ಬೆಳಗಾವಿ: ಸಂಕಷ್ಟದ ಕಾಲದಲ್ಲಿ ಸದಾ ಸೇವೆಗೆ ನಿಲ್ಲುವ ಮಠ ಮಾನ್ಯಗಳು ಕೊರೊನಾ ತುರ್ತು ಸ್ಥಿತಿಯಲ್ಲೂ ಕೈ ಜೋಡಿಸಿವೆ. ಜಿಲ್ಲೆಯ ಪ್ರಮುಖ ಮಠಗಳಾದ ನಾಗನೂರು ರುದ್ರಾಕ್ಷಿಮಠ, ಹುಕ್ಕೇರಿ ಹಿರೇಮಠ ಕೋವಿಡ್ ನಿರ್ವಹಣೆಗೆ ತಮ್ಮದೇ ಅದ ಯೋಜನೆಗಳನ್ನು ರೂಪಿಸಿದ್ದು, ಕೋವಿಡ್ ಆರೈಕೆ ಕೇಂದ್ರಕ್ಕಿಂತ ಅನ್ನದಾನ ಮಾಡುವುದರಲ್ಲಿ ತೊಡಗಿಸಿಕೊಂಡಿವೆ.
ಕೋವಿಡ್ ನಿರ್ವಹಣೆ ಎನ್ನುವದಕ್ಕಿಂತ ಜನರಲ್ಲಿನ ಭಯವನ್ನು ಮೊದಲು ಹೋಗಲಾಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಹುಕ್ಕೇರಿ ಹಿರೇಮಠ ಸೇರಿದಂತೆ ವಿವಿಧ ಮಠಗಳಲ್ಲಿ ಅಗ್ನಿಹೋತ್ರ ಹಮ್ಮಿಕೊಳ್ಳಲಾಗಿದೆ. ಹುಕ್ಕೇರಿಯಲ್ಲಿ ಮೇ 14ರಂದು ನಡೆಯಬೇಕಿದ್ದ ಜಾತ್ರೆ ರದ್ದು ಮಾಡಿ ಅದರ ಬದಲು ಅನ್ನದಾನ ಆಯೋಜಿಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಹುಕ್ಕೇರಿಯಲ್ಲಿ ಮಠದ ಶಾಲೆಯಿದೆ. ಅಗತ್ಯಬಿದ್ದರೆ ಈ ಶಾಲೆಯನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಿಕೊಳ್ಳಬೇಕು ಎಂದು ಈಗಾಗಲೇ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿದೆ. ಇದೆಲ್ಲದರ ಜತೆಗೆ ಮಠದಿಂದ ಅನ್ನದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋವಿಡ್ ನಿರ್ವಹಣೆ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿರುವ ಗೋಕಾಕ ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠ ಅಲೆಮಾರಿ ಮತ್ತು ಬಡ ಕಾರ್ಮಿಕರ ಕುಟುಂಬಗಳ ನೆರವಿಗೆ ಧಾವಿಸಿದೆ. ತಮ್ಮ ಮಠದ ಆವರಣದಲ್ಲಿ ನಾಲ್ಕು ಕೊಠಡಿಗಳನ್ನು ಅಲೆಮಾರಿಗಳಿಗಾಗಿ ಸಜ್ಜುಗೊಳಿಸಿರುವ ಮಠದ ಅಮರಸಿದ್ದೇಶ್ವರ ಸ್ವಾಮಿಗಳು, ಮಠದಲ್ಲಿ ವಸತಿ ಜತೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಇದಲ್ಲದೆ ಆರೋಗ್ಯ ಇಲಾಖೆ ಸಹಮತಿ ನೀಡಿದರೆ ಕೋವಿಡ್ ಅರೈಕೆ ಕೇಂದ್ರ ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ವರದಿ : ಕೇಶವ ಆದಿ