Advertisement
ಮುಖ್ಯಮಂತ್ರಿಗಳಿಗೆ ಹರಿದು ಬಂತು ಮನವಿಗಳ ಮಹಾಪೂರಆಲಮಟ್ಟಿ: ಕೃಷ್ಣೆ ಜಲನಿಧಿ ಗೆ ಬಾಗಿನ ಅರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಮನವಿ ಸಲ್ಲಿಸಿ ಜಿಲ್ಲೆ ಸತತ ಮೂರು ವರ್ಷದಿಂದ ಬರಗಾಲಕ್ಕೆ ತುತ್ತಾಗಿದೆ. ಈ ವರ್ಷ ಕೂಡ ಜಿಲ್ಲೆಗೆ ಬರಗಾಲ ಘೋಷಣೆ ಮಾಡಬೇಕು. ಕೂಡಗಿ ಎನ್ ಟಿಪಿಸಿ ಸ್ಥಾವರದ ಕೇವಲ 10 ಕಿಮೀ ಸುತ್ತಲಿನ ಗ್ರಾಮ ಅಭಿವೃದ್ಧುಯಾಗುತ್ತಿದ್ದು ಇದನ್ನು 25 ಕಿಮೀವರೆಗೆ ವಿಸ್ತರಿಸಬೇಕು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ
ಸರ್ವಸ್ವ ಕಳೆದುಕೊಂಡಿರುವ ಅವಳಿ ಜಿಲ್ಲೆಯ ರೈತರ ಹಿತ ಕಾಪಾಡಲು ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಗೆ ದಿನದ 24 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮೀಸಲಾತಿ ಒದಗಿಸಿ: ಗ್ರಾಪಂ ಸದಸ್ಯ ಕಲ್ಲಪ್ಪ ಕುಂಬಾರ ಸಲ್ಲಿಸಿದ ಮನವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಹಂತ-1 ಹಾಗೂ 2ರಲ್ಲಿ ಸುಮಾರು 176 ಗ್ರಾಮಗಳು ಬಾಧಿ ತಗೊಂಡು 136 ಗ್ರಾಮಗಳು ಪುನರ್ವಸತಿ ಕೇಂದ್ರಗಳಾಗಿ ಯೋಜನೆಯಿಂದ ಬಾಧಿತಗೊಂಡು ಸಂತ್ರಸ್ತರು ವಾಸವಾಗಿದ್ದಾರೆ. ಅವರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಯೋಜನಾ ನಿರಾಶ್ರಿತರ ಮೀಸಲಾತಿ ಮುಂದುವರಿಸಬೇಕು ಮತ್ತು ಯೋಜನೆ ಇನ್ನೂ ಮುಂದುವರಿದಿದ್ದು ಮೂರನೇ ಹಂತದ ಸಂತ್ರಸ್ತರಿಗೆ ನೀಡುವ ಸೌಲಭ್ಯಗಳನ್ನು ಈ ಹಿಂದೆ ಭೂಮಿ ಕಳೆದುಕೊಂಡವರಿಗೆ ಒದಗಿಸಬೇಕು ಎಂದು ವಿನಂತಿಸಿದ್ದಾರೆ. ಸಂಯುಕ್ತ ತಾಲೂಕು ರಚಿಸಿ: ತಾಪಂ ಸದಸ್ಯ ಮಲ್ಲು ರಾಠೊಡ ಮನವಿ ಸಲ್ಲಿಸಿ, ಆಲಮಟ್ಟಿ ದೇಶದ ಬೃಹತ್ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಬೃಹತ್ ಜಲಾಶಯ, ವಿವಿಧ ಉದ್ಯಾನ, ಸಂಗೀತ ನೃತ್ಯ ಕಾರಂಜಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳವಾದ್ದರಿಂದ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದಾಗಿ ಅರಳದಿನ್ನಿ, ಚಿಮ್ಮಲಗಿ, ಮರಿಮಟ್ಟಿ, ದೇವಲಾಪುರಗಳನ್ನು ಒಡಲಲ್ಲಿರಿಸಿಕೊಂಡು ಸುಮಾರು 27 ಸಾವಿರ ಜನಸಂಖ್ಯೆ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಆಲಮಟ್ಟಿ-ನಿಡಗುಂದಿ ಗ್ರಾಮಗಳು ಈಗಾಗಲೇ ಒಂದಕ್ಕೊಂದು ಕೂಡಿಕೊಂಡಿವೆ. ಆಲಮಟ್ಟಿಯನ್ನು ನಿಡಗುಂದಿಯೊಂದಿಗೆ ಸಂಯೋಜಿಸಿ ಆಲಮಟ್ಟಿ-ನಿಡಗುಂದಿ ತಾಲೂಕಾಗಿ ರಚಿಸಬೇಕು. ಸಂತ್ರಸ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಆಲಮಟ್ಟಿಯಲ್ಲಿ ಡಿಗ್ರಿ ಕಾಲೇಜು, ಕೆಬಿಜೆಎನ್‌ಎಲ್ ಆಸ್ಪತ್ರೆ ಸಾರ್ವತ್ರೀಕರಣ ಮಾಡಬೇಕು. ಪಶು ಆಸ್ಪತ್ರೆ ಆರಂಭಿಸಬೇಕು. ವಿಜ್ಞಾನ ಮಹಾವಿದ್ಯಾಲಯ
ಹಾಗೂ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು. ರೈಲ್ವೆ ಕೆಳಸೇತುವೆ ನಿರ್ಮಿಸಬೇಕು. ರಾಷ್ಟ್ರೀಯ ಹೆದ್ದಾರಿ ಯಲಗೂರ ಕ್ರಾಸ್‌ನಿಂದ ಲಾಲ್ ಬಹಾದ್ದೂರ್ ಶಾಸ್ತ್ರೀ ಮಹಾದ್ವಾರದವರೆಗೆ ದ್ವಿಪಥ ನಿರ್ಮಿಸಿ ಮದ್ಯದಲ್ಲಿ ವಿದ್ಯುದ್ದೀಪ ಅಳವಡಿಸಬೇಕು. ಜಲಾಶಯ ಹಾಗೂ ಈ ಭಾಗದ ಜನತೆ ಹಿತಕ್ಕಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಬೇಕು. ಗ್ರಾಪಂನ್ನು ಪಪಂ ಆಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.