Advertisement

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಲಕೇರಿಯಲ್ಲಿ ಬೃಹತ್‌ ಪ್ರತಿಭಟನೆ

03:57 PM Jul 02, 2019 | Suhan S |

ಕಲಕೇರಿ: ಗ್ರಾಮದ ಬಸ್‌ ನಿಲ್ದಾಣದ ಕಾಮಗಾರಿ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಲಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡರ ಬಣ), ಜಯ ಕರ್ನಾಟಕ ಸಂಘಟನೆ, ಕಲಕೇರಿ ಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮಾಹಿತಿ ಸೇವಾ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ನೂರಾರು ವಿದ್ಯಾರ್ಥಿಗಳ ನೇತೃತ್ವದಲ್ಲಿ ಸೋಮವಾರ ಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನ ಆವರಣದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

Advertisement

ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಪ್ರತಿ ನಿತ್ಯ ಕಲಕೇರಿಗೆ ವಿದ್ಯಾರ್ಜನೆಗಾಗಿ ಸಾವಿರಾರು ಮಕ್ಕಳು ಸುತ್ತ ಮುತ್ತಲಿನ 10-15 ಹಳ್ಳಿಗಳಿಂದ ಆಗಮಿಸುತ್ತಿದ್ದು ಅವರಿಗೆ ಶಾಲಾ ಸಮಯಕ್ಕೆ ಸರಿಯಾದ ಬಸ್‌ಗಳು ಇಲ್ಲ. ಕಲಕೇರಿ ಬಸ್‌ ನಿಲ್ದಾಣ ಕಟ್ಟಡ ಕಾಮಗಾರಿ ಸುಮಾರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಬಸ್‌ ನಿಲ್ದಾಣದಲ್ಲಿ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ಆಸನ ವ್ಯವಸ್ಥೆ, ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ಸೇರಿದಂತೆ ಮಹಿಳಾ ಪ್ರಯಾಣಿಕರು ನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದು 4 ವರ್ಷಗಳಿಂದ ನಡೆದ ಕಲಕೇರಿ ಬಸ್‌ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಕೆಲ ದಿನಗಳ ಹಿಂದೆ ನಮ್ಮ ಮತಕ್ಷೇತ್ರದ ಶಾಸಕರು ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಿದರೂ ಶಾಸಕರ ಮಾತಿಗೂ ಬೆಲೆಯಿಲ್ಲ. ಕೂಡಲೆ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಗ್ರಾಮಕ್ಕೆ ಬಸ್‌ ಬರದಂತೆ ಬಹಿಷ್ಕರಿಸಿ ಕಲಕೇರಿಯ ಎಲ್ಲ ಪ್ರಗತಿ ಪರ ಸಂಘಟನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರವೇ (ಶಿವರಾಮೇಗೌಡ ಬಣ) ಜಿಲ್ಲಾ ಉಪಾಧ್ಯಕ್ಷ ಶಿವಶಂಕರ ಸಜ್ಜನ, ಡಾ| ಈರಣ್ಣ ಗುಮಶೆಟ್ಟಿ ಮಾತನಾಡಿ, ಕಲಕೇರಿ ಬಸ್‌ ನಿಲ್ದಾಣ ಕಾಮಗಾರಿ ದಶಕಗಳ ಹಿಂದೆಯೇ ಹೋರಾಟದ ಫಲದಿಂದ ಪ್ರಾರಂಭವಾಗಿದ್ದು ಇನ್ನು ಪೂರ್ಣವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಮಹಿಳೆಯರಿಗೆ, ಶಾಲಾ ಮಕ್ಕಳಿಗೆ, ವೃದ್ಧರಿಗೆ , ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಕೆಎಸ್‌ಆರ್‌ಟಿಸಿ ಸಿಂದಗಿ ಡಿಪೋ ಮ್ಯಾನೇಜರ್‌ ಕೆ.ಎಚ್. ಮದಭಾವಿ ಹಾಗೂ ಅಭಿಯಂತರ ಜಗನ್ನಾಥ ಜೋಗಣ್ಣವರ ಮಾತನಾಡಿ, ಎರಡು-ಮೂರು ದಿನಗಳಲ್ಲಿ ಬಸ್‌ ಸೌಕರ್ಯವನ್ನು ಮಾಡಲಾಗುವುದು ಮತ್ತು ಕಲಕೇರಿ ನಿಲ್ದಾಣದ ಮೊದಲನೇ ಹಂತದ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಈ ವೇಳೆ ಶಾಂತವೀರ ದುರ್ಗಿ, ಬಿ.ಜಿ. ಚನ್ನಗೊಂಡ, ಮಹಿಬೂಮ ಮುಲ್ಲಾ, ಸುಧಾಕರ ಅಡಕಿ ಮಾತನಾಡಿದರು. ರಾಜೀವ್‌ ವಾಲೀಕಾರ, ಬಸವರಾಜ ಗುಡಿಸಲಮನಿ, ಸಲೀಂ ಪಠಾಣ, ವಿಜೇಂದ್ರ ಇರಕಲ್, ಪಾಂಡು ಭಜಂತ್ರಿ, ಮಹಾಂತೇಶ ಕಪ್ಪಡಿಮಠ, ಮಹೇಶ ಮೋಪಗಾರ, ವೀರೇಶ ದೇಸಾಯಿ, ನಿಜಾಮುದ್ದೀನ್‌ ಬಿರಾದಾರ, ವಿನಾಯಕ ಚಲವಾದಿ, ಅನಿಲ ಹರಿಜನ, ಭಾಗಣ್ಣ ಹೆಬ್ಟಾಳ, ಆಸೀಫ್‌ ವಾಲೀಕಾರ, ಅನಿಲ ತಳವಾರ, ಶಶಿಕಲಾ ನಾಟೀಕಾರ, ಸಾವಿತ್ರಿ ಹರಿಜನ, ಭಾಗ್ಯಶ್ರೀ ವಾಲೀಕಾರ, ಸಂಗೀತಾ ಚಲವಾದಿ, ದೇವಮ್ಮ ವಗ್ಗರ, ಹಾಗೂ ಕಲಕೇರಿ ಎಲ್ಲ ಪ್ರಗತಿಪರ ಸಂಘಟನೆಯ ಮುಖಂಡರು ಮತ್ತು ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಕಲಕೇರಿ ಪಿಎಸ್‌ಐ ನಾಗರಾಜ ಕಿಲಾರೆ ಬಿಗಿಬಂದೋಬಸ್ತ್ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next