿಗೆ ಹಾಕುವ ಅಗತ್ಯ ಇಲ್ಲ ಎನ್ನುವ ಸಮಜಾಯಿಸಿ ನೀಡುತ್ತಿದ್ದಾರೆ. ವರ್ಷಕ್ಕೆ 3,60,000 ಕೋಟಿ ರೂ. ಸಂಗ್ರಹಿಸುವುದು ಹೇಗೆ ಎನ್ನುವ ಸ್ಪಷ್ಟ ಕಲ್ಪನೆ ಯಾರಿಗೂ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗಾಗಿ ಕಾಂಗ್ರೆಸ್‌ನ ಈ ಆಶ್ವಾಸನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಪ್ರಶ್ನೆಗಳಿವೆ. ಇದರ ಬದಲು ತನ್ನ ಅಚ್ಚುಮೆಚ್ಚಿನ ನರೇಗ ಯೋಜನೆಯನ್ನೇ ಇನ್ನಷ್ಟು ಬಲಪಡಿಸುವ ಯೋಜನೆಯನ್ನು ಘೋಷಿಸಿದ್ದರೆ ಒಂದಷ್ಟು ಅನುಕೂಲವಾಗುತ್ತಿತ್ತು. ಅದೇ ರೀತಿ ಸೇನೆಯ ವಿಶೇಷಾಧಿಕಾರವನ್ನು ಹಿಂದೆಗೆಯುವ ವಿಚಾರವನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವುದಕ್ಕಿಂತ ಅಧಿಕಾರಕ್ಕೇರಿದ ಬಳಿಕ ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಬಹುದಿತ್ತು.ಜಿಎಸ್‌ಟಿ ವಿಚಾರದಲ್ಲೂ ಎಲ್ಲ ಉತ್ಪನ್ನ ಮತ್ತು ಸೇವೆಗಳಿಗೆ ಒಂದೇ ದರವನ್ನು ಹೇಗೆ ಅನ್ವಯಿಸಬಹುದು ಎನ್ನುವುದನ್ನು ಕಾಂಗ್ರೆಸ್ ವಿವರಿಸಿಲ್ಲ.
Advertisement
ಹಮ್ ನಿಭಾಯೇಂಗೆ ಮತ್ತು ಸಂಕಲ್ಪ ಪತ್ರ
01:19 AM Apr 09, 2019 | Team Udayavani |