ನವದೆಹಲಿ: ಆಫ್ರಿಕಾ ಖಂಡದ ಡಿಜಿಬೌಟಿಯಲ್ಲಿ ಚೀನ ವತಿಯಿಂದ ಸೇನಾ ನೆಲೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅದರ ನಿರ್ಮಾಣ ಗುರಿ ಭಾರತವೇ ಗುರಿ ಆಗಿದೆ ಎಂದು ಅಮೆರಿಕದ ಸಂಸತ್ಗೆ ರಕ್ಷಣಾ ಸಚಿವಾಲಯ ಪೆಂಟಗನ್ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸೇನಾ ನೆಲೆಗೆ ಶೀಘ್ರ ಯುದ್ಧ ವಿಮಾನಗಳು, ದೊಡ್ಡ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಚೀನ ಸರ್ಕಾರ ನಿಯೋಜಿಸಲಿದೆ. ಹಿಂದೂ ಮಹಾ ಸಾಗರದಲ್ಲೇ ಈ ನೆಲೆ ಇರುವುದರಿಂದ ಇದು ಭಾರತೀಯ ನೌಕಾ ಪಡೆಗೆ ಪ್ರಮುಖ ಭದ್ರತಾ ಸವಾಲಾಗಲಿದೆ.
ಡಿಜಿಬೌಟಿ ಸೇನಾ ನೆಲೆಯಲ್ಲಿ ಚೀನ ನೌಕಾ ಸೇನೆಗೆ ಸೇರಿದ ದೊಡ್ಡ ಸರಬರಾಜು ಹಡಗು ನಿಯೋಜನೆಗೊಂಡಿರುವುದನ್ನು ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಉಪಗ್ರಹ ಚಿತ್ರ ದೃಢಪಡಿಸಿತ್ತು.
“2022ರ ಮಾರ್ಚ್ನಲ್ಲಿ ಡಿಜಿಬೌಟಿಯಲ್ಲಿ ಚೀನ ನೌಕಾ ಸೇನೆಯ ಸರಬರಾಜು ಹಡಗು “ಪ್ಯೂಚಿ’ ನಿಯೋಜಿಸಲಾಗಿತ್ತು. ಪ್ರಸ್ತುತ ನೌಕಾ ನೆಲೆಯು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧಗೊಂಡಿದೆ,’ ಎಂದು ಪೆಂಟಗನ್ ತಿಳಿಸಿದೆ.
Related Articles
ಪ್ರಸ್ತುತ ಚೀನ ಬಳಿ ಮೂರು ಯುದ್ಧ ವಿಮಾನ ವಾಹಕ ನೌಕೆಗಳಿದ್ದರೆ, ಭಾರತದ ಬಳಿ ಎರಡು ಯುದ್ಧ ವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಇದೆ.
ಚೀನ ಧಮಕಿ:
ಭಾರತದ ಜತೆಗಿನ ಸಂಬಂಧದ ವಿಚಾರವಾಗಿ ಮೂಗು ತೂರಿಸದಿರಿ ಎಂದು ಅಮೆರಿಕಕ್ಕೆ ಚೀನ ಎಚ್ಚರಿಕೆ ನೀಡಿದೆ.
ಅಮೆರಿಕ ಜತೆ ಭಾರತ ಹೆಚ್ಚು ಆಪ್ತವಾಗುವುದನ್ನು ತಪ್ಪಿಸಲು ಗಡಿ ಸಮಸ್ಯೆ ಉದ್ಭವ ಆಗದಂತೆ ಚೀನ ಗಮನ ಹರಿಸುತ್ತಿದೆ ಎಂದು ಪೆಂಟಗನ್ ಹೇಳಿದೆ.
2020 ಮೇ ನಂತರ ಪೂರ್ವ ಲಡಾಖ್ನ ಎಲ್ಎಸಿ ಉದ್ದಕ್ಕೂ ಅನೇಕ ಸ್ಥಳಗಳಲ್ಲಿ ಚೀನ ಮತ್ತು ಭಾರತೀಯ ಪಡೆಗಳು ಘರ್ಷಣೆಯಲ್ಲಿ ತೊಡಗಿದ್ದವು. ಈ ಹಿನ್ನೆಲೆಯಲ್ಲಿ ಗಡಿಯ ಎರಡೂ ಬದಿಗಳಲ್ಲಿ ಸೇನೆಯನ್ನು ನಿಯೋಜಿಸಲಾಯಿತು. ನಂತರ ಸಂಘರ್ಷದ ಗಂಭೀರತೆಯನ್ನು ತಗ್ಗಿಸಲು ಚೀನ ಸರ್ಕಾರ ಪ್ರಯತ್ನಿಸಿತು ಎಂದೂ ಪೆಂಟಗನ್ ಹೇಳಿದೆ.