Advertisement

ಕೃಷಿ ಕಾರ್ಯಕ್ಕೆ ಭಾರೀ ಹಿನ್ನಡೆ: ಶೇ. 11ರಷ್ಟು ಮಾತ್ರ ಸಾಧನೆ

02:25 AM Aug 05, 2019 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದ್ದು, ಜುಲೈ ಅಂತ್ಯದವರೆಗೆ ಕೇವಲ ಶೇ.11ರಷ್ಟು ಮಾತ್ರ ಸಾಧನೆಯಾಗಿದೆ.

Advertisement

ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮುಂಗಾರು ಮಳೆಯಲ್ಲಿ ಕೂಡ ಶೇ.45.7 ರಷ್ಟು ಹಿನ್ನಡೆ ಕಂಡುಬಂದಿದೆ. ಜಿಲ್ಲೆಯಲ್ಲಿ 30500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಗೂ 4ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆಯಾದರೂ, ಇದುವರೆಗೆ ಕೇವಲ 822 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಕೃಷಿ ಮುಗಿದಿದ್ದು, 2830 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿದೆ. ಈ ಬಾರಿ ಕೇವಲ ಭತ್ತದ ಕೃಷಿಯಲ್ಲಿ ಕೇವಲ ಶೇ.2.70 ಹಾಗೂ ಜೋಳದ ಕೃಷಿಯಲ್ಲಿ ಶೇ.70.75ರಷ್ಟು ಸಾಧನೆ ಮಾಡಿದಂತಾಗಿದ್ದು, ಮಳೆಯ ಕೊರತೆಯಿಂದಾಗಿ ಈ ಬಾರಿ ಕೃಷಿ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಮಡಿಕೇರಿ ತಾಲೂಕು: ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆಯಾದರೂ, ಈ ಬಾರಿ ಶೇ.20 ಪ್ರದೇಶದಲ್ಲಿ ಸಸಿ ಮಡಿಯೊಂದಿಗೆ 1300ಹೆಕ್ಟೇರ್‌ನಲ್ಲಿ ಮಾತ್ರ ಕೃಷಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ತಾಲೂಕು ವೀರಾಜಪೇಟೆ. ಒಂದು ರೀತಿಯಲ್ಲಿ ಕೊಡಗಿನ ಭತ್ತದ ಕಣಜ ಎಂದೇ ಕರೆಯಲಾಗುವ ಈ ತಾಲೂಕಿನಲ್ಲಿ ಪ್ರಸಕ್ತ ವರ್ಷ ಕೆಲವೆಡೆ ಆಶಾದಾಯಕ ಮಳೆಯಾದರೂ, ಬಳಿಕ ವ್ಯತ್ಯಾಸ ಉಂಟಾಗಿದೆ.

ಪರಿಣಾಮವಾಗಿ ಇದುವರೆಗೆ ಕೇವಲ 142 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ನಡೆದಿದ್ದು, 590 ಹೆಕ್ಟೇರ್‌ನಲ್ಲಿ ಸಸಿ ಮಡಿ ಸಿದ್ಧವಾಗಿದೆ.

Advertisement

ಸೋಮವಾರಪೇಟೆ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್‌ ಭತ್ತದ ಕೃಷಿಯೊಂದಿಗೆ, 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಆದರೆ ಈ ತಾಲೂಕಿನಲ್ಲಿ 6690 ಹೆಕ್ಟೇರ್‌ಗೆ ಆಗುವಷ್ಟು ಮಾತ್ರ ಸಸಿಮಡಿ ಸಿದ್ಧವಾಗಿದ್ದು ಇದುವರೆಗೆ 480 ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ಕಾರ್ಯ ಮುಗಿದಿದೆ.

