ಮಹಾನಗರ: ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ ಸಿಹಿ ಹಂಚಿ, ಸಂಭ್ರಮ ಪಡುವ ಸ್ಥಿತಿಯಲ್ಲಿ ಈಗ ಕಾರ್ಮಿಕರು ಯಾರೂ ಇಲ್ಲ. ಬದಲಿಗೆ, ಈ ಹಿಂದಿನಂತೆ ಮತ್ತೊಮ್ಮೆ ತಮ್ಮ ಹಕ್ಕುಗಳಿಗಾಗಿ ಬಲಿದಾನದ ಹೋರಾಟ ಮಾಡುವ ದುಃಸ್ಥಿತಿ ಬಂದಿದೆ ಎಂದು ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ನ (ಎಐಸಿಸಿಟಿಯು) ರಾಷ್ಟ್ರೀಯ ಉಪಾಧ್ಯಕ್ಷ ಶಂಕರ್ ಕಳವಳ ವ್ಯಕ್ತಪಡಿಸಿದರು.
ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ಮತ್ತು ಅಖಿಲ ಭಾರತ ಬಂದರು ಕಾರ್ಮಿಕರ ಒಕ್ಕೂಟದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಕಾಲ್ನಡಿಗೆ ರ‍್ಯಾಲಿ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶ ಸ್ವಾತಂತ್ರ್ಯ ಪಡೆದು ಆರು ದಶಕ ಕಳೆದರೂ ಕಾರ್ಮಿಕರ ಸ್ಥಿತಿ- ಗತಿ ಇನ್ನೂ ಸುಧಾರಿಸಿಲ್ಲ. ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಿದರೂ ಅದನ್ನು ಕೇಳಿಸಿಕೊಳ್ಳದ ಮಾಲಕ ವರ್ಗ ಇದ್ದ ಕಾರಣ ಕಾರ್ಮಿಕರ ಜೀವನ ಮಟ್ಟ, ದಿನದಿಂದ ದಿನಕ್ಕೆ ಕುಸಿಯುತ್ತಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿ ಬಲಿದಾನಗೊಂಡ ನಮ್ಮ ಪೂರ್ವಜರ ಹಾದಿಯನ್ನೇ ತುಳಿಯಬೇಕಾದ ಪರಿಸ್ಥಿತಿ ಈಗಿರುವುದು ನಿಜಕ್ಕೂ ದುರದೃಷ್ಟಕರ ಎಂದು ಅವರು ತಿಳಿಸಿದರು.
ಇದಕ್ಕೂ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಪುರಭವನದ ಗಾಂಧಿ ಪಾರ್ಕ್ ವರೆಗೆ ನಡೆದ ಬೃಹತ್ ರ‍್ಯಾಲಿಯಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು. ಟ್ರೇಡ್ ಯೂನಿಯನ್‌ಜಿಲ್ಲಾಧ್ಯಕ್ಷ ಸತೀಶ್ ಕುಮಾರ್, ಅಖಿಲ ಭಾರತ ಬಂದರು ಕಾರ್ಮಿಕ ಒಕ್ಕೂಟದ ಕಾರ್ಯದರ್ಶಿ ಮೋಹನ್, ನ್ಯಾಯವಾದಿ ಸರ್ಫ್ ರಾಜ್, ಭರತ್ ಹಾಜರಿದ್ದರು.
ಆಡಳಿತ ವರ್ಗದ ನಿರ್ಲಕ್ಷ್ಯ
ಅಖಿಲ ಭಾರತ ಬಂದರು ಕಾರ್ಮಿಕ ಒಕ್ಕೂಟದ ಸಂಚಾಲಕ ದಿವಾಕರ್ ಎಸ್. ಮಾತನಾಡಿ, ಬಂದರು ಕಾರ್ಮಿಕರು ಕನಿಷ್ಠ ವೇತನ, ವಿಮಾ ಸೌಲಭ್ಯ, ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿದಲ್ಲಿ ಹೆಚ್ಚುವರಿ ವೇತನ ಮೊದಲಾದ ಸೌಲಭ್ಯಗಳ ಬೇಡಿಕೆ ಮುಂದಿಟ್ಟರೂ ಅಡಳಿತ ವರ್ಗ ನಿರ್ಲಕ್ಷ್ಯ ವಹಿಸಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿ ಎರಡು ತಿಂಗಳು ಕಳೆದರೂ ಬೇಡಿಕೆ ಈಡೇರಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.