ದೇವಾಲಯ ನಿರ್ಮಿಸುವುದರಲ್ಲಿ ರಾಜ ಮಹಾರಾಜರುಗಳು ಮಾತ್ರವಲ್ಲ, ರಾಣಿಯರು, ದಂಡನಾಯಕರು, ಮಂತ್ರಿಗಳು, ಗ್ರಾಮದ ಮುಖಂಡರು, ಊರ ಪ್ರಮುಖರು ಸಹಾ ಪ್ರಮುಖ ಪಾತ್ರವಹಿಸಿದ್ದರು.
ಹೊಯ್ಸಳ ದೊರೆ ಎರಡನೆಯ ಬಲ್ಲಾಳನ ಮಹಾಪ್ರಧಾನಿ ಶ್ರೀಕರಣ ಹೆಗ್ಗಡೆ ಬೂಚಿರಾಜನು ಅರಸಿಕೆರೆ ತಾಲ್ಲೂಕು ಹುಲ್ಲೇಕೆರೆಯಲ್ಲಿ ಚನ್ನಕೇಶವ ದೇವಾಲಯಗಳನ್ನು ನಿರ್ಮಿಸಿದನು.
ಹುಲ್ಲೇಕರೆಯು ತಿಪಟೂರಿಗೆ ಸುಮಾರು 16 ಕಿ.ಮೀ. ದೂರದಲ್ಲಿದೆ. ಇಲ್ಲಿ ಹೊಯ್ಸಳ ವಾಸ್ತುಶಿಲ್ಪದ ಮನಮೋಹಕವಾದ ಶ್ರೀಚನ್ನಕೇಶ್ವರ ದೇವಾಲಯವಿದೆ. ಇದನ್ನು ಶ್ರೀಕರಣ ಹೆಗ್ಗಡೆ ಬೂಚಿರಾಜನು ಕ್ರಿ.ಶ.1163ರಲ್ಲಿ ತನ್ನ ದೊರೆ 1ನೇ ನರಸಿಂಹನಿಂದ ನೀರಗುಂದ ನಾಡಾದ, ಹುಲ್ಲೇಕೆರೆಯನ್ನು ಪಡೆದು, ಅದಕ್ಕೆ ಸೋಮನಾಥಪುರವೆಂದು ಹೆಸರಿಟ್ಟು ಶ್ರೀ ಕೇಶವಾಲಯವನ್ನು ನಿರ್ಮಿಸಿದನಂತೆ.
ಈ ದೇವಾಲಯವು ಊರಿನ ನಡುವೆ ಎತ್ತರವಾದ ದಿಬ್ಬದ ಮೇಲೆ ಪೂರ್ವಾಭಿಮುಖವಾಗಿದೆ. ಎತ್ತರವಾದ ಪ್ರವೇಶದ್ವಾರವನ್ನು ಹೊಂದಿದೆ. ಚತುರಸ್ರಾಕಾರದ ಗರ್ಭಗೃಹ, ಅಂತರಾಳ, ನವರಂಗ ಹಾಗೂ ಕಿರುಮುಖ ಮಂಟಪಗಳಿವೆ. ಮುಖಮಂಟಪದ ಪ್ರವೇಶದ ಎರಡೂ ಕಡೆಯಲ್ಲೂ ನಕ್ಷತ್ರಾಕಾರದ ಕಟ್ಟೆಯ ಮೇಲೆ ಸುಂದರವಾಗಿ ಅಲಂಕರಿಸಿರುವ ಗಜಗಳ ಶಿಲ್ಪಗಳಿವೆ. ನವರಂಗದಲ್ಲಿ ತಿರುಗಣೆಯಿಂದ ಮಾಡಿದ ನಾಲ್ಕು ಕಂಬಗಳಿವೆ, ನವರಂಗದ ಮಧ್ಯದ ಭುವನೇಶ್ವರಿಯು ವೃತ್ತಾಕಾರದ ಪದ್ಮಗಳ ಜೋಡಣೆಗಳಿಂದ ಕೂಡಿದ್ದು, ಮಧ್ಯದಲ್ಲಿ ಕಾಳಿಂಗಮರ್ದನದ ಕಿರುಮೂರ್ತಿಯಿದೆ. ಪೂರ್ವದಿಂದ ಮೂರನೆಯ ಭುವನೇಶ್ವರಿಯಲ್ಲಿ ನರ್ತನವನ್ನು ವೀಕ್ಷಿಸುತ್ತಿರುವ ದೇವಾಲಯದ ಸ್ಥಾಪಕ ಬೂಚಿರಾಜನ ಶಿಲ್ಪವಿದೆ. ಗರ್ಭಗುಡಿಯಲ್ಲಿ ಶಂಖು, ಚಕ್ರ, ಗದಾ, ಪದ್ಮಧಾರಿಯಾದ ಸುಮಾರು 6 ಅಡಿ ಎತ್ತರದ ಕೇಶವನ ಸುಂದರ ಶಿಲ್ಪವಿದೆ. ಕೇಶವನ ಎರಡೂ ಬದಿಗಳಲ್ಲಿ ಆತನ ಪತ್ನಿಯರ ಶಿಲ್ಪಗಳಿವೆ. ಅಂತರಾಳದ ಬಾಗಿಲುವಾಡದ ಬದಿಗಳಲ್ಲಿ ದ್ವಾರಪಾಲಕರ ಶಿಲ್ಪಗಳಿವೆ. ಹುಲ್ಲೇಕೇರೆಯ ಚನ್ನಕೇಶವ ದೇವಾಲಯದ ಒಳನೋಟ ಹಾಗೂ ಹೊರ ವಿನ್ಯಾಸವು ಅದ್ಭುತವಾಗಿದೆ. ಹಳೇಬೀಡು, ಸೋಮನಾಥಪುರದ ದೇವಾಲಯಗಳನ್ನು ನೆನಪಿಸುವ ಕಲಾತ್ಮಕತೆ ಎದ್ದು ಕಾಣುತ್ತದೆ. ದೇವಾಲಯವು ಪೂರ್ವ-ಪಶ್ಚಿಮವಾಗಿ 100 ಅಡಿ ಹಾಗೂ ಉತ್ತರ-ದಕ್ಷಿಣವಾಗಿ 63 ಅಡಿ ಅಂಗಳದಲ್ಲಿ ಅತ್ಯಂತ ಆಕರ್ಷಕವಾಗಿದ್ದು, ಮನಸೊರೆಗೊಳ್ಳುತ್ತದೆ. ದೇವಾಲಯದ ಹೊರಭಿತ್ತಿಯಲ್ಲಿ ದಕ್ಷಿಣದಿಂದ ಪ್ರದಕ್ಷಿಣಾಭಿಮುಖವಾಗಿ ವಿಷ್ಣುವಿನ ಚತುರ್ವಿಂಶತಿ ಮೂರ್ತಿಗಳಿವೆ.
ದೇವಾಲಯದ ಪ್ರಮುಖ ಆಕರ್ಷಣೆ ಮೂರು ಹಂತಗಳನ್ನು ಹೊಂದಿರುವ ಶಿಖರವಾಗಿರುತ್ತದೆ. ತಿವಿಕ್ರಮ, ಕಾಳಿಂಗಮರ್ಧನ, ಯೋಗಾನರಸಿಂಹ, ಗೋವರ್ಧನ ಗಿರಿಧಾರಿ ಹಾಗೂ ಸುಖನಾಸಿಯ ಮುಂಚಾಚಿನಲ್ಲಿರುವ ಸೂಕ್ಷ್ಮ
ಕೆತ್ತನೆಗಳಿಂದ ಕೂಡಿರುವ ಕೇಶವಶಿಲ್ಪವು ಸುಂದರವಾಗಿದೆ. ದೇವಾಲಯದ ಶಿಲಾ ಕಳಸವೂ ಅಂದವಾಗಿದ್ದು ದೇವಾಲಯಕ್ಕೆ ಮುಕುಟಮಣಿಯಂತಿದೆ. ದೇವಾಲಯದ ಸುತ್ತಲೂ ಬೇಲೂರು, ಸೋಮನಾಥಪುರದಲ್ಲಿರುವಂತೆ ಕೈಸಾಲೆ ಮಂಟಪವಿದೆ. ಹುಲ್ಲೇಕೆರೆಯ ಚನ್ನಕೇಶವ ದೇವಾಲಯವು ಜೀರ್ಣಾವಸ್ಥೆಯಲ್ಲಿತ್ತು. ಆದರೆ ಸ್ಥಳೀಯರ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ನೆರವಿನಿಂದ 1990ರಲ್ಲಿ ಶಾಸ್ತ್ರೋಕ್ತವಾಗಿ ಜೀರ್ಣೋದ್ದಾರವಾಯಿತು.
ಹೀಗೆ ಬನ್ನಿ. ಬೆಂಗಳೂರು-ಹಾಸನ ರಸ್ತೆಯಲ್ಲಿ ಚನ್ನರಾಯಪಟ್ಟನದ ನಂತರ 6 ಕಿ.ಮೀ.ದೂರದಲ್ಲಿ ಬರಗೂರು ಹ್ಯಾಂಡ್ ಪೋಸ್ಟ್ ಸೀಗುತ್ತದೆ, ಅಲ್ಲಿ ಬಲಕ್ಕೆ ತಿರುಗಿ ಸುಮಾರು 14 ಕಿ.ಮೀ. ದೂರದಲ್ಲಿ ಗಂಡಸಿ ಹ್ಯಾಂಡ್ ಪೋಸ್ಟ್‌ಗೆ ಬಂದು, ಹಾಸನ-ತಿಪಟೂರು ರಸ್ತೆಯ ಕಡೆ ತಿರುಗಿ ಮೇಲೆ ಉಲ್ಲೇಖೀಸಿರುವ ಚಿಂದೇನಹಳ್ಳಿ ಗೇಟ್‌ಗೆ ಬಂದು ಎಡಕ್ಕೆ ತಿರುಗಿ ಹುಲ್ಲೇಕರೆಯನ್ನು ಸೇರಬಹುದು.
ದೇವಸ್ಥಾನಕ್ಕೆ ಗಾಣ
ಬೂಚಿರಾಜನ ಬಗ್ಗೆ ಕಡೂರು ತಾಲ್ಲೂಕಿನ ಬ್ರಹ್ಮಸಮುದ್ರ, ಕೋರವಂಗಲ ಹಾಗೂ ಹುಲ್ಲೇಕೆರೆ ಶಾಸನಗಳಲ್ಲಿ ಮಾಹಿತಿ ದೊರೆಯುತ್ತದೆ. ಬೂಚಿರಾಜನ ಮೂರುಜನ ಸಹೋದರರು ಕೋರವಂಗಲ, ಬ್ರಹ್ಮಸಮುದ್ರ, ಮುಂತಾದ ಕಡೆ ದೇವಾಲಯವನ್ನು ನಿರ್ಮಿಸಿದ್ದಾರೆ. ಬೂಚಿರಾಜನು ದೇವಾಲಯ ನಿರ್ಮಿಸಿರುವುದಲ್ಲದೇ ಸ್ವಾಮಿಯ ಸೇವಾ ಕೈಂಕರ್ಯವು ನಿರಂತರವಾಗಿ ನಡೆಯುವಂತೆ ಹುಲ್ಲೇಕರೆಯ ಸಮೀಪವಿರುವ ಭೂಪ್ರದೇಶವನ್ನು ದತ್ತಿಯಾಗಿ ನೀಡಿರುವುದು ಹುಲ್ಲೇಕರೆಯ ಕೇಶವಾಲಯದ ಶಾಸನದಿಂದ ತಳಿಯುತ್ತದೆ. ಎತ್ತಿನ ಸಹಿತ ಹುಲೇಕೆರೆಯ ಚನ್ನಕೇಶವ ದೇವರ ನಂದಾ ದೀವಿಗೆಗೆ ಸುಂಕದ ಮಂಚಯ್ಯ ಹೆಗ್ಗಡೆ ಒಂದು ಗಾಣವನ್ನು ಹಾಗೂ ದೇವರ ತೋಟಕ್ಕಾಗಿ ಜಮೀನನ್ನು ಶ್ರೀಕರನ ಹೆಗ್ಗಡೆ ಸೋಮಯ್ಯನು ನೀಡಿ ಬೂಚಿರಾಜನ ಕೈಗೊಂಡ ಸತ್ಕಾರ್ಯಕ್ಕೆ ಕೈ ಜೋಡಿಸಿರುವ ಮಾಹಿತಿ ಇದೆ.
ಕೆಂಗೇರಿ ಚಕ್ರಪಾಣಿ