Advertisement

2 ತಿಂಗಳಿಂದ ನೀರು ಸರಬರಾಜಿಲ್ಲ!

05:26 PM Oct 31, 2019 | Naveen |

●ಎಚ್‌.ಬಿ. ಕಿರಣ್‌ ಕುಮಾರ್‌
ಹುಳಿಯಾರು: ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಫಲವಾಗಿ ಕಳೆದ 2 ತಿಂಗಳಿನಿಂದ ಪಟ್ಟಣದಲ್ಲಿ ನೀರು ಸರಬರಾಜಾಗದೆ ನಿವಾಸಿಗಳು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಹುಳಿಯಾರು ಪಟ್ಟಣಕ್ಕೆ ಕಳೆದ 12 ವರ್ಷದಿಂದ ಸಮೀಪದ ಬೋರನಕಣಿವೆ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತಿತ್ತು. ಸ್ವಂತ ಕೊಳವೆಬಾವಿ ಇಲ್ಲದ ನಿವಾಸಿಗಳು ಈ ನೀರು ನೆಚ್ಚಿ ಬದುಕು ಕಟ್ಟಿಕೊಂಡಿದ್ದರು. 15 ದಿನಕ್ಕೊಮ್ಮೆ ಜಲಾಶಯದ ನೀರು ಸರಬರಾಜು ಮಾಡಿದರೂ ಪಾತ್ರೆ, ಡ್ರಮ್‌ಗಳಲ್ಲಿ ನೀರು ಶೇಖರಿಸಿ ಕೊಳ್ಳುತ್ತಿದ್ದರು.

ಆದರೆ ಜಲಾಶಯದಿಂದ ನೀರು ಸರಬರಾಜು ಮಾಡುವ ಪೈಪ್‌ ಎಸ್‌ಎಲ್‌ ಆರ್‌ ಬಂಕ್‌ ಬಳಿ ಹೈವೇ ಕಾಮಗಾರಿ ಮಾಡುವಾಗ ಒಡೆದಿದೆ. ಪೈಪ್‌ ಒಡೆದು 2
ತಿಂಗಳಾದರೂ ದುರಸ್ತಿ ಮಾಡದೆ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರ ಹೊಣೆಗಾರರ ನ್ನಾಗಿಸಿರುವ ಪಟ್ಟಣ ಪಂಚಾಯಿತಿ ಕೈ ಕಟ್ಟಿ ಕುಳಿತಿದೆ.

ಗುತ್ತಿಗೆದಾರರ ಪ್ರಶ್ನಿಸಿದರೆ “ನಮ್ಮ ಗುತ್ತಿಗೆ ಅವಧಿ ಮುಗಿದಿದ್ದು, ಪಪಂ ದುರಸ್ತಿ ಮಾಡಿಸಬೇಕಿದೆ’ ಎಂದು ಹೇಳುತ್ತಾರೆ. ಹೀಗೆ ಗಂಡ- ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಇವರಿಬ್ಬರ ಜಗಳದಲ್ಲಿ ನಿವಾಸಿಗಳು 2 ತಿಂಗಳಿಂದ ನೀರಿಲ್ಲದೆ ಪರಿತಪಿಸುವಂತಾಗಿದೆ.

ಆಯುಧ ಪೂಜೆ ಹಬ್ಬಕ್ಕಾದರೂ ನೀರು ಬಿಡಿ ಎಂದು ನಿವಾಸಿಗಳು ಕೇಳಿದರೂ ಪಪಂ ನೀರು ಬಿಡಲಿಲ್ಲ. ದೀಪಾವಳಿಗೆ ನೀರು ಬಿಡಿ ಎಂದು ಗೋಗರೆದರೂ ಪಪಂ ಅಧಿಕಾರಿಗಳು ಕೇಳಿಸಿಕೊಳ್ಳಲಿಲ್ಲ. ಪರಿಣಾಮ ಬಿಂದಿಗೆಗೆ 2 ರೂ. ನಂತೆ ನೀರು ಕೊಂಡು ಜೀವನ ನಡೆಸುವ ಅನಿವಾರ್ಯ ಇಲ್ಲಿನ ನಿವಾಸಿಗಳಿಗೆ ಬಂದಿದೆ. ಮಹಿಳೆಯರಂತೂ ದಿನ ಬೆಳಗಾದರೆ ಕೈ ಪಂಪು, ಸಿಸ್ಟನ್‌ ಬಳಿ ಕ್ಯೂ ನಿಂತು ಜಗಳವಾಡಿ ನೀರು ಹಿಡಿಯುತ್ತಿದ್ದಾರೆ. ಪಟ್ಟಣ ಪಂಚಾಯಿತಿಯಿಂದ ನೀರಿನ ಕಂದಾಯವಾಗಿ ತಿಂಗಳಿಗೆ ಮನೆಯೊಂದಕ್ಕೆ 25 ರೂ. ಸಂಗ್ರಹ ಮಾಡುತ್ತಿದ್ದಾರೆ. ಆದರೆ ಸಮರ್ಪಕವಾಗಿ ನೀರು ಸರಬರಾಜು ಮಾಡಿದೇ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ.

Advertisement

ಟ್ಯಾಂಕರ್‌ ಮೂಲಕವೂ ನೀರು ಕೊಡುತಿಲ್ಲ. ಕುಡಿಯುವ ನೀರೂ ಕೊಡಲು ವಿಫಲವಾಗಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಪಟ್ಟಣ ಅಭಿವೃದ್ಧಿ ನಿರೀಕ್ಷಿಸಬಹುದೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಒಡೆದಿರುವ ಪೈಪ್‌ ದುರಸ್ತಿ ಮಾಡಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next