ಕೊಪ್ಪಳ: ನಾಡಿನ ಪ್ರಸಿದ್ಧ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮತ್ತೆ ದೇವರ ಹೆಸರಲ್ಲಿ ಕುರಿ, ಟಗರುಗಳ ಬಲಿ ಸದ್ದು ಮಾಡುತ್ತಿದೆ. ದೇವರ ಹೆಸರಲ್ಲಿ ಪ್ರಾಣಿ ಹತ್ಯೆ ಮಾಡುವುದನ್ನ ಸರ್ಕಾರ ನಿಷೇಧ ಹೇರಿ ಕಾನೂನನ್ನು ಜಾರಿ ಮಾಡಿದ್ದರೂ ಇದ್ಯಾವುದು ಲೆಕ್ಕವೇ ಇಲ್ಲ ಎಂಬಂತಾಗಿದೆ.
ದೇವಸ್ಥಾನದ ಆವರಣದಲ್ಲಿ ಮೈಕ್‌ಗಳಲ್ಲಿ ಮಾತ್ರ ಜಾಗೃತಿ ಸೀಮಿತವಾಗಿದೆ. ಹೌದು. ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿಒಂದಾದ ಹುಲಿಗೆಮ್ಮ ದೇವಿ ದೇವಸ್ಥಾನವು ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಮೊದಲೆಲ್ಲ ಇಲ್ಲಿ ಏತೇತ್ಛವಾಗಿ ಪ್ರಾಣಿ ಬಲಿ ನಡೆಯುತ್ತಿದ್ದವು. ಕಾನೂನಿನ ಕ್ರಮ ಹೆಚ್ಚಾಗುತ್ತಿದ್ದಂತೆ ಪ್ರಾಣಿ ಬಲಿ ನಿಯಂತ್ರಣಕ್ಕೆ ಬಂದಿತ್ತು. ಪ್ರಸ್ತುತ ದೇವಿಯ ವಾರದಂದು ಪ್ರಾಣಿ ಬಲಿ ಮತ್ತೆ ಸದ್ದು ಮಾಡುತ್ತಿವೆ.
ಪ್ರಸಕ್ತ ವರ್ಷ ಬಿಜೆಪಿ ಸರ್ಕಾರವೇ ಪ್ರಾಣಿ ಹತ್ಯೆಗೆ ವಿಶೇಷ ಕಾಯ್ದೆ ರೂಪಿಸಿ ಜಾರಿ ಮಾಡಿದೆ.ಪ್ರಾಣಿಹಿಂಸೆ ಮಾಡುವಂತಿಲ್ಲ ಎನ್ನುವುದು ಎಲ್ಲರಿಗೊತ್ತಿದ್ದರೂ ದೇವಸ್ಥಾನಗಳಲ್ಲಿ ಮಾತ್ರ ಪ್ರಾಣಿಬಲಿ ನಿಂತಂತೆ ಕಾಣುತ್ತಿಲ್ಲ. ಅದರಲ್ಲೂ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮೊದಲು ಅಧಿಕಾರಿಯಾಗಿದ್ದ ಸಿ.ಎಸ್.ಚಂದ್ರಮೌಳಿ ಅವರು ಪ್ರಾಣಿ ಬಲಿಗೆ ಬಹುಪಾಲು ನಿಯಂತ್ರಣಕ್ಕೆ ತಂದಿದ್ದರು. ಅವರು ನಿವೃತ್ತಿಯಾದ ಬಳಿಕ ದೇವಸ್ಥಾನವು ಪ್ರಸ್ತುತ ಜಿಲ್ಲಾಡಳಿತದ ನಿಯಂತ್ರಣದಲ್ಲಿದೆ. ಹಾಗಾಗಿ ಪ್ರಾಣಿ ಬಲಿಗೆ ನಿಯಂತ್ರಣವೇ ಇಲ್ಲವೆಂಬಂತ ಮಾತುಗಳು ಕೇಳಿ ಬಂದಿವೆ.
ಕೋವಿಡ್ ಹಿನ್ನೆಲೆಯಲ್ಲಿ ಏಳೆಂಟು ತಿಂಗಳ ಕಾಲ ದೇವರ ದರ್ಶನವನ್ನೇ ಪಡೆಯದ ಭಕ್ತರು ನಾಡಿನಮೂಲೆ ಮೂಲೆಗಳಿಂದಲೂ ಇಲ್ಲಿನ ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ನಾಲ್ಕಾರು ದಿನಗಳ ಕಾಲ ವಾಸ್ತವ್ಯ ಮಾಡುತ್ತಿದ್ದಾರೆ. ಟಂಟಂ, ಲಾರಿ, ಆಟೋ, ಟ್ರಾÂಕ್ಟರ್ ಗಳಲ್ಲಿ ಆಗಮಿಸುವ ಜನರೆಲ್ಲ ತಮ್ಮೊಡನೆ ಒಂದು ಕುರಿ, ಟಗರು ಕರೆ ತಂದಿರುತ್ತಾರೆ. ದೇವಸ್ಥಾನದಸಮೀಪದಲ್ಲಿ ಕುರಿ, ಟಗರಿಗೆ ಹೂವಿನ ಹಾರ ಹಾಕಿ ಪೂಜೆ ಮಾಡಿಕೊಳ್ಳುತ್ತಿರುವ ಜನರು ದೇವಸ್ಥಾನದ ಹೊರ ಭಾಗದಲ್ಲಿ ಬಲಿಕೊಟ್ಟು ಅಲ್ಲಿಯೇ ಊಟ ಮಾಡಿ ತೆರಳುತ್ತಿರುವುದು ಸದ್ದಿಲ್ಲದೇ ನಡೆದಿದೆ.
ಅದರಲ್ಲೂ ಶುಕ್ರವಾರ, ಮಂಗಳವಾರ, ಅಮವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ಪ್ರಾಣಿ ಬಲಿಯು ಜೋರಾಗಿ ನಡೆದಿವೆ. ಶುಕ್ರವಾರ ನದಿಯ ತಟದಲ್ಲಿ ಕುರಿ, ಟಗರುಗಳಿಗೆ ಪೂಜೆ ಮಾಡಿ ಬಲಿ ಕೊಟ್ಟು ಕದ್ದು ಮುಚ್ಚಿ ಟೆಂಟ್‌ಗಳತ್ತ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು. ಇನ್ನು ಕೆಲವರು ಟಗರುಗಳಿಗೆ ಪೂಜೆ ಮಾಡಿ ಮನೆಗಳಿಗೆ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು. ನದಿ ಬಳಿ ಪೊಲೀಸರು ಇದ್ದರೂ ಪ್ರಾಣಿ ಬಲಿ ಮಾತ್ರ ನಿಂತಿರಲಿಲ್ಲ.
ಜಾಗೃತಿ ಮೈಕ್‌ಗಳಿಗೆ ಮಾತ್ರ ಸೀಮಿತ: ದೇವಸ್ಥಾನಗಳ ಬಳಿ ದೇವರ ಹೆಸರಲ್ಲಿ ಪ್ರಾಣಿ ಬಲಿ ಮಾಡುವಂತಿಲ್ಲ ಎಂಬ ಮಾತುಗಳು ದೇವಸ್ಥಾನದ ಆಡಳಿತ ಮಂಡಳಿಮೈಕ್‌ಗಳ ಮೂಲಕ ಜಾಗೃತಿ ಮಾತು ಕೇಳಿ ಬಂದರೂ ಸಹಿತ ಪ್ರಾಣಿ ಬಲಿಯನ್ನು ಯಾರೂ ತಪ್ಪಿಸುತ್ತಿಲ್ಲ.ಇದು ಕೇವಲ ಮೈಕ್‌ಗಳಿಗೆ ಮಾತ್ರ ಸೀಮಿತವಾಗಿದೆ ಎನ್ನುವ ಮಾತುಗಳು ಕೇಳಿ ಬಂದವು.
ಹುಲಿಗೆಮ್ಮ ದೇವಸ್ಥಾನದಲ್ಲಿ ದೇವರಹೆಸರಲ್ಲಿ ಪ್ರಾಣಿ ಬಲಿ ನಡೆದರೆ ಅಂತವರ ವಿರುದ್ಧ ನಿರ್ಧಾಕ್ಷ Âಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಪ್ರಾಣಿ ಬಲಿ
ಕೊಟ್ಟವರ ಮೇಲೆ ಮುಲಾಜಿಲ್ಲದೆ ಕೇಸ್ ದಾಖಲಿಸಲಾಗುವುದು. ಜಿಲ್ಲಾಡಳಿತ ಈಬಗ್ಗೆ ನಿಗಾ ವಹಿಸಲಿದೆ. ಜೊತೆಗೆ ಹುಲಿಗೆಮ್ಮ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡಲಾಗುವುದು.
-ಎಂ.ಪಿ.ಮಾರುತಿ, ಎಡಿಸಿ, ಕೊಪ್ಪಳ
– ದತ್ತು ಕಮ್ಮಾರ