ಹೊಸದಿಲ್ಲಿ : ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯರು ಪಾಕಿಸ್ಥಾನದಿಂದ ಸ್ವಾತಂತ್ರ್ಯವನ್ನು ಆಗ್ರಹಿಸಿ ಬೀದಿಗಿಳಿದು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ್ದಾರೆ.
ಪಾಕಿಸ್ಥಾನದ ದಮನಕಾರಿ ಬಿಗಿ ಮುಷ್ಟಿಯಿಂದ ತಮಗೆ ವಿಮೋಚನೆ ಬೇಕೆಂದು ಆಗ್ರಹಿಸಿರುವ ಸ್ಥಳೀಯರು ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸಂಘಟಿಸಿದ ರಾಲಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
“ಪಾಕಿಸ್ಥಾನವು ನಮ್ಮ ಪ್ರಾಂತ್ಯಕ್ಕೆ ಭಯೋತ್ಪಾದಕರನ್ನು ಕಳುಹಿಸಿ ಇಲ್ಲಿನ ಶಾಂತಿಯುತ ವಾತಾವರಣವನ್ನು ಹದಗೆಡಿಸುತ್ತಿದೆ; ನಮ್ಮ ನೆಮ್ಮದಿಯನ್ನು ನಾಶಮಾಡುತ್ತಿದೆ’ ಎಂದು ಪ್ರತಿಭಟನಕಾರರ ನಾಯಕ ಲಿಯಾಕತ್ ಖಾನ್ ಆರೋಪಿಸಿದ್ದಾರೆ.
ಈ ಆಗಸ್ಟ್ ತಿಂಗಳ ಆದಿಯಲ್ಲಿ ಪ್ರಮುಖ ಪಿಓಕೆ ರಾಜಕಾರಣಿ ಮಿಸ್‌ಫರ್ ಖಾನ್ ಅವರು “ಪಾಕಿಸ್ಥಾನದ ಸೈನಿಕರು ಸ್ಥಳೀಯರ ಮೇಲೆ ಅಮಾನುಷ ದೌರ್ಜನ್ಯ, ಕ್ರೌರ್ಯ ನಡೆಸುತ್ತಿದೆ’ ಎಂದು ಆರೋಪಿಸಿ ಪಾಕ್ ಸರಕರವನ್ನು ತೀವ್ರವಾಗಿ ಖಂಡಿಸಿದ್ದರು.
“ಪಾಕಿಸ್ಥಾನದ ರಾಜಕೀಯ ಪಕ್ಷಗಳು ನಮ್ಮ ಪ್ರಾಂತ್ಯವನ್ನು ಲೂಟಿ ಮಾಡುತ್ತಿವೆ; ಗಿಲ್‌ಗಿಟ್ – ಬಾಲ್ಟಿಸ್ಥಾನ ಪಾಕಿಸ್ಥಾನದ ಭಾಗವೇ ಅಲ್ಲ’ ಎಂದು ಮಿಸ್‌ಫರ್ ಖಾನ್ ಟೀಕಿಸಿದ್ದರು.
ಪಾಕ್ ಸರಕಾರ ಪಿಓಕೆ ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ ಎಂದು ಪಿಓಕೆ ರಾಜಕೀಯ ಕಾರ್ಯಕರ್ತ ತೈಫೂರ್ ಅಕ್‌ಬರ್ ಖಂಡಿಸಿದ್ದರು.