ಮಳೆಯೇ ಇಲ್ಲ :
ಜಿಲ್ಲೆಯಲ್ಲಿ ಈ ವೇಳೆಗೆ ಸರಾಸರಿ 70 ಇಂಚು ಮಳೆಯಾಗಬೇಕಿತ್ತು. ಆದರೆ ಈ ಬಾರಿ ಜುಲೈ ಅಂತ್ಯದವರೆಗೆ ಕೇವಲ 37.48 ಇಂಚು ಸರಾಸರಿ ಮಳೆಯಾಗಿದ್ದುಮ ಶೇ. 45.7 ರಷ್ಟು ಮಳೆ ಕೊರತೆ ಕಂಡು ಬಂದಿದೆ. 2017ರಲ್ಲಿ ಈ ಅವಧಿಗೆ 48.84 ಇಂಚು ಮಳೆಯಾದರೆ ಕಳೆದ ವರ್ಷ 94.18 ಇಂಚು ದಾಖಲಾಗಿತ್ತು.ಮಡಿಕೇರಿ ತಾಲೂಕಿನಲ್ಲಿ ವಾಡಿಕೆಯಂತೆ ಈ ಅವಧಿಗೆ 99.74 ಇಂಚು ಸರಾಸರಿ ಮಳೆಯಾಗಬೇಕಿದ್ದು, ಪ್ರಸಕ್ತ 49.06 ಇಂಚು ಮಾತ್ರ ದಾಖಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 49.16 ಇಂಚು ಮಳೆಯಾಗಬೇಕಿದ್ದು, ಪ್ರಸಕ್ತ ಕೇವಲ 23.72 ಇಂಚು ದಾಖಲಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ವಾಡಿಕೆಯಂತೆ 58.68 ಇಂಚು ಮಳೆಯಾಗಬೇಕಿದ್ದು, ಪ್ರಸಕ್ತ ವರ್ಷದಲ್ಲಿ 38.66 ಇಂಚು ದಾಖಲಾಗಿದೆ.

ನಾಟಿ ಸಾಧ್ಯತೆ ಕಡಿಮೆ
ಜಿಲ್ಲೆಯಲ್ಲಿ ಇದುವರೆಗೆ ಶೇ. 10.59 ಮಾತ್ರ ಒಟ್ಟಾರೆ ಕೃಷಿಯಲ್ಲಿ ಸಾಧನೆ ಗೋಚರಿಸಿದೆ. ನದಿಗಳು ಉಕ್ಕಿ ಹರಿಯುವ ಪ್ರದೇಶದ ಗದ್ದೆಗಳಲ್ಲಿ ಮಳೆ ಕಡಿಮೆಯಾಗುವ ಆಗಸ್ಟ್‌ ತಿಂಗಳಿನಲ್ಲಿ ಭತ್ತದ ನಾಟಿ ಮಾಡುವುದು ವಾಡಿಕೆ. ಈ ಬಾರಿ ಮಳೆಯ ಪ್ರಮಾಣವೇ ಕಡಿಮೆಯಿರುವುದರಿಂದ ಈ ಗದ್ದೆಗಳಲ್ಲಿ ನಾಟಿ ನಡೆಯುವ ಸಾಧ್ಯತೆ ಕಡಿಮೆ. ಹವಾಮಾನ ವೈಪರೀತ್ಯದ ಪರಿಣಾಮ ಹಲವರು ಕೃಷಿ ಮಾಡುವ ಯೋಚನೆಯನ್ನೇ ಬಿಟ್ಟಿದ್ದಾರೆ.

ಭತ್ತದ ಕೃಷಿ ಲಾಭ ದಾಯಕವಲ್ಲ ಎಂಬ ಕಾರಣಕ್ಕೆ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ 8 ಗ್ರಾ.ಪಂ. ವ್ಯಾಪ್ತಿಯ 50ಕ್ಕೂ ಅಧಿಕ ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ಗದ್ದೆಗಳಲ್ಲಿ ಹೂಳು ತುಂಬಿ ಪಾಳು ಬಿದ್ದಿವೆ.

ಸಕಾಲದಲ್ಲಿ ಮಳೆ ಬಾರದೆ ಇನ್ಯಾವಗಲೋ ಬಂದರೆ ಏನು ಪ್ರಯೋಜನವೆಂದು ಕೃಷಿಕ ವರ್ಗ ಬೇಸರ ವ್ಯಕ್ತಪಡಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next