ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮ ಪಂಚಾಯತಿ ಪರಿಶಿಷ್ಟ ಜಾತಿ ಮೀಸಲು ಅಧ್ಯಕ್ಷ ಸ್ಥಾನಕ್ಕೆ ಕವಿತಾ ಚೌವ್ಹಾಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಶಾಂತಮ್ಮ ಶಂಕರಗೌಡ ಕುಂಟಗೌಡ್ರು ಅವರು ಕೇವಲ1 ಮತಗಳ ಅಂತರದ ಜಯ ಗಳಿಸಿದ್ದಾರೆ.
ಹೂಲಗೇರಾ ಗ್ರಾ.ಪಂ. ಮೀಸಲಾತಿ ಪ್ರಶ್ನಿಸಿ ಬದಲಾವಣೆಗೆ ಸದಸ್ಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷ ರ ಆಯ್ಕೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ನಂತರ ನಡೆದ ವಿಚಾರಣೆಯಲ್ಲಿ ಚುನಾವಣೆ ಆಯೋಗ ಪ್ರಕಟಿಸಿದ ಮೀಸಲಾತಿಯನ್ನು ನ್ಯಾಯಾಲಯ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ತಡೆಯಾಜ್ಞೆ ತೆರವುಗೊಂಡಿತು.
ಗ್ರಾ.ಪಂ. 15 ಸದಸ್ಯ ಬಲ ಹೊಂದಿರುವ ಎಲ್ಲಾ ಸದಸ್ಯರು ಹಾಜರಿದ್ದರು. ಈ ಹಿನ್ನೆಲೆಯಲ್ಲಿ ನಿಗದಿತ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾವ್ಯಾ ಚೌವ್ಹಾಣ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮಹಿಬೂಬು ಉಂಡಿ ಹಾಗೂ ಶಾಂತಮ್ಮ ಕುಂಟಗೌಡ್ರು ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕಾವ್ಯ ಚೌವ್ಹಾಣ ಹೊರತು ಪಡಿಸಿದರೆ ಮತ್ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧ ಆಯ್ಕೆ ಸುಗಮವಾಗಿ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಂತಮ್ಮ ಕುಂಟಗೌಡ್ರು ಅವರಿಗೆ 8 ಮತಗಳು ಇವರ ಪ್ರತಿಸ್ಪರ್ಧಿ ಮಹಿಬೂಬು ಉಂಡಿ ಅವರಿಗೆ 7 ಮತಗಳು ಬಂದಿದ್ದರಿಂದ ಶಾಂತಮ್ಮ ಕುಂಟಗೌಡ್ರು ಅವರನ್ನು ನೂತನ ಉಪಾಧ್ಯಕ್ಷರೆಂದು ಘೋಷಿಸಲಾಯಿತು.
ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ನಿರ್ವಹಿಸಿದರು. ಪಿಡಿಓ ಆನಂದ ಎಲಿಗಾರ ಮತ್ತೀತರಿದ್ದರು.