ಹೊಸಪೇಟೆ(ವಿಜಯನಗರ): ಅಕಾಲಿಕ ಮರಣ ಹೊಂದಿದ ಕೊಟ್ಟೂರಿನ ಪತ್ರಕರ್ತ ಹುಲಿಗೇಶ್ ಕುಟುಂಬಕ್ಕೆ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಜಿಲ್ಲೆಯ ಆರು ತಾಲೂಕುಗಳ ಪತ್ರಕರ್ತರಿಂದ ಸಂಗ್ರಹವಾದ 75 ಸಾವಿರ ರೂಪಾಯಿಗಳನ್ನು; ಹುಲಿಗೇಶ್ ರ ಮೂವರು ಮಕ್ಕಳಿಗೆ ತಲಾ 25 ಸಾವಿರ ಕೊಟ್ಟೂರಿನ ವಿಕಾಸ ಬ್ಯಾಂಕ್ ನಲ್ಲಿ ಮುದ್ದತ್ತು ಠೇವಣಿ ಇರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಕಲ್ಯಾಣ ನಿಧಿಯಿಂದ 10 ಸಾವಿರ ರು. ಚೆಕ್ ಅನ್ನು ಹುಲಿಗೇಶ್ ರ ಪತ್ನಿ ಟಿ. ಶೃತಿ ಅವರಿಗೆ ವಿತರಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಪಿ. ಸತ್ಯನಾರಾಯಣ ಮಾತನಾಡಿ, ಹುಲಿಗೇಶ್ ಅವರ ಸಾವು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ. ಅಕಾಲಿಕ ಮರಣದಿಂದ ಇಡೀ ಕುಟುಂಬ ಸಂಕಷ್ಟದಲ್ಲಿದೆ. ಅವರಿಗೆ ವಿಜಯನಗರ ಜಿಲ್ಲೆಯ ಆರು ತಾಲೂಕಿನ ಪತ್ರಕರ್ತರು ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಹಣ ಮುದ್ದತ್ತು ಠೇವಣಿ ಇಡಲಾಗಿದೆ. ಮಕ್ಕಳ ಶಿಕ್ಷಣ ದೃಷ್ಟಿಯಿಂದ ಈ ಕಾರ್ಯ ಮಾಡಲಾಗಿದೆ. ಮುಂದೆ ಈ ಹಣ ತಲಾ ಮೂವರು ಮಕ್ಕಳಿಗೆ 50 ಸಾವಿರ ರು. ಆಗಲಿದೆ. ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಅವರ ಬಳಿ ಪತ್ರಕರ್ತರ ನಿಯೋಗ ತೆರಳಿ ಮನವಿ ಮಾಡಲಾಗಿದ್ದು, ಅವರು ಹುಲಿಗೇಶ್ ಅವರ ಪತ್ನಿಗೆ ಪಟ್ಟಣ ಪಂಚಾಯಿತಿಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಮೊರಾರ್ಜಿ ಶಾಲೆಯಲ್ಲಿ ಮುಂದೆ ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ಇದನ್ನೂ ಓದಿ : ಗೋವಾ ಸಿಎಂ ಜೊತೆ ಯಶ್ ದಂಪತಿ : ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ರಾಕಿ ಬಾಯ್ ?
ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಉಜ್ಜಯಿನಿ ರುದ್ರಪ್ಪ ಮಾತನಾಡಿ, ಹುಲಿಗೇಶ್ ಅವರು ಕ್ರಿಯಾಶೀಲ ಪತ್ರಕರ್ತರಾಗಿದ್ದರು. ಅವರ ಮಕ್ಕಳ ಭವಿಷ್ಯಕ್ಕಾಗಿ ಸಂಘ ಬೆನ್ನೆಲುವಾಗಿ ನಿಲ್ಲಲಿದೆ ಎಂದರು.
ಸಂಘದ ಜಿಲ್ಲಾ ಖಜಾಂಚಿ ಅನಂತ ಜೋಶಿ, ಜಿಲ್ಲಾ ಉಪಾಧ್ಯಕ್ಷ ರಾಮಪ್ರಸಾದ ಗಾಂಧಿ, ಹರಪನಹಳ್ಳಿ ತಾಲೂಕಾಧ್ಯಕ್ಷ ತಳವಾರ ಚಂದ್ರಪ್ಪ,ಪತ್ರಕರ್ತರಾದ ಕೆ. ಲಕ್ಷ್ಮಣ, ಕೃಷ್ಣ ಎನ್. ಲಮಾಣಿ, ದೇವರಮನಿ ಸುರೇಶ್, ಮಾಧವರಾವ್, ಕೊರಚರ ಕೊಟ್ರೇಶ್, ರವಿಕುಮಾರ, ಪ್ರಕಾಶ, ಮಂಜುನಾಥ, ಕೊಟ್ರೇಶ್ ಮತ್ತಿತರರಿದ್ದರು.