Advertisement

ಹುಲಿಕಲ್‌ ಘಾಟಿ ರಸ್ತೆ: ಹಲವೆಡೆ ಗುಡ್ಡ ಕುಸಿತ

01:56 PM Jul 03, 2019 | Vishnu Das |

ಕುಂದಾಪುರ: ಕರಾವಳಿ ಜಿಲ್ಲೆಗಳನ್ನು ಮಲೆನಾಡು ಶಿವಮೊಗ್ಗಕ್ಕೆ ಸಂಪರ್ಕಿಸುವ ಪ್ರಮುಖ ಕೊಂಡಿ ಯಾಗಿರುವ ಹುಲಿಕಲ್‌ (ಬಾಳೆಬರೆ) ಘಾಟಿ ಅಲ್ಪಸ್ವಲ್ಪ ಮಳೆಗೇ ಜರ್ಝರಿತ ವಾಗಿದೆ. ಹಲವೆಡೆ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು, ಭಯದೊಂದಿಗೆ ಸಂಚರಿಸುವಂತಾಗಿದೆ.

Advertisement

ಉಡುಪಿ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಘಾಟಿ ಇದಾಗಿದ್ದು, ಲೋಕೋಪಯೋಗಿ ಇಲಾಖೆಯು ಇದರ ಅಭಿವೃದ್ಧಿಗಾಗಿ 10 ವರ್ಷಗಳ ಅವಧಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ವಹಿಸಿಕೊಟ್ಟರೂ ಸರಿಯಾದ ನಿರ್ವಹಣೆಯಿಲ್ಲದೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ.

ಶಿವಮೊಗ್ಗ ಮಾತ್ರವಲ್ಲದೆ ಬಳ್ಳಾರಿ, ದಾವಣಗೆರೆ ಮತ್ತಿತರ ಜಿಲ್ಲೆಗಳಿಗೂ ಉಡುಪಿ, ಮಂಗಳೂರನ್ನು ಸಂಪರ್ಕಿ ಸುವ ಪ್ರಮುಖ ಘಾಟಿ ಇದು. 2 ಸಾವಿರಕ್ಕೂ ಹೆಚ್ಚು ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು, ಒಟ್ಟು 12 ಕಿ.ಮೀ. ವ್ಯಾಪ್ತಿಯ ಘಾಟಿಯ ಪೈಕಿ ಸುಮಾರು 6 ಕಿ.ಮೀ. ವರೆಗೆ ರಸ್ತೆಯ ಒಂದು ಬದಿಯಲ್ಲಿ ನೂರಾರು ಅಡಿ ಆಳದ ಪ್ರಪಾತವಿದೆ. ಹಲವು ಅಪಾಯಕಾರಿ ತಿರುವುಗಳಲ್ಲಿ ತಡೆಗೋಡೆ ಇಲ್ಲ. ಕೆಲವೆಡೆ ಇದ್ದ ತಡೆಗೋಡೆಗಳು ಈ ಹಿಂದೆ ವಾಹನ ಢಿಕ್ಕಿಯಾಗಿ ಮುರಿದು ಬಿದ್ದಿವೆ. ಕನಿಷ್ಠ ಅವುಗಳ ದುರಸ್ತಿ ಕಾರ್ಯವೂ ಆಗಿಲ್ಲ.

ಗುಡ್ಡ ಕುಸಿತ
ಕೆಲವು ಕಡೆಗಳಲ್ಲಿ ಗುಡ್ಡದ ಮಣ್ಣು ಕುಸಿದು, ಬಂಡೆ ಕಲ್ಲುಗಳು ಹೆದ್ದಾರಿಗೆ ಬಿದ್ದಿವೆ.ಇನ್ನೂ ಕೆಲವೆಡೆಗಳಲ್ಲಿ ಬಂಡೆ ಕಲ್ಲು ಸಹಿತ ಮಣ್ಣು ರಸ್ತೆಗೆ ಕುಸಿಯುವ ಅಪಾಯ ಇದೆ. ಅಪಾಯಕಾರಿ ಮರ ಗಳು ಕೂಡ ರಸ್ತೆಗೆ ಬೀಳುವ ಸಾಧ್ಯತೆ ಇದೆ. ಈ ಬಾರಿ ಇನ್ನೂ ಮಳೆಯ ನೈಜ ದರ್ಶನವಾಗಿಲ್ಲ. ಭಾರೀ ಮಳೆ ಬಂದರೆ ಘಾಟಿ ರಸ್ತೆಯ ಸ್ಥಿತಿ ಏನಾದೀತೋ ಎಂಬ ಭಯ ನಿತ್ಯ ಪ್ರಯಾಣಿಕರದ್ದು.

ಸರಿಯಾದ ಚರಂಡಿ ವ್ಯವಸ್ಥೆಯಿಲ್ಲ ದಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿ. ಗಿಡಗಂಟಿಗಳಿಂದಾಗಿ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನಗಳು ತೋರುತ್ತಿಲ್ಲ. ಅದರಲ್ಲೂ ಚಂಡಿಕಾಂಬಾ ದೇಗುಲದ ಸಮೀಪದ ತಿರುವು ಘನ ವಾಹನಗಳ ಸಂಚಾರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಇಲ್ಲಿ ತಡೆಗೋಡೆಯೂ ಇಲ್ಲ. ಚಾಲಕರು ಸ್ವಲ್ಪ ಯಾಮಾರಿದರೂ ನೂರಾರು ಅಡಿ ಆಳದ ಪ್ರಪಾತಕ್ಕೆ ಬೀಳುವುದು ಖಚಿತ.

Advertisement

ಕೂಡಲೇ ದುರಸ್ತಿ
ಹೊಸಂಗಡಿಯಿಂದ 5 ಕಿ.ಮೀ. ವರೆಗೆ ಲೋಕೋಪಯೋಗಿ ಇಲಾಖೆಯ ಕುಂದಾಪುರ ಉಪ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಮಳೆಗಾಲಕ್ಕೆ ಮುನ್ನ ಒಮ್ಮೆ ರಸ್ತೆ ಬದಿ ಗಿಡ, ಮರ ತೆರವು ಮಾಡಿದ್ದೇವೆ. ಈಗ ಕೆಲವು ಕಡೆಗಳಲ್ಲಿ ಗುಡ್ಡ ಕುಸಿತ, ಮಣ್ಣು ತೆರವು ಮಾಡುವ ಕುರಿತು ಅಲ್ಲಿಗೆ ಕೂಡಲೇ ಭೇಟಿ ನೀಡಿ, ಕ್ರಮ ಕೈಗೊಳ್ಳಲಾಗುವುದು. ತಡೆಗೋಡೆ ಅಳವಡಿಕೆ ಕುರಿತು ಪರಿಶೀಲಿಸಲಾಗುವುದು.
– ದುರ್ಗಾದಾಸ್‌, ಸಹಾಯಕ ಎಂಜಿನಿಯರ್‌ ಲೋಕೋಪಯೋಗಿ ಇಲಾಖೆ ಕುಂದಾಪುರ ಉಪ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